Advertisement

ಮಕ್ಕಳ ಸಾವು : ಆರೋಗ್ಯ ವ್ಯವಸ್ಥೆಯ ವೈಫ‌ಲ್ಯ

02:36 AM Jan 07, 2020 | Hari Prasad |

ಒಂದಿಲ್ಲೊಂದು ರಾಜ್ಯದಲ್ಲಿ ಮಕ್ಕಳ ಸಾವು ಸಂಭವಿಸುತ್ತಿದ್ದರೂ ನಮ್ಮ ವ್ಯವಸ್ಥೆ ಇದನ್ನು ಗಂಭೀರವಾಗಿ ಪರಿಗಣಿಸದಿರುವುದು ದುರದೃಷ್ಟಕರ.

Advertisement

ರಾಜಸ್ಥಾನದ ಕೋಟಾದಲ್ಲಿರುವ ಜೆ.ಕೆ.ಲೋನ್‌ ಸರಕಾರಿ ಆಸ್ಪತ್ರೆಯಲ್ಲಿ ನೂರಕ್ಕೂ ಹೆಚ್ಚಿನ ನವಜಾತ ಶಿಶುಗಳು ತಿಂಗಳೊಂದರಲ್ಲೇ ಸಾವನ್ನಪ್ಪಿರುವುದು ದೇಶದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕೈಗನ್ನಡಿ ಹಿಡಿದಿದೆ. ಕೋಟಾದ ಬೆನ್ನಿಗೆ ಗುಜರಾತ್‌ನ ರಾಜ್‌ ಕೋಟ್‌ನಲ್ಲಿರುವ ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಸಾರ್ವಜನಿಕ ಆಸ್ಪತ್ರೆಯಲ್ಲೂ ಡಿಸೆಂಬರ್‌ ತಿಂಗಳಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿರುವುದು ಬಯಲಾಗಿದೆ.

ಕಳೆದ ವರ್ಷ ಬಿಹಾರದಲ್ಲಿ ಮಿದುಳು ಜ್ವರ ರೋಗಕ್ಕೆ 150ಕ್ಕೂ ಹೆಚ್ಚು ಮಕ್ಕಳು ಬಲಿಯಾಗಿದ್ದರು. 2017ರಲ್ಲಿ ಉತ್ತರ ಪ್ರದೇಶದ ಗೋರಖಪುರದಲ್ಲಿರುವ ಬಿ.ಆರ್‌.ಡಿ. ಆಸ್ಪತ್ರೆಯಲ್ಲಿ ಸುಮಾರು 70 ಮಕ್ಕಳು ಆಕ್ಸಿಜನ್‌ ಸಿಲಿಂಡರ್‌ ಕೊರತೆಯಿಂದಾಗಿ ಸಾವಿಗೀಡಾದದ್ದು ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು. ರಾಜಕೀಯ ಕಾರಣಕ್ಕಾಗಿ ಈ ಸಾವುಗಳನ್ನು ನೆಪವಾಗಿಟ್ಟುಕೊಂಡು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಸಾಕಷ್ಟು ವಾಗ್ಯುದ್ಧವೂ ನಡೆದಿತ್ತು. ಹೀಗೆ ಪ್ರತಿ ವರ್ಷ ಒಂದಿಲ್ಲೊಂದು ರಾಜ್ಯದಲ್ಲಿ ಮಕ್ಕಳ ಸಾವು ಸಂಭವಿಸುತ್ತಿದ್ದರೂ ನಮ್ಮ ವ್ಯವಸ್ಥೆ ಇದನ್ನು ಗಂಭೀರವಾಗಿ ಪರಿಗಣಿಸದಿರುವುದು ದುರದೃಷ್ಟಕರ.

