Advertisement

ಬಂದರು ಮತ್ತೆ ಮೆರೆಯಲಿ, ಗ್ರಾಮ ಶ್ರೀಮಂತವಾಗಲಿ

02:48 PM Aug 05, 2022 | Team Udayavani |

ಕೋಟ: ಬ್ರಹ್ಮಾವರದಿಂದ ನಾಲ್ಕೈದು ಕಿ.ಮೀ. ದೂರದಲ್ಲಿ, ಮಾಬುಕಳಕ್ಕೆ ಪಶ್ಚಿಮವಾಗಿ ಸೀತಾ-ಸ್ವರ್ಣ ನದಿಗಳು ಹರಿದು ಸಾಗರವನ್ನು ಸಂಗಮಿಸುವ ತಟದಲ್ಲಿರುವ ದ್ವೀಪದಂತಹ ಗ್ರಾಮವೇ ಬಾಳ್ಕುದ್ರು (ಬಾಳೇಕುದ್ರು).

Advertisement

ಇಲ್ಲಿನ ಹಂಗಾರಕಟ್ಟೆ ಬಂದರು ವಿಜಯನಗರ ಅರಸರ ಕಾಲದಲ್ಲಿ ವಿದೇಶಗಳ ವ್ಯಾಪಾರ ಚಟುವಟಿಕೆಯಿಂದ ಗಮನಸೆಳೆದಿತ್ತು. ಸುಮಾರು ಪ್ರಾಚೀನ ಬಾಳೇಕುದ್ರು ಮಠ ಕೂಡ ಇಲ್ಲಿನ ವಿಶೇಷತೆಗಳಲ್ಲಿ ಒಂದು. ಪ್ರಸ್ತುತ ಕೃಷಿ, ಹೈನುಗಾರಿಕೆ, ಮೀನುಗಾರಿಕೆ ಇಲ್ಲಿನವರ ಮುಖ್ಯ ಕಸುಬು. ನೇಪಥ್ಯಕ್ಕೆ ಸರಿಯುತ್ತಿರುವ ಹಂಗಾರಕಟ್ಟೆ ಬಂದರಿಗೆ ಗತವೈಭವ ತರಬೇಕು. ಅದು ಸಾಧ್ಯವಾದರೆ ಬಾಳ್ಕುದ್ರು ಗ್ರಾಮವೂ ಶ್ರೀಮಂತಗೊಳ್ಳಲಿದೆ.

ಈ ಗ್ರಾಮವು ಐರೋಡಿ ಗ್ರಾ.ಪಂ. ವ್ಯಾಪ್ತಿಗೆ ಸೇರಿದೆ. 359.31 ಹೆಕ್ಟೇರ್‌ ವಿಸ್ತೀರ್ಣವಿದೆ. 578 ಕುಟುಂಬಗಳು ವಾಸವಿದ್ದು, ಜನಸಂಖ್ಯೆ 2,736. ಹಂಗಾರಕಟ್ಟೆ, ಭಟ್ಟನಕುದ್ರು, ಮೆಸ್ತನ ಕುದ್ರು, ಕಿಣಿಯರ ಕುದ್ರು, ಮುಂದುಕುದ್ರು, ಕೋಟೆಬೆಟ್ಟು, ಮಠದಬೆಟ್ಟು, ಮೂಡುಹೊಳೆಬೆಟ್ಟು ಮುಂತಾದ ಪ್ರದೇಶಗಳು ಈ ಗ್ರಾಮದ ವ್ಯಾಪ್ತಿಯಲ್ಲಿವೆ.

