ಉಡುಪಿ/ ಕೋಟ: ಕೋಟದ ಮಣೂರು ಚಿಕ್ಕನಕೆರೆಯಲ್ಲಿ ಜ.26ರಂದು ನಡೆದಿದ್ದ ಯತೀಶ್ ಕಾಂಚನ್ ಮತ್ತು ಭರತ್ ಶ್ರೀಯಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿ.ಪಂ. ಕೋಟ ಕ್ಷೇತ್ರದ ