Advertisement

Koteshwara ಬೈಪಾಸ್‌: ತಂಗುದಾಣ ಮಾಯ

03:55 PM Dec 05, 2024 | Team Udayavani |

ಕೋಟೇಶ್ವರ: ಕುಂದಾಪುರ ತಾಲೂಕಿನ ಮುಖ್ಯ ವ್ಯಾಪಾರ, ವ್ಯವಹಾರ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಕೇಂದ್ರವಾಗಿರುವ ಕೋಟೇಶ್ವರಕ್ಕೆ ಸಂಪರ್ಕ ಕಲ್ಪಿಸುವ ಬೈಪಾಸ್‌ ರಸ್ತೆಯಲ್ಲೇ ಬಸ್‌ ತಂಗುದಾಣವಿಲ್ಲದೆ ಭಾರೀ ಸಮಸ್ಯೆಯಾಗಿದೆ.

Advertisement

ಇಲ್ಲಿ ರಾ.ಹೆದ್ದಾರಿಯಲ್ಲಿ ಎಂಬ್ಯಾಕ್ಮೆಂಟ್‌ ರಸ್ತೆ ನಿರ್ಮಾಣವಾದ ಹಿನ್ನೆಲೆಯಲ್ಲಿ ಹಿಂದೆ ಹಾಲಾಡಿ ಜಂಕ್ಷನ್‌ ಬಳಿ ಇದ್ದ ಬಸ್‌ ತಂಗುದಾಣವನ್ನು ಕಿತ್ತು ಹಾಕಲಾಗಿದೆ. ಹೀಗಾಗಿ ನೂರಾರು ಪ್ರಯಾಣಿಕರು, ವಿದ್ಯಾರ್ಥಿಗಳು ಮಳೆಗಾಲ ಹಾಗೂ ಬೇಸಗೆಯಲ್ಲಿ ಸರ್ವಿಸ್‌ ರಸ್ತೆ ಪಕ್ಕದಲ್ಲೇ ನಿಂತು ಬಸ್‌ಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ವಿವಿಧ ಗ್ರಾಮಗಳ ಸಂಪರ್ಕ ಕೊಂಡಿ
ಕುಂದಾಪುರ, ಕೋಟೇಶ್ವರ,ಬೀಜಾಡಿ ಗೋಪಾಡಿ, ಹಾಲಾಡಿ, ವಕ್ವಾಡಿ, ಕಾಳಾವರ, ಕುಂಭಾಶಿ.. ಹೀಗೆ ಹಲವು ಗ್ರಾಮಗಳನ್ನು ಜೋಡಿಸುವ ಈ ಮುಖ್ಯ ರಸ್ತೆಯಲ್ಲಿ ಹಿಂದೆ ರೋಟರಿ ಹಾಗೂ ಚೇತನ ಸಂಸ್ಥೆ ದಾನಿಗಳ ಸಹಕಾರದಿಂದ ಬಸ್‌ ತಂಗುದಾಣ ಹಾಗೂ ಅಪಘಾತವಾಗದಂತೆ ಸುರಕ್ಷತೆಯ ನೆಲೆಯಲ್ಲಿ ಸುಗಮ ವಾಹನ ಸಂಚಾರಕ್ಕೆ ವೃತ್ತ ನಿರ್ಮಿಸಲಾಗಿತ್ತು.

ಆಗ ಕೋಟೇಶ್ವರ ಭಾಗಕ್ಕೆ ಹೋಗುವವರು ಒಳ ರಸ್ತೆಗೆ, ಕುಂದಾಪುರಕ್ಕೆ ಹೋಗುವವರು ನೇರವಾಗಿ ಸಾಗಲು ಅವಕಾಶವಿತ್ತು. ಮತ್ತು ಸರಿಯಾದ ಬಸ್‌ ನಿಲ್ದಾಣವಿತ್ತು. ಈಗ ಹೆಚ್ಚಿನ ಬಸ್‌ಗಳು ಸರ್ವಿಸ್‌ ರಸ್ತೆಯಲ್ಲೇ ಸಾಗುತ್ತವೆ. ಆದರೆ, ಬೈಪಾಸ್‌ನಲ್ಲಿ ತಂಗುದಾಣವೇ ಇಲ್ಲ.