ರಾಷ್ಟ್ರೀಕೃತ ಬ್ಯಾಂಕ್‌ನ ಒಂದು ಶಾಖೆ, ಸ.ಹಿ.ಪ್ರ.ಶಾಲೆ, ಅಂಗನವಾಡಿ ಕೇಂದ್ರ, ಹಾಲು ಉತ್ಪಾದಕರ ಕೇಂದ್ರ, ಸಹಕಾರಿ ಬ್ಯಾಂಕ್‌ ಶಾಖೆ, ಮೀನುಗಾರಿಕೆ ಬ್ಯಾಂಕ್‌ ಶಾಖೆ ಕೂಡ ಇದೆ. ಹಡಗು, ಬಾರ್ಜ್‌ ನಿರ್ಮಾಣ ಕಾರ್ಖಾನೆ, ಶಿಪ್‌ಯಾರ್ಡ್‌, ಕೆಮಿಕಲ್‌ ಫ್ಯಾಕ್ಟರಿಗಳು ಒಂದಿಷ್ಟು ಮಂದಿಗೆ ಉದ್ಯೋಗ ನೀಡಿವೆ.

ಅಭಿವೃದ್ಧಿಯತ್ತ ಗಮನಹರಿಯಲಿ

Advertisement

ಹಂಗಾರಕಟ್ಟೆ ಬಂದರು ವಿದೇಶಿ ವ್ಯವಹಾರಕ್ಕೆ ಕರಾವಳಿಯಲ್ಲೆ ಪ್ರಸಿದ್ಧಿಯಾಗಿತ್ತು. ಆದರೆ ಕ್ರಮೇಣ ತನ್ನ ಮಹತ್ವವನ್ನು ಕಳೆದುಕೊಂಡು ಕಿರುಬಂದರಾಯಿತು. ಇಲ್ಲಿನ ಅಳಿವೆಯ ಹೂಳೆತ್ತುವುದು ಹಾಗೂ ಅಳಿವೆಗೆ ತಡೆಗೋಡೆ (ಬ್ರೇಕ್‌ ವಾಟರ್‌) ಜಟ್ಟಿ ವಿಸ್ತರಣೆ, ಮೀನು ಹರಾಜು ಕೇಂದ್ರ ಸ್ಥಾಪನೆ ಮುಂತಾದ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕಿದೆ. ಅದಾದರೆ ಬಂದರು ಅಭಿವೃದ್ಧಿಯಾಗುವ ಜತೆಗೆ ಅರ್ಥಿಕ ಚಟುವಟಿಕೆ, ಉದ್ಯೋಗವಕಾಶವಗಳು ಹೆಚ್ಚಲಿವೆ. ಕೋಡಿಬೆಂಗ್ರೆಯಿಂದ-ಹಂಗಾರಕಟ್ಟೆಗೆ ಪ್ರಸ್ತುತ ಕಿರು ಬಾರ್ಜ್‌ನ ವ್ಯವಸ್ಥೆ ಇದ್ದು, ಕಾರು ಮುಂತಾದ ವಾಹನಗಳನ್ನೂ ಹೊತ್ತೂಯ್ಯುವಂಥ ದೊಡ್ಡ ಬಾರ್ಜ್‌ನ ವ್ಯವಸ್ಥೆ ಒದಗಿಸಿದರೆನ್ನು ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲವಾಗಲಿದೆ.

ಈ ಗ್ರಾಮವು ದ್ವೀಪ ಪ್ರದೇಶವಾದ್ದರಿಂದ ಎಲ್ಲಿಯೇ ಬಾವಿ ತೆಗೆದರೂ ಉಪ್ಪು ನೀರು, ಕೆಂಪು ನೀರು ಬರುವುದರಿಂದ ಕುಡಿಯಲು ನಳ್ಳಿ ನೀರನ್ನೇ ಅವಲಂಬಿಸಬೇಕು. ಹಾಗಾಗಿ ಬೇಸಗೆಯಲ್ಲಿ ಕೆಲವೊಮ್ಮೆ ಕುಡಿಯುವ ನೀರಿಗೆ ಕೊರತೆ ಉದ್ಭವಿಸುತ್ತದೆ. ಇಲ್ಲಿನ ಕಿಣಿಯರ ಕುದ್ರು ಎನ್ನುವ ಪ್ರದೇಶಕ್ಕೆ ರಸ್ತೆ ಸಂಪರ್ಕವಿಲ್ಲದೇ ಜನರು ನಿತ್ಯವೂ ದೋಣಿ ಮೂಲಕವೇ ಸಂಚರಿಸುತ್ತಾರೆ. ಮಿಕ್ಕುಳಿದಂತೆ ಹಲವು ರಸ್ತೆಗಳು ಅಭಿವೃದ್ಧಿ ಹೊಂದಬೇಕಿದೆ.

