ಮಂಗಳೂರು : ಕೊರೊನಾ ಸೋಂಕಿತರಿಗೆ ಸರಕಾರದ ಮಾರ್ಗಸೂಚಿ ಅನ್ವಯ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಯು ಶೇ. 75ರಷ್ಟು ಬೆಡ್‌ಗಳನ್ನು ಮೀಸಲಿಡಬೇಕು. ಸರಕಾರಿ ಆಸ್ಪತ್ರೆಯಿಂದ ಶಿಫಾರಸು ಮಾಡುವ ಕೊರೊನಾ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಿ ಸೋಂಕಿತರು ಶೀಘ್ರ ಗುಣಮುಖರಾಗುವಂತೆ ನೋಡಿಕೊಳ್ಳಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದರು.
ನಗರದ ಎ.ಜೆ. ಆಸ್ಪತ್ರೆ ವೈದ್ಯಕೀಯ ಸಂಸ್ಥೆಯ ಸಭಾಂಗಣದಲ್ಲಿ ಕೋವಿಡ್ ರೋಗಿಗಳಿಗೆ ವೈದ್ಯಕೀಯ ಸಂಸ್ಥೆಗಳು ಚಿಕಿತ್ಸೆ ನೀಡುವ ಕುರಿತಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಯುಷ್ಮಾನ್ ಆರೋಗ್ಯ ಕರ್ನಾಟಕದ ಯೋಜನೆಯಡಿ ಚಿಕಿತ್ಸೆಗೆ ಬರುವ ಕೊರೊನಾ ರೋಗಿಗಳಿಗೆ ತಪ್ಪದೇ ಚಿಕಿತ್ಸೆ ನೀಡಬೇಕು. ಇವರಿಗೆ ಸಹಕರಿಸಲು ಎರಡು ಜನ ಆರೋಗ್ಯ ಮಿತ್ರರನ್ನು ನೇಮಕ ಮಾಡಲಾಗಿದ್ದು, ಆರೋಗ್ಯಮಿತ್ರರು ಕೊರೊನಾ ಚಿಕಿತ್ಸೆಗೆ ಬರುವ ಅರ್ಹ ಆಯುಷ್ಮಾನ್ ಆರೋಗ್ಯ ಕರ್ನಾಟಕ ಫಲಾನುಭವಿಗಳಿಗೆ ಸಹಕರಿಸಬೇಕು ಎಂದು ತಿಳಿಸಿದರು.
ಇದನ್ನೂ ಓದಿ :50 ಆಮ್ಲಜನಕ ಸಹಿತ ಬೆಡ್ ವ್ಯವಸ್ಥೆ: ಶಾಸಕ ಕುಮಾರ ಬಂಗಾರಪ್ಪ
ಜಿಲ್ಲಾಧಿಕಾರಿ ಡಾ| ರಾಜೇಂದ್ರ. ಕೆ.ವಿ., ಶಾಸಕ ಡಾ| ಭರತ್ ಶೆಟ್ಟಿ ವೈ, ಜಿ. ಪಂ. ಸಿಇಒ ಡಾ|ಕುಮಾರ್, ಎ.ಸಿ. ಮದನ್‌ಮೋಹನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಕಿಶೋರ್ ಉಪಸ್ಥಿತರಿದ್ದರು.
ಹೆಚ್ಚಿನ ದರ ಪಡೆದರೆ ಆಸ್ಪತ್ರೆಯಿಂದ ಮರುಪಾವತಿ
ಕೊರೊನಾ ಸೋಂಕಿತರ ವಿವಿಧ ಪರೀಕ್ಷೆಗಳು ಹಾಗೂ ಚಿಕಿತ್ಸೆಯ ವೆಚ್ಚವನ್ನು ಪಡೆಯುವಾಗ ಸರಕಾರ ನಿಗದಿಪಡಿಸಿರುವ ದರವನ್ನು ಮಾತ್ರ ಪಡೆಯಬೇಕು. ಹೆಚ್ಚಿನ ಮೊತ್ತವನ್ನು ಪಡೆದಿದ್ದಾರೆ ಎಂಬ ದೂರುಗಳಿದ್ದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಯವರಿಗೆ ಸಾರ್ವಜನಿಕರು ಮಾಹಿತಿ ನೀಡಬಹುದು. ಬಳಿಕ ಹೆಚ್ಚುವರಿ ಹಣವನ್ನು ಆಸ್ಪತ್ರೆಯಿಂದ ಮರುಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೋಟ ತಿಳಿಸಿದ್ದಾರೆ.