Advertisement

ಕೋಟ ಗಿಳಿಯಾರು: ಪ್ರತೀ ವರ್ಷ ನೆರೆ ಹಾವಳಿ

09:10 PM Aug 21, 2021 | Team Udayavani |

ಕೋಟ: ಕೋಟ ಗ್ರಾ.ಪಂ. ವ್ಯಾಪ್ತಿಯ ಮೂಡುಗಿಳಿಯಾರು, ಹರ್ತಟ್ಟು, ದೇವಸ ಸೇರಿದಂತೆ, ಚಿತ್ರಪಾಡಿ ಬೆಟ್ಲಕ್ಕಿ ತನಕ ಸುಮಾರು 500 ಎಕ್ರೆಗೂ ಹೆಚ್ಚು ಪ್ರದೇಶದಲ್ಲಿ ಭತ್ತದ ಬೆಳೆ ಪ್ರತೀ ವರ್ಷ ನೆರೆ ಹಾವಳಿಯಿಂದ ಹಾನಿಗೀಡಾಗುತ್ತದೆ.

Advertisement

ಪರಿಹಾರ ಸಿಗದ ಈ ಸಮಸ್ಯೆಗೆ ಬೇಸತ್ತು  ಹಲವು ಮಂದಿ ಗದ್ದೆಯನ್ನು ಹಡಿಲು ಬಿಟ್ಟಿದ್ದು, ನೂರಾರು ರೈತರು ಕೃಷಿಯಿಂದ ವಿಮುಖರಾಗುವ ಹಂತದಲ್ಲಿದ್ದಾರೆ. ಹೊಳೆಯ ಹೂಳೆತ್ತಿ ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆಗೊಳಿಸಿದರೆ ಸಮಸ್ಯೆ ಬಹುತೇಕ ಪರಿಹಾರವಾಗಲಿದೆ.

ಹಲವು ಬಾರಿ ಮನವಿ

ಪ್ರತೀ ವರ್ಷ ಮಳೆಗಾಲದಲ್ಲಿ ರೈತರು ಈ ವಿಚಾರವನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಾರೆ ಹಾಗೂ ಗ್ರಾಮಸಭೆಗಳಲ್ಲೂ ಸಾಕಷ್ಟು ಬಾರಿ ವಿಷಯ ಪ್ರಸ್ತಾವಿಸಿದ್ದಾರೆ. ಸ್ಥಳೀಯ  ರೈತಧ್ವನಿ ಸಂಘಟನೆಯ ಪ್ರಮುಖರು ಈ ಬಗ್ಗೆ ಗಮನಸೆಳೆದಿದ್ದಾರೆ. ಆದರೆ ಸಮಸ್ಯೆ ಪರಿಹಾರವಾಗುವ ಲಕ್ಷಣ ಕಂಡುಬಂದಿಲ್ಲ.

ನೆರೆ ಜತೆಗೆ ಅಂತರಗಂಗೆ

Advertisement

ಆವೆ ಮಣ್ಣಿನ ಹೊಂಡ, ಕೆರೆ, ಹೊಳೆ, ತೋಡುಗಳಲ್ಲಿ ಹೇರಳವಾಗಿ ಶೇಖರಣೆಯಾಗುವ ಅಂತರಗಂಗೆ ಎನ್ನುವ ಜಲಕಳೆ ನೆರೆ ನೀರಿನೊಂದಿಗೆ  ಕೃಷಿ ಭೂಮಿಗೆ ಲಗ್ಗೆ ಇಟ್ಟು ಭತ್ತದ ಸಸಿಯನ್ನು ನಾಶಗೊಳಿಸುತ್ತದೆ. ಇದರ ಹತೋಟಿಗೆ  ಕೃಷಿ ವಿಜ್ಞಾನಿಗಳು ಕಾಂಪೋಸ್ಟ್‌, ಭೌತಿಕ ವಿಧಾನವನ್ನು ಆವಿಷ್ಕರಿಸಿದರೂ ಕೂಡ ಹತೋಟಿ ಕ್ರಮಗಳು ನಡೆದಿಲ್ಲ.