ಹೆದ್ದಾರಿ ಅಗಲೀಕರಣದಿಂದ ಈಗ ಪಕ್ಕದ ಜಾಗ ಖಾಸಗಿಯವರ ಕೈಯಲ್ಲಿದೆ. ಹಾಗಾಗಿ ಹೆದ್ದಾರಿ ಇಲಾಖೆ ಬಸ್‌ ತಂಗುದಾಣ ನಿರ್ಮಿಸಬೇಕಾದರೂ ಖಾಸಗಿಯವರಿಂದ ಖರೀದಿ ಮಾಡಬೇಕಾಗಿದೆ.

Advertisement

ಪೇಟೆಯಲ್ಲೊಂದು ತಂಗುದಾಣ ಇದೆ
ಕೋಟೇಶ್ವರ ಪೇಟೆಯ ಮಸೀದಿ ಬಳಿ ನಾಮಾಕಾವಸ್ಥೆ ಬಸ್‌ ನಿಲ್ದಾಣವಿದೆ. ಆದರೆ ಆ ಮಾರ್ಗವಾಗಿ ಬಸ್‌ ಸಂಚಾರವೂ ವಿರಳವಾಗಿರುವುದರಿಂದ ಅದು ನಿರುಪಯೋಗಿ ಬಸ್‌ ತಂಗುದಾಣವಾಗಿದೆ. ಇಲ್ಲಿನ ಪೇಟೆಯ ಮುಖ್ಯ ರಸ್ತೆಯಲ್ಲಿ ನಿಬಿಡ ಲಘು ವಾಹನ ಹಾಗೂ ಘನವಾಹನಗಳ ಸಂಚಾರದಿಂದಾಗಿ ಬಸ್‌ ಮಾಲಕರು ಪೇಟೆಯೊಳಗೆ ಬರಲು ಹಿಂಜರಿಯುತ್ತಿದ್ದಾರೆ. ಕ್ಲಪ್ತ ಸಮಯದಲ್ಲಿ ಅವರಿಗೆ ಮುಂದಿನ ಬಸ್‌ ನಿಲ್ದಾಣಕ್ಕೆ ಸಾಗಬೇಕಾದ ಅನಿವಾರ್ಯತೆ ಇರುವುದರಿಂದ ಎಲ್ಲಾ ಖಾಸಗಿ ಬಸ್‌ಗಳು ಸರ್ವೀಸ್‌ ರಸ್ತೆಯನ್ನು ಅವಲಂಬಿಸಿದೆ. ಹಾಗೂ ಸರ್ವೀಸ್‌ ರಸ್ತೆಗಳಲ್ಲಿ ಬಸ್‌ ತಂಗುದಾಣವಿಲ್ಲದಿರುವುದು ನಿತ್ಯ ಪ್ರಯಾಣಿಕರು ನೆರಳಿಗಾಗಿ ಪರದಾಡಬೇಕಾಗಿದೆ.

ಗಣ್ಯ ವ್ಯಕ್ತಿಗಳ ಭೇಟಿಯ ತಾಣವಾಗಿತ್ತು!
ಉಡುಪಿ ಕಡೆಯಿಂದ ಕೋಟೇಶ್ವರಕ್ಕೆ ಹೋಗಬೇಕಾದವರು ಕೋಟೇಶ್ವರ ಬೈಪಾಸ್‌ ರಸ್ತೆಯಲ್ಲೇ ಇಳಿಯಬೇಕು. ನೂರಾರು ಮಂದಿ ಹೀಗೆ ಇಲ್ಲಿ ಇಳಿಯುತ್ತಾರೆ, ಬಸ್‌ ಏರುತ್ತಾರೆ. ಇಲ್ಲಿ ಕಾಲೇಜು ಕೂಡಾ ಇರುವುದರಿಂದ ಬೆಳಗ್ಗೆ ಮತ್ತು ಸಂಜೆ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿರುತ್ತದೆ. ಆದರೆ, ತಂಗುದಾಣ ಇಲ್ಲದೆ ಇರುವುದರಿಂದ ಪ್ರಯಾಣಿಕರಿಗೆ ಗೋಳಾಗಿ ಪರಿಣಮಿಸಿದೆ. ಮಳೆಗಾಲದಲ್ಲಂತೂ ಪ್ರಯಾಣಿಕರ ಪಾಡು ಹೇಳತೀರದು. ಮಹಿಳೆಯರು ವಿದ್ಯಾರ್ಥಿನಿಯರಿಗೆ ಬಹಳಷ್ಟು ಕಿರಿಕಿರಿ ಆಗುತ್ತಿದೆ.

ನೂರಾರು ವರ್ಷಗಳ ಇತಿಹಾಸ ಹೊಂದಿರುವ ಇಲ್ಲಿನ ಹಾಲಾಡಿ ಬೈಪಾಸ್‌ ಕ್ರಾಸ್‌ ರಸ್ತೆಯು ರಾಜಕೀಯ ಪ್ರಮುಖರು, ಗಣ್ಯರು, ಸಾಹಿತಿಗಳು, ಚಲನಚಿತ್ರ ನಟನಟಿಯರು ವ್ಯಾಪಾರ ವ್ಯವಹಾರಸ್ಥರ ವಿಶ್ರಾಂತಿ ತಾಣವಾಗಿತ್ತು. ಅಂದಿನ ಆ ಕಾಲಘಟ್ಟದ ದಿನಗಳಲ್ಲಿ ಹಲವಾರು ಗಣ್ಯರು ಇಲ್ಲಿನ ಬೆ„ಪಾಸ್‌ ರಸ್ತೆಯ ಬಸ್‌ ನಿಲ್ದಾಣದಲ್ಲಿ ಕುಳಿತು ದಣಿವಾರಿಸಿ ಸಾಗುವ ಪದ್ಧತಿ ಇತ್ತು. ಫ್ಲೈ ಓವರ್‌, ಸರ್ವಿಸ್‌ ರಸ್ತೆ ನಿರ್ಮಾಣ ಯೋಜನೆ ಸಹಕಾರ ಗೊಂಡಂತೆ ತೆರವು ಕಾರ್ಯದೊಡನೆ ಇಲ್ಲಿನ ಬಸ್‌ ನಿಲ್ದಾಣ ಮಾಯವಾಯಿತು.

ಹೇರಿಕುದ್ರುವಿಗೆ ಬಸ್‌ ತಂಗುದಾಣ ಬೇಕು: ಸಾರ್ವಜನಿಕರಿಂದ ಪ್ರಾಧಿಕಾರಕ್ಕೆ ಮನವಿ
ಕುಂದಾಪುರ: ಉದಯವಾಣಿ ಸುದಿನದಲ್ಲಿ ಪ್ರಕಟವಾಗುತ್ತಿರುವ ಎಲ್ಲಿದೆ ಬಸ್‌ ತಂಗುದಾಣ? ಅಭಿಯಾನಕ್ಕೆ ಪೂರಕವಾಗಿ ಸಾರ್ವಜನಿಕರು ಕೂಡ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಬಸ್‌ ತಂಗುದಾಣ ಕೊಡಿ ಎಂದು ಮನವಿ ಮಾಡುತ್ತಿದ್ದಾರೆ.

ಹೇರಿಕುದ್ರುವಿನಲ್ಲಿ ಬಸ್ಸು ನಿಲ್ದಾಣ ಬೇಕು ಎಂದು ಸ್ಥಳೀಯ ಅಭಿಜಿತ್‌ ಪೂಜಾರಿ ಅವರು ಉಡುಪಿ ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡಿದ್ದು ಸಕ್ಷಮ ಪ್ರಾಧಿಕಾರದಿಂದ ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ . ಕಳೆದ ಕೆಲವು ದಿನಗಳಿಂದ ಬಸ್ಸು ನಿಲ್ದಾಣದ ಸಮಸ್ಯೆ ಬಗ್ಗೆ ಸುದಿನ ವರದಿ ಪ್ರಕಟಿಸುತ್ತಿದೆ. ಹೇರಿಕುದ್ರುವಿನಲ್ಲಿ ಕೂಡಾ, ಮಳೆಗಾಲದಲ್ಲಿ ಗಾಳಿಯ ರಭಸಕ್ಕೆ ಬಸ್ಸಿಗಾಗಿ ಕಾಯುವವರ ಸ್ಥಿತಿ ಶೋಚನೀಯವಾಗಿದೆ. ಮುಂದಿನ ಮಳೆಗಾಲದ ಒಳಗೆ ಶಾಶ್ವತ ಬಸ್ಸು ನಿಲ್ದಾಣ ಆದರೆ ಅನುಕೂಲ. ಹೇರಿಕುದ್ರು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಮೊಕ್ತೇಸರರ ನೇತೃತ್ವದಲ್ಲಿ ತಾತ್ಕಾಲಿಕ ಶೆಡ್‌ ಹಾಕಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗಿದೆ. ಇದು ಬೇಸಗೆ ಕಾಲದಲ್ಲಿ ಅನುಕೂಲ ಆಗುತ್ತದೆ. ಆದರೆ ಮಳೆಗಾಲದಲ್ಲಿ ಜೀವವನ್ನು ಕೈಯಲ್ಲಿ ಇಟ್ಟುಕೊಂಡು ತಂಗುದಾಣದಲ್ಲಿ ನಿಲ್ಲಬೇಕಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಬಸ್‌ ತಂಗುದಾಣ ಬೇಕು
ರಾ.ಹೆದ್ದಾರಿಯ ಅಗಲೀಕರಣ ಹಾಗೂ ಫ್ಲೈ ಓವರ್‌ ನಿರ್ಮಾಣದಿಂದಾಗಿ ಇಲ್ಲಿನ ಬೆ„ಪಾಸ್‌ ಬಳಿ ಇದ್ದ ಬಸ್‌ ತಂಗುದಾಣವನ್ನು ತೆರವುಗೊಳಿಸಲಾಗಿತ್ತು. ಈ ಭಾಗದಲ್ಲಿ ಬಸ್‌ ನಿಲ್ದಾಣದ ಅನಿವಾರ್ಯತೆ ಇದೆ. ಗ್ರಾ.ಪಂ. ಹಾಗೂ ಇಲಾಖೆ ಕೈಜೋಡಿಸುವುದು ಸೂಕ್ತ.
– ಸುಧೀರ್‌ ಕುಮಾರ್‌ ಶೆಟ್ಟಿ, ಮಾರ್ಕೋಡು, ಸ್ಥಳೀಯರು

ಸ್ಥಳದಾನ ಮಾಡಿದರೆ ಅನುಕೂಲ
ಸೂಕ್ತ ಜಾಗದ ಕೊರತೆಯಿರುವುದರಿಂದ ಸರ್ವೀಸ್‌ ರಸ್ತೆಯಲ್ಲಿ ಬಸ್‌ ತಂಗುದಾಣ ನಿರ್ಮಿಸಲು ಅನಾನುಕೂಲವಾಗಿದೆ. ಸ್ಥಳ ದಾನ ಮಾಡಿದಲ್ಲಿ ಆ ಬಗ್ಗೆ ಕ್ರಮ ಕೈಗೊಳ್ಳಬಹುದು.
-ರಾಗಿಣಿ ದೇವಾಡಿಗ, ಅಧ್ಯಕ್ಷರು,ಕೋಟೇಶ್ವರ ಗ್ರಾ.ಪಂ.

-ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next