Advertisement

ನಗರಾಡಳಿತ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ: ತಡೆಯಾಜ್ಞೆ ತೆರವಿಗೆ ಕೋಟ ಆಗ್ರಹ

10:42 AM Jun 03, 2019 | keerthan |

ಮಂಗಳೂರು: ರಾಜ್ಯದ ಆನೇಕಲ್‌, ಹೆಬ್ಬಗೋಳು, ಅತ್ತಿಬೆಲೆ, ಗುಬ್ಬಿ, ಧಾರವಾಡ, ರಾಯಬಾಗ್‌ನ ನಗರಾಡಳಿತ ಸಂಸ್ಥೆಗಳಲ್ಲಿ ಮೀಸಲಾತಿ ಪಟ್ಟಿಗೆ ಇರುವ ನ್ಯಾಯಾಲಯದ ತಡೆಯನ್ನು ತೆರವುಗೊಳಿಸಲು ರಾಜ್ಯ ಸರಕಾರ ಕೂಡಲೇ ಕಾರ್ಯಪ್ರವೃತ್ತವಾಗಿ ರಾಜ್ಯದಲ್ಲಿ 8 ತಿಂಗಳ ಹಿಂದೆ ಚುನಾವಣೆ ನಡೆದ 109 ಹಾಗೂ ಇತ್ತೀಚೆಗೆ ಚುನಾವಣೆ ನಡೆದ 63 ನಗರಾಡಳಿತ ಸಂಸ್ಥೆಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಅನುವು ಮಾಡಿಕೊಡಬೇಕು ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.

Advertisement

ರವಿವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದ ಪೌರಾಡಳಿತ ಸಂಸ್ಥೆಗಳು ಅತಂತ್ರವಾಗಿವೆ. ಸ್ಥಳೀಯ ಆಡ‌ಳಿತಗಳಿಗೆ ಸ್ವತಂತ್ರ ಆಡಳಿತ ಅವಕಾಶ ಕಲ್ಪಿಸುವುದಾಗಿ ಹೇಳುತ್ತಿರುವ ಸರಕಾರಗಳೇ ರಾಜಕೀಯ ಪ್ರವೇಶಕ್ಕೆ ಆಸ್ಪದ ನೀಡುತ್ತಿವೆ.

ಇದರ ಪರಿಣಾಮ ಚುನಾವಣೆ ನಡೆದ ಬಳಿಕ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯದೆ ಅಧಿ ಕಾರಿಗಳೇ ಆಡಳಿತ ನಡೆಸುವಂತಾಗಿದೆ ಎಂದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕುರ್ಚಿ ಉಳಿಸಿಕೊಳ್ಳುವುದರಲ್ಲೇ ಬ್ಯುಸಿಯಾಗಿದ್ದು, ಅವರಿಗೆ 109 ನಗರಾಡಳಿತಗಳ ಆಡಳಿತ ಬೇಕಾಗಿಲ್ಲ ಎಂಬಂತೆ ತೋರುತ್ತಿದೆ ಎಂದು ಟೀಕಿಸಿದ ಅವರು, ಚುನಾವಣೆ ನಡೆದ ಎಲ್ಲ ನಗರಾಡಳಿತ ಸಂಸ್ಥೆಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಕೂಡಲೇ ನಡೆಯ ಬೇಕು. ಇದನ್ನು ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸದಿದ್ದರೆ ಬಿಜೆಪಿ ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಎಂದರು.

ಕರಾವಳಿಗೆ 1,000 ಕೋ.ರೂ. ಬೇಕು
ಕರಾವಳಿ ಭಾಗದ ಜಿಲ್ಲೆಗಳಲ್ಲಿ ಭೀಕರ ಬರಗಾಲ ಆವರಿಸಿದ್ದು, ಈ ಹಿನ್ನೆಲೆಯಲ್ಲಿ ಕುಡಿಯುವ ನೀರು ಯೋಜನೆಗಳಿಗೆ 1000 ಕೋಟಿ ರೂ. ಬಿಡುಗಡೆ ಮಾಡುವಂತೆ ರಾಜ್ಯ ಸರಕಾರವನ್ನು ಆಗ್ರಹಿಸಲಾಗಿದೆ. ಆದರೆ ಬಜೆಟ್‌ನಲ್ಲಿ 200 ಕೋಟಿ ರೂ. ಮಾತ್ರ ಮೀಸಲಿಟ್ಟಿದೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿಗಳು ಕರಾವಳಿಯ ಹಿತಾಸಕ್ತಿಯನ್ನು ಅವಗಣಿಸಿದ್ದಾರೆ ಎಂದು ಶ್ರೀನಿವಾಸ ಪೂಜಾರಿ ಟೀಕಿಸಿದರು.

ಕರಾವಳಿ ಜನತೆಗೆ ಬುದ್ಧಿಇಲ್ಲ ಎಂದು ಈ ಹಿಂದೆ ಹೇಳಿಕೆ ನೀಡಿದ್ದ ಮುಖ್ಯಮಂತ್ರಿಗಳು ಈಗ ಬರದ ವಿಚಾರದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳನ್ನು ಕರೆಸಿ ಚರ್ಚೆ ನಡೆಸುವ ಗೋಜಿಗೆ ಹೋಗಿಲ್ಲ. ಸಮುದ್ರ ನೀರು ಶುದ್ಧೀಕರಿಸುವ ಯೋಜನೆ ಜಾರಿಗೆ ಬಿಜೆಪಿ ಒತ್ತಾಯಿಸಿದರೂ ಸರಕಾರ ಸ್ಪಂದಿಸುತ್ತಿಲ್ಲ. ಅವೈಜ್ಞಾನಿಕವಾದ ಎತ್ತಿನಹೊಳೆ ಯೋಜನೆಯನ್ನು ಜಾರಿಗೊಳಿಸಲು ಆಸಕ್ತಿ ತೋರಿಸುತ್ತಿರುವ ಸರಕಾರ ಕರಾವಳಿಯಲ್ಲಿ ನೀರಿನ ಬವಣೆ ಹೋಗಲಾಡಿಸಲು ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.

Advertisement

ಜಿಂದಾಲ್‌ಗೆ ಪುಡಿಗಾಸಿಗೆ 3,666 ಎಕರೆ ಭೂಮಿ ನೀಡುವುದು ಸರಿಯಲ್ಲ
ಜಿಂದಾಲ್‌ ಕಂಪೆನಿಗೆ ಪುಡಿಗಾಸಿಗೆ 3,666 ಎಕರೆಯಷ್ಟು ಕೋಟ್ಯಂತರ ರೂ. ಬೆಲೆಬಾಳುವ ಭೂಮಿಯನ್ನು ಪರಭಾರೆ ಮಾಡಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದ್ದು, ಇದು ಸರಿಯಲ್ಲ. ತೀರ್ಮಾನವನ್ನು ಕೂಡಲೇ ಕೈಬಿಡಬೇಕು ಎಂದರು.

ಜೂ. 5ರಂದು ಬಿಜೆಪಿ ಶಾಸಕಾಂಗ ಸಭೆ
13,000 ಕೋಟಿ ರೂ.ಗಳಲ್ಲಿ ಎತ್ತಿನಹೊಳೆ ಯೋಜನೆಯನ್ನು ಕೈಗೆತ್ತಿ ಕೊಂಡಿರುವ ಸರಕಾರ, ಅದರ ಗುತ್ತಿಗೆದಾರರಿಗೆ ಮೊತ್ತ ಪಾವತಿಸುವ ಲೆಕ್ಕಾಚಾರದಲ್ಲಿ ಇದೆ. ಹಾಸನದಲ್ಲಿ ಸಚಿವ ರೇವಣ್ಣ ಅವರು ಕೈಗೊಂಡ ನೀರಾವರಿ ಸಹಿತ ಎಲ್ಲ ಯೋಜನೆಗಳಲ್ಲಿ ಕಾಮಗಾರಿ ನಡೆಸದೆ ಬಿಲ್‌ ಪಾವತಿಸಲಾಗಿದೆ ಎಂದು ಕಾಂಗ್ರೆಸ್‌ ಮುಖಂಡರೇ ಆರೋಪಿಸಿದ್ದಾರೆ. ಈ ಎಲ್ಲ ವಿಷಯಗಳ ಕುರಿತು ಜೂ.5ರಂದು ಬೆಂಗಳೂರಿನಲ್ಲಿ ನಡೆಯುವ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಯಡಿಯೂರಪ್ಪ ಅವರು ಚರ್ಚೆ ನಡೆಸಲಿದ್ದಾರೆ. ಸರಕಾರದ ವೈಫಲ್ಯಗಳ ವಿರುದ್ಧ ಅಧಿವೇಶದಲ್ಲಿ ಹೋರಾಟ ನಡೆಸಲು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next