ಕುಂದಾಪುರ : ಮುಂದಿನ ದಿನಗಳಲ್ಲಿ ದೇಶ ಒಡೆಯುವವರು, ಭಯೋತ್ಪಾದಕರನ್ನು ಬೆಂಬಲಿಸುವವರು ಹಾಗೂ ರಾಷ್ಟ್ರಭಕ್ತರ ಮಧ್ಯೆ ಚುನಾವಣೆ ನಡೆಯಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಸೋಮವಾರ ಇಲ್ಲಿನ ಟಿ.ಟಿ. ರೋಡ್‌ನ ನೂತನ ಹಾಸ್ಟೆಲ್‌ಗೆ ಭೇಟಿ ನೀಡಿದ ಸಂದರ್ಭ ಮಾಧ್ಯಮದ ಜತೆ ಮಾತನಾಡಿದರು.
ಕಾಂಗ್ರೆಸ್‌ನ ಶೇ. 40 ಕಮಿಷನ್ ಆರೋಪ, ಪೇಸಿಎಂ ಅಭಿಯಾನ ಕುರಿತು ಕೇಳಿದಾಗ, ವಾಸ್ತವದಲ್ಲಿ ಅಂತಹ ಯಾವುದೇ ಭ್ರಷ್ಟಾಚಾರದ ಆರೋಪಗಳೇ ಇಲ್ಲ. ಆರೋಪಿಸುವವರ ಬಳಿ ದಾಖಲೆಯೇ ಇಲ್ಲ. ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಇಂತಹ ಅಭಿಯಾನ ನಡೆಸುತ್ತಿದೆ. ಹಾಗೊಂದು ವೇಳೆ ದಾಖಲೆಗಳಿದ್ದರೆ ವಿಧಾನಸಭಾ ಅಧಿವೇಶನದಲ್ಲೇ ನೀಡಬಹುದಿತ್ತು. ಅಲ್ಲಿ ದಾಖಲೆ ನೀಡದ ಕಾಂಗ್ರೆಸ್ ಕೇವಲ ಭಿತ್ತಿಫಲಕ ಹಿಡಿದು ಕೂತಿತ್ತು. ಲೋಕಾಯುಕ್ತದಲ್ಲೂ ದೂರು ನೀಡಲು ಅವಕಾಶ ಇದೆ. ಲೋಕಾಯುಕ್ತವನ್ನು ದುರ್ಬಲಗೊಳಿಸಿ ಎಸಿಬಿಯನ್ನು ಜಾರಿಗೆ ತಂದ ಕಾಂಗ್ರೆಸ್ ಭ್ರಷ್ಟಾಚಾರ ಎಸಗಿರುವುದು. ನ್ಯಾಯಾಲಯದ ಸೂಚನೆಯಂತೆ ಎಸಿಬಿ ರದ್ದಾಗಿದ್ದು ಲೋಕಾಯುಕ್ತವನ್ನು ಬಲಯುತಗೊಳಿಸಲಾಗಿದೆ. ದಾಳಿಗಳು ನಡೆಯುತ್ತಿವೆ. ಕಾಂಗ್ರೆಸ್ ದಾಖಲೆಗಳಿದ್ದರೆ ಅಲ್ಲೇ ದೂರು ನೀಡಲಿ ಎಂದರು.
ತೇಜೋವಧೆ ತಪ್ಪು
ಪೇಸಿಎಂ ಅಭಿಯಾನ ಶಾಸಕರ ಹಂತದಲ್ಲೂ ನಡೆಸಲು ಮುಂದಾಗಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ವೈಯಕ್ತಿಕ ತೇಜೋವಧೆ ಅರ್ಥಹೀನ ಎಂದರು. ಎನ್‌ಐಎ ದಾಳಿ ಕುರಿತು, ದೇಶದ ಪ್ರಧಾನಿಯನ್ನೇ ಹತ್ಯೆ ಮಾಡುವ ಸಂಚು ರೂಪಿಸಿದ ಸಂಘಟನೆ ಮೇಲೆ ದಾಳಿ ನಡೆಸಿದಾಗ ಯಾವುದೇ ಕಾಂಗ್ರೆಸ್ ನಾಯಕರು ತುಟಿ ಬಿಚ್ಚಲಿಲ್ಲ. ಶ್ಲಾಘನೆಯನ್ನೂ ಮಾಡಲಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ದೇಶ ಒಡೆಯುವ, ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವವರು ಹಾಗೂ ರಾಷ್ಟ್ರಭಕ್ತರ ಮಧ್ಯೆಯೇ ಚುನಾವಣೆಗಳು ನಡೆಯ ಲಿವೆ. ಅಂತಹ ಸಂಘಟನೆಗಳನ್ನು ನಿಷೇಧಿಸಿದರೆ ಅದು ಇನ್ನೊಂದು ರೂಪದಲ್ಲಿ ಬರುತ್ತದೆ ಎನ್ನುವುದು ಕಾಂಗ್ರೆಸ್‌ನವರಿಗೂ ಗೊತ್ತಿದೆ ಎಂದರು.
ಭಾರತ್ ಜೋಡೋ ಅಭಿಯಾನ ರಾಜ್ಯದಲ್ಲಿ ಯಶಸ್ಸಾಗುವುದಿಲ್ಲ. ಬೇರೆ ಯಾವುದೇ ರಾಜ್ಯದಲ್ಲಿ ಅವರಿಗೆ ಬೆಂಬಲ ದೊರೆಯುತ್ತಿಲ್ಲ. ಕರ್ನಾಟಕದಲ್ಲಿ ಅವರದ್ದೇ ಪಕ್ಷದವರ ಬೆಂಬಲ ದೊರೆಯುತ್ತದೆಯೇ ಎನ್ನುವುದೂ ಅನುಮಾನ ಎಂದರು.
ಇದನ್ನೂ ಓದಿ : ಜೈಲಿನಿಂದ ಉಕ್ರೇನ್ ಸೈನಿಕನ ಬಿಡುಗಡೆ: ರಷ್ಯಾದ ಕ್ರೂರತೆಗೆ ಸಾಕ್ಷಿಯಾಯಿತು ಭೀಕರ ಫೋಟೋ