Advertisement

ಮೂರು ವರ್ಷಗಳಲ್ಲಿ ಒಳನಾಡು ಮೀನುಗಾರಿಕೆ ನಂ. 1 ಸ್ಥಾನಕ್ಕೆ ತರುವುದೇ ಸರಕಾರದ ಆಶಯ

02:52 PM Oct 12, 2020 | sudhir |

ಬೆಳ್ತಂಗಡಿ: ಮತ್ಸ್ಯ ಸಂಪನ್ಮೂಲ ಅಭಿವೃದ್ಧಿಗೆ ಸರಕಾರ ನಾನಾ ಯೋಜನೆಗಳನ್ನು ಹಾಕಿಕೊಂಡಿದೆ. ಒಳನಾಡು ಮೀನುಗಾರಿಕೆಯಲ್ಲಿ ರಾಜ್ಯ 9ನೇ ಸ್ಥಾನದಲ್ಲಿದೆ. ಒಂದನೇ ಸ್ಥಾನಕ್ಕೇರಿಸುವ ಸಲುವಾಗಿ ಉಳ್ಳಾಲದಿಂದ ಸೋಮೇಶ್ವರದ ವರೆಗೆ 120 ಕಿ.ಮೀ. ಸಮುದ್ರ ಕಿನಾರೆ ಹಾಗೂ ಒಳನಾಡು ಪ್ರದೇಶದಲ್ಲಿ ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ಸರಕಾರ ವಿಶೇಷ ಯೋಜನೆ ಹಮ್ಮಿಕೊಂಡಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಹಾಗೂ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತೋ ದ್ಯಾನದಲ್ಲಿ ನೂತನ ಮತ್ಸ್ಯ ಪ್ರದರ್ಶನಾ ಲಯವನ್ನು ರವಿವಾರ ಉದ್ಘಾಟಿಸಿ ಬಳಿಕ ಪ್ರವಚನ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಒಳನಾಡು ಮೀನುಗಾರಿಕೆಯಲ್ಲಿ ರಾಜ್ಯವು 9ನೇ ಸ್ಥಾನದಲ್ಲಿದ್ದರೆ ಕಡಲು ಮೀನುಗಾರಿಕೆಯಲ್ಲಿ 4ನೇ ಸ್ಥಾನದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮನಿರ್ಭರ ಯೋಜನೆಯಡಿ ಮೀನುಗಾರಿಕಾ ಕ್ಷೇತ್ರಕ್ಕೆ 20 ಸಾವಿರ ಕೋ.ರೂ. ಮೀಸಲಿಟ್ಟಿದ್ದಾರೆ. ಇದರಿಂದ ರಾಜ್ಯಕ್ಕೆ 3,500 ಕೋ.ರೂ. ಅನುದಾನ ಲಭ್ಯವಾಗಲಿದ್ದು, ಮತ್ಸ್ಯ ಸಂಪತ್ತು ಯೋಜನೆಯಡಿ ಒಳನಾಡು ಹಾಗೂ ಆಲಂಕಾರಿಕ ಮೀನು ಉತ್ಪಾದನೆಗೆ ಮಹತ್ವ ನೀಡಿ ಮೂರು ವರ್ಷಗಳಲ್ಲಿ ನಂ. 1 ಸ್ಥಾನಕ್ಕೆ ತರುವುದೇ ಸರಕಾರದ ಆಶಯ ಎಂದರು.

ಇದನ್ನೂ ಓದಿ:ಡೋಣಿ ನದಿ ಪ್ರವಾಹ: ಮುನ್ನೆಚ್ಚರಿಕೆ ಕ್ರಮಕ್ಕೆ ಎಂ.ಬಿ.ಪಾಟೀಲ ಸೂಚನೆ

ಅತೀ ಪುಟ್ಟ ದೇಶ ಸಿಂಗಾಪುರ ಪ್ರಪಂಚದಲ್ಲಿ ವಾರ್ಷಿಕ 40ರಿಂದ 50 ದಶಲಕ್ಷ ಡಾಲರ್‌ ಮೌಲ್ಯದ ಮೀನು ರಫ್ತು ಮಾಡುತ್ತಿದೆ. ಆದರೆ ಜಾಗತಿಕವಾಗಿ ಭಾರತದ ಪಾಲು ಕೇವಲ ಶೇ. 1ರಷ್ಟಿದೆ. ಈ ನಿಟ್ಟಿನಲ್ಲಿ ಯುವಕರಿಗೆ ಉದ್ಯೋಗ ಸೃಷ್ಟಿಸುವ ಜತೆಗೆ ಲಾಭದಾಯಕ ಉದ್ಯಮವಾಗಿಸಲು ಆಲಂಕಾರಿಕ ಮೀನು ಮರಿ ಉತ್ಪಾದನೆ ಜತೆಗೆ ಲಾಭದಾಯಕವಾಗಿಸಲು ಸರಕಾರದಿಂದ ತರಬೇತಿ ನೀಡಲು ಚಿಂತಿಸಲಾಗುವುದು ಎಂದು ಹೇಳಿದರು.