ನಿಜಕ್ಕಾದರೆ ಗೋರಖಪುರದ ಪ್ರಕರಣವೇ ಆಳುವವರಿಗೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಲೊಂದು ಎಚ್ಚರಿಕೆಯಾಗಬೇಕಿತ್ತು. ಆದರೆ ನಮ್ಮ ಆಳುವ ವ್ಯವಸ್ಥೆ ಎಚ್ಚೆತ್ತುಕೊಳ್ಳುವುದು ದುರಂತ ಸಂಭವಿಸಿದಾಗ ಮಾತ್ರ. ಕೋಟಾದ ಆಸ್ಪತ್ರೆಯೇ ಇದಕ್ಕೆ ಅತ್ಯುತ್ತಮ ಉದಾಹರಣೆ. ಈ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ವಾರ್ಡಿನಲ್ಲಿ ಕಿಟಿಕಿಗಳಿಗೆ ಬಾಗಿಲುಗಳೇ ಇಲ್ಲ. ಇದ್ದರೂ ಅವುಗಳಿಗೆ ಅಳವಡಿಸಿದ ಗಾಜು ಮುರಿದು ಹೋಗಿ ಶೀತ ಗಾಳಿ ಒಳ ಬರುತ್ತಿತ್ತು. 19 ವೆಂಟಿಲೇಟರ್‌ಗಳ ಪೈಕಿ 13 ವೆಂಟಿಲೇಟರ್‌, 111 ಇನ್‌ ಫ್ಯೂಶನ್‌ ಪಂಪ್‌ಗಳ ಪೈಕಿ 81 ಪಂಪ್‌, 38 ಓಕ್ಸಿಮೀಟರ್ ಪೈಕಿ 32 ಹಾಗೂ 28 ನೆಬುಲೈಸರ್ ಪೈಕಿ 22 ಕಾರ್ಯವೆಸಗುತ್ತಿರಲಿಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಆಸ್ಪತ್ರೆಯಲ್ಲಿ ಹಂದಿಗಳು, ನಾಯಿಗಳು ಹಾಯಾಗಿ ಅಡ್ಡಾಡುತ್ತಿದ್ದವು. ನರ್ಸ್‌ಗಳು, ವೈದ್ಯರು ಸಾಕಷ್ಟು ಸಂಖ್ಯೆಯಲ್ಲಿ ಇರಲಿಲ್ಲ. ಹೀಗೆ ಅವ್ಯವಸ್ಥೆಗಳ ಸರಮಾಲೆಯೇ ಅಲ್ಲಿತ್ತು. ಕೋಟಾದ ಆಸ್ಪತ್ರೆ ಎಂದಲ್ಲ ದೇಶದ ಬಹುತೇಕ ಸರಕಾರಿ ಆಸ್ಪತ್ರೆಗೆ ಹೋದರೂ ಈ ಚಿತ್ರಣವನ್ನು ಕಾಣಬಹುದು. ವೈದ್ಯಕೀಯ ಉಪಕರಣಗಳನ್ನು ನಿರ್ವಹಿಸುವಲ್ಲಿ ನಮ್ಮದು ಸಾರ್ವತ್ರಿಕ ಕಳಪೆ ದಾಖಲೆ. ತುರ್ತು ಸಂದರ್ಭದಲ್ಲಿ ಯಾವ ಉಪಕರಣವೂ ಸರಿಯಿರುವುದಿಲ್ಲ. ಯಾವ ಆಸ್ಪತ್ರೆಯೂ ನಿಗದಿತ ಪ್ರಮಾಣದ ವೈದ್ಯರನ್ನಾಗಲಿ, ಅರೆ ವೈದ್ಯಕೀಯ ಸಿಬಂದಿಯನ್ನಾಗಲಿ ಹೊಂದಿರುವುದಿಲ್ಲ. ವೈದ್ಯರೇ ನರ್ಸ್‌ಗಳು ಮಾಡಬೇಕಾಗಿರುವ ಕೆಲಸಗಳನ್ನು ಮಾಡುವ ಸ್ಥಿತಿ ಅನೇಕ ಆಸ್ಪತ್ರೆಗಳಲ್ಲಿದೆ.

Advertisement

ಇಂಥ ದುರಂತ ಸಂಭವಿಸಿದಾಗಲೆಲ್ಲ ಹೇಳಿಕೆಗಳನ್ನು ನೀಡುವುದು, ಮೃತ ಮಕ್ಕಳ ಹೆತ್ತವರನ್ನು ಸಂತೈಸುವುದು ಅಥವಾ ಪರಸ್ಪರ ಕೆಸರು ಎರಚುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಒಟ್ಟಾರೆ ವ್ಯವಸ್ಥೆಯನ್ನು ಸಮಗ್ರವಾಗಿ ಸುಧಾರಿಸಬೇಕಾದ ಅಗತ್ಯವನ್ನು ಈ ದುರಂತಗಳು ಸಾರುತ್ತಿವೆ. ಆರೋಗ್ಯ ಆಯಾಯ ರಾಜ್ಯಗಳ ವ್ಯಾಪ್ತಿಗೆ ಒಳಪಡುವ ವಿಚಾರವಾದರೂ ಕೇಂದ್ರವೂ ತನ್ನ ಜವಾಬ್ದಾರಿಯಿಂದ ಜಾರಿಕೊಳ್ಳುವಂತಿಲ್ಲ. ಮುಖ್ಯವಾಗಿ ಆರೋಗ್ಯ ಕ್ಷೇತ್ರಕ್ಕೆ ನೀಡುವ ಅನುದಾನದ ಮೊತ್ತವನ್ನು ಹೆಚ್ಚಿಸುವ ಮೂಲಕ ಸರಕಾರಿ ಆಸ್ಪತ್ರೆಗಳಿಗೆ ಕನಿಷ್ಠ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಪ್ರಸ್ತುತ ಜಿಡಿಪಿಯ ಶೇ. 1.1 ಮೊತ್ತ ವನ್ನು ಮಾತ್ರ ನಾವು ಆರೋಗ್ಯ ಕ್ಷೇತ್ರಕ್ಕಾಗಿ ವಿನಿಯೋಗಿಸುತ್ತಿದ್ದೇವೆ.

ಎಲ್ಲರೂ ಆರೋಗ್ಯವಂತರಾಗಿರಬೇಕು, ಆರೋಗ್ಯವಂತ ಪ್ರಜೆಗಳೇ ದೇಶದ ಸಂಪತ್ತು ಎಂದೆಲ್ಲ ಹೇಳಿದರೆ ಸಾಲದು. ಆರೋಗ್ಯವನ್ನು ಪಡೆದುಕೊಳ್ಳುವ ಸೌಲಭ್ಯಗಳು ಇರಬೇಕು. ಅದು ಇಲ್ಲದಿದ್ದರೆ ಆಯುಷ್ಮಾನ್‌ ಭಾರತ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಂಥ ಕಾರ್ಯಕ್ರಮಗಳಿಗೆ ಅರ್ಥವೇ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next