ಮರಳು  ಶೇಖರಣೆಯಿಂದ ಹಿನ್ನಡೆ? :

ಹೊಳೆಯಲ್ಲಿ  ಹೂಳಿನ ಜತೆಗೆ ಮರಳು ಶೇಖರಣೆಯಾಗಿರುವುದರಿಂದ ಮರಳು ಗಾರಿಕೆಯ ಕಾರಣಕ್ಕೆ  ನೇರವಾಗಿ ಹೂಳೆತ್ತಲು ಇಲಾಖೆಯಿಂದ ಅವಕಾಶ ಸಿಗುತ್ತಿಲ್ಲ. ಹೀಗಾಗಿ ಗಣಿಗಾರಿಕೆ ಇಲಾಖೆಯಿಂದ ಅನುಮತಿ ಪಡೆದು ಮರಳಿನ ಸೂಕ್ತ ವಿಲೇವಾರಿಗೆ ಕ್ರಮ ಕೈಗೊಂಡು, ಹೊಳೆ ಹೂಳೆತ್ತಲು ವ್ಯವಸ್ಥೆ ಮಾಡ ಬೇಕು ಎನ್ನುವ ಮಾತು ಕೇಳಿಬರುತ್ತಿದೆ.

ಸಮಸ್ಯೆಯಿಂದ ಪ್ರತೀ ವರ್ಷ ರೈತ ಹೈರಾಣು :

ಕೋಟ ಗ್ರಾ.ಪಂ. ವ್ಯಾಪ್ತಿಯ ಮೂಡುಗಿಳಿಯಾರು, ಹರ್ತಟ್ಟು, ದೇವಸ ಹಾಗೂ ಚಿತ್ರಪಾಡಿ ಬೆಟ್ಲಕ್ಕಿ ತನಕ ಸುಮಾರು 500 ಎಕ್ರೆ ಜಮೀನಿನಲ್ಲಿ ಬೆಳೆಯುವ ಭತ್ತದ ಬೆಳೆ ಪ್ರತೀ ವರ್ಷ ನೆರೆ ಹಾವಳಿಯಿಂದ ಹಾನಿಗೀಡಾಗುತ್ತದೆ.

ಹೊಳೆ ಹೂಳೆತ್ತಿ :

ನಮ್ಮೂರಿನಲ್ಲಿ ನೆರೆ ಸಮಸ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಯಾವುದಾದರೊಂದು ಯೋಜನೆ ಮೂಲಕ ಹೊಳೆ ಹೂಳೆತ್ತುವ ಕಾಮಗಾರಿ ಕೈಗೆತ್ತಿಕೊಳ್ಳದಿದ್ದಲ್ಲಿ  ಇನ್ನು ಮೂರ್‍ನಾಲ್ಕು ವರ್ಷದಲ್ಲಿ ಶೇ. 50ರಷ್ಟು  ರೈತರು ಕೃಷಿಯಿಂದ ವಿಮುಖರಾಗುವ ಅಪಾಯವಿದೆ.  –ರಾಘವೇಂದ್ರ ಶೆಟ್ಟಿ  ಹಂಡಿಕೆರೆ, ಸ್ಥಳೀಯ ರೈತ

ಇಲಾಖೆಗೆ ಮನವಿ  :

ಹೊಳೆಯಲ್ಲಿ ಹೂಳಿನ ಜತೆಗೆ ಮರಳು ಮಿಶ್ರಣವಾಗಿರುವುದರಿಂದ ನೇರವಾಗಿ ಹೂಳೆತ್ತಲು ಅವಕಾಶವಿಲ್ಲ. ಹೀಗಾಗಿ ಗಣಿಗಾರಿಕೆ ಇಲಾಖೆ ಈ ಬಗ್ಗೆ ಮನವಿ ಮಾಡಲಾಗಿದೆ. ಸಣ್ಣ ನೀರಾವರಿ ಇಲಾಖೆ ಮೂಲಕ ಕೂಡ ಪ್ರಯತ್ನಗಳು ನಡೆಯುತ್ತಿದೆ. ಸಚಿವರು, ಶಾಸಕರಲ್ಲಿ ಈ ಬಗ್ಗೆ ಮತ್ತೂಮ್ಮೆ ಮನವಿ ಮಾಡಲಾಗುವುದು.ಅಜಿತ್‌ ದೇವಾಡಿಗ, ಕೋಟ ಗ್ರಾ.ಪಂ. ಅಧ್ಯಕ್ಷ 

Advertisement

Udayavani is now on Telegram. Click here to join our channel and stay updated with the latest news.

Next