Advertisement

ಕಡಲ ಮೀನುಗಾರಿಕೆಯಡಿ ಮರಿ ಮೀನು ಉತ್ಪಾದನೆಗೆ ಮೂಲ್ಕಿಯಲ್ಲಿ ಹೊಸ ಯೋಜನೆ ರೂಪಿಸಲಾಗಿದೆ. ಈ ಹಿಂದೆ ಕೇರಳ, ಗೋವಾದಿಂದ ತರಿಸಲಾಗುತ್ತಿತ್ತು. ಸಾಗಾಟ ಹೊರೆ ತಪ್ಪಿಸುವ ಸಲುವಾಗಿ ಕಡಲ ಮೀನುಗಾರಿಕೆ ಉತ್ಪಾದನೆಗೆ ಹೊಸ ರೂಪ ತರಲಾಗುವುದು ಎಂದರು.

ಇದನ್ನೂ ಓದಿ:ನಾನು ಲೋಕಸಭಾ ಉಪಚುನಾವಣೆಗೆ ಸ್ಪರ್ದಿಸಲ್ಲ: ರಮೇಶ್ ಜಾರಕಿಹೊಳಿ ಪುತ್ರನ ಸ್ಪಷ್ಟನೆ

ಸದ್ಯದಲ್ಲೇ ಹಳೆಯ ವಿಗ್ರಹ ಪ್ರದರ್ಶನಾಲಯ ಸಿದ್ಧ
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ಮೀನು ಸಾಕಣೆಯೆಂದರೆ ಮಕ್ಕಳನ್ನು ಆರೈಕೆ ಮಾಡಿದಂತೆ. ಜನರಲ್ಲಿ ಮತ್ಸ್ಯ ಸಂಗ್ರಹ ಕಲ್ಪನೆ ಹವ್ಯಾಸವಾಗಿ ಬೆಳೆಯಬೇಕಿದೆ. ಇದಕ್ಕಾಗಿ ನಗರ ಪ್ರದೇಶಗಳ ಎಲ್ಲೆಡೆ ಮತ್ಸ್ಯಗಾರವನ್ನು ನಿರ್ಮಿಸುವಂತೆ ಸಚಿವರಲ್ಲಿ ಮನವಿ ಮಾಡಿದರು. ಧರ್ಮಸ್ಥಳದಲ್ಲಿ ಮೂರು ತಿಂಗಳ ಒಳಗಾಗಿ ಹಳೇ ವಿಗ್ರಹಗಳ ಪ್ರದರ್ಶನಾಲಯ ಸಿದ್ಧಗೊಳ್ಳಲಿದೆ ಎಂದರು.

ಲಲಿತೋದ್ಯಾನಕ್ಕೆ ವಿಶೇಷ ಮೀನುಗಳ ಕೊಡುಗೆ ಹಾಗೂ ಉಚಿತ ಆಹಾರ ಒದಗಿಸುತ್ತಿರುವ ಚೇತನ್‌ ಬೆಂಗಳೂರು, ಪ್ರದೀಪ್‌ ಬೆಂಗಳೂರು, ಮೀನಿನ ಆರೈಕೆ ಮಾಡುತ್ತಿರುವ ಹಂಝ ಅವರನ್ನು ಡಾ| ಹೆಗ್ಗಡೆ ಗೌರವಿಸಿದರು.

ಶಾಸಕ ಹರೀಶ್‌ ಪೂಂಜ, ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌, ಜಿ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷೆ ಮಮತಾ ಎಂ. ಶೆಟ್ಟಿ, ಶ್ರೀ ಧ. ಶಾಂತಿವನ ಟ್ರಸ್ಟ್‌ ಕಾರ್ಯದರ್ಶಿ ಸೀತಾರಾಮ ತೋಳ್ಪಡಿತ್ತಾಯ, ಎ. ವೀರು ಶೆಟ್ಟಿ ಉಪಸ್ಥಿತರಿದ್ದರು.
ಧರ್ಮಸ್ಥಳದ ಡಿ. ಹರ್ಷೆಂದ್ರ ಕುಮಾರ್‌ ಅವರು ಸ್ವಾಗತಿಸಿ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ ಅವರು ವಂದಿಸಿದರು. ಉಪನ್ಯಾಸಕ ದೀಕ್ಷಿತ್‌ ರೈ ಅವರು ಕಾರ್ಯ ಕ್ರಮ ನಿರೂಪಿಸಿದರು.

ಸರಕಾರಕ್ಕೆ ಧರ್ಮಸ್ಥಳದ ಪ್ರೇರಣೆ
ಕೋವಿಡ್‌ ಸಂದರ್ಭ ಮೀನುಗಾರಿಕಾ ನಿರುದ್ಯೋಗಿಗಳಾಗಿರುವವರಿಗೆ ಸರಕಾರದಿಂದ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಪಂಜರ ಮೀನುಗಾರಿಕೆ ಅನುಷ್ಠಾನಕ್ಕೆ ತರಲಾಗಿದೆ. ಗ್ರಾಮಗಳ ಅಭಿವೃದ್ಧಿಗೆ ಡಾ| ಹೆಗ್ಗಡೆ ಅವರು ಹಮ್ಮಿಕೊಳ್ಳುವ ಯೋಜನೆ ಸರಕಾರದ ಯೋಜನೆಗಳಿಗಿಂತ ಭಿನ್ನವಾದುದು. ಧರ್ಮಸ್ಥಳದಲ್ಲಿ ಮತ್ಸಾಲಯ ಉದ್ಘಾಟಿಸುವ ಮೂಲಕ ಸರಕಾರದಿಂದ ಆಲಂಕಾರಿಕ ಮೀನು ಉತ್ಪಾದನೆಯೆಡೆಗೆ ಚಿಂತಿಸಲು ಪ್ರೇರಣೆಯಾಗಿದೆ.
– ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next