ಗ್ರಾಮದ ಇತಿಹಾಸ

ಬಾಳ್ಕುದ್ರು ಎಂಬ ಹೆಸರಿನ ಬಗ್ಗೆ ಹಲವು ಅಭಿಪ್ರಾಯಗಳಿವೆ. ಸಾಮಾನ್ಯವಾಗಿ ಆಡು ಭಾಷೆಯಲ್ಲಿ ದ್ವೀಪ ಪ್ರದೇಶಕ್ಕೆ ಕುದ್ರು ಎನ್ನುವುದುಂಟು. ಈ ಭಾಗದಲ್ಲಿ ಬಾಳೆಯನ್ನು ಹೆಚ್ಚಾಗಿ ಬೆಳೆಯುತ್ತಿದ್ದರಿಂದ ಬಾಳೆಕುದ್ರು ಎಂಬಹೆಸರು ಬಂದಿತು ಎನ್ನುವವರಿದ್ದಾರೆ. ಇನ್ನು ಕೆಲವರು “ಬಾಳು’ ಎಂಬ ಪದ ಈ ಹೆಸರಿಗೆ ಕಾರಣ.”ಬಾಳು’ ಅಂದರೆ ಜೀವನಕ್ಕೆ ಅನುಕೂಲಕರವಾದ ಭೂ ಭಾಗವಾದ್ದರಿಂದಬಾಳಕುದುರು ಎಂತಲೂಇದ್ದೀತು ಎನ್ನಲಾಗಿದೆ. ಇಲ್ಲಿ ದೊರಕುವ ಶಾಸನಗಳಲ್ಲಿ “ಬಾಳಕುದುರು’ ಎಂದೇ ಉಲ್ಲೇಖವಿದೆಯಂತೆ. ಇಲ್ಲಿನ ಮಠಕ್ಕೆ ಊರಜನರು ಕದಳೀಗುತ್ಛಗಳನ್ನು ಸಮರ್ಪಣೆ ಗೋಸ್ಕರ ಅರ್ಪಿಸಿದ್ದರಿಂದ ಈ ದ್ವೀಪಕ್ಕೆ ಕದಳೀ ದ್ವೀಪ (ಬಾಳಕುದುರು) ಎಂಬ ಹೆಸರು ಬಂದಿತು ಎನ್ನಲಾಗುತ್ತದೆ. ಹಂಗಾರಕಟ್ಟೆ ಮೀನುಗಾರಿಕೆ ಜಟ್ಟಿ ಐತಿಹಾಸಿಕವಾಗಿದ್ದು. ಬ್ರಿಟಿಷರ ಕಾಲದಲ್ಲಿ ಇಲ್ಲಿಯ ಮೂಲಕ ವಿದೇಶಗಳಿಗೆ ಆಹಾರ ಸಾಮಗ್ರಿಗಳನ್ನು ರಫ್ತು ಮಾಡಲಾಗುತ್ತಿತ್ತು. ಹಂಗಾರ ಮರದಿಂದ ಇಲ್ಲಿನ ಜಟ್ಟಿ ನಿರ್ಮಿಸಿದ್ದರಿಂದ ಹಾಗೂ ಹಂಗಾರ ಮರಕ್ಕೆ ಕಟ್ಟೆ ಕಟ್ಟಿ ಜನರ ವಿಶ್ರಾಂತಿಗೆ ಅನುಕೂಲ ಮಾಡಿದ್ದರಿಂದ ಹಂಗಾರಕಟ್ಟೆ ಎನ್ನುತ್ತಿದ್ದರೆಂಬ ಪ್ರತೀತಿ ಇದೆ. ಈ ಪ್ರದೇಶವು ಕೈಗಾರಿಕಾ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿತ್ತು. ಹಲವು ದಶಕಗಳ ಹಿಂದೆ ಸ್ಥಾಪನೆಯಾದ ಇಲ್ಲಿನ ರಟ್ಟಿನ ಫ್ಯಾಕ್ಟರಿ, ಕೆಮಿಕಲ್‌ ಫ್ಯಾಕ್ಟರಿಗಳು ನೂರಾರು ಮಂದಿಗೆ ಉದ್ಯೋಗ ಕಲ್ಪಿಸಿದ್ದವು. ಕಾರ್ಮಿಕ ಸಂಘಟನೆ, ಕಾರ್ಮಿಕ ಹೋರಾಟಕ್ಕೆ ಈ ಪ್ರದೇಶ ಹೆಸರುವಾಸಿಯಾಗಿದ್ದವು.

ಐತಿಹಾಸಿಕ ಬಾಳಕುದ್ರು ಮಠ

ಬಾಳೆಕುದ್ರು ಮಠದ ಸ್ಥಾಪನೆಯು ಸುಮಾರು ಕ್ರಿ.ಶ.10ನೇಯ ಶತಮಾನದಲ್ಲಿ ಆಗಿದ್ದಿರ ಬಹುದು ಎನ್ನಲಾಗಿದೆ. ಇಲ್ಲಿನ 9ನೇ ಯತಿ ಗಳಾದ ಶ್ರೀ ಇಶಾಶ್ರಮ ಸ್ವಾಮೀಜಿಗಳ ಕಾಲದಲ್ಲಿ ಶಂಕರಾ ಚಾರ್ಯರು ಇಲ್ಲಿಗೆ ಭೇಟಿ ನೀಡಿದ್ದರಂತೆ. ಶ್ರೀ ಮಠವು ವಿಜಯನಗರ ಸಾಮ್ರಾಜ್ಯ ಇತರ ಅರಸರ ಕಾಲದಲ್ಲಿ ರಾಜ ವೈಭೋಗದಿಂದ ಮೆರೆದಿತ್ತು.

ಸಮಸ್ಯೆ ಪರಿಹಾರಕ್ಕೆ ಯತ್ನ: ಬಾಳ್ಕುದ್ರು ಗ್ರಾಮದ ಪ್ರಮುಖ ಸಮಸ್ಯೆಯಾದ ಕುಡಿಯುವ ನೀರಿನ ಸಮಸ್ಯೆಗೆ ಜಲಜೀವನ್‌ ಮಿಷನ್‌ ಯೋಜನೆ ಮೂಲಕ ಪ್ರತ್ಯೇಕ ಟ್ಯಾಂಕ್‌ ನಿರ್ಮಿಸಿ ಪರಿಹರಿಸಲಾಗುತ್ತಿದೆ. ಮಿಕ್ಕುಳಿದ ಅಭಿವೃದ್ಧಿ ಕಾಮಗಾರಿಗಳ ಕುರಿತು ಗಮನಹರಿಸಲಾಗುವುದು. –ಗೀತಾ ಶೆಟ್ಟಿ, ಅಧ್ಯಕ್ಷರು ಐರೋಡಿ ಗ್ರಾ.ಪಂ.

ಅಭಿವೃದ್ಧಿಗೆ ಅವಕಾಶ: ಬಾಳೇಕುದ್ರು ಪುಟ್ಟ ಗ್ರಾಮವಾದರೂ ಅಪಾರ ಪ್ರಮಾಣದ ಪ್ರಾಕೃತಿಕ ಸಂಪತ್ತು ಹೊಂದಿದೆ. ಬಂದರು ಅಭಿವೃದ್ಧಿ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿದಲ್ಲಿ ಊರು ಸಾಕಷ್ಟು ಅಭಿವೃದ್ಧಿ ಹೊಂದಲಿದೆ. –ಸುರೇಶ್‌ ಅಡಿಗ, ಸ್ಥಳೀಯರು

– ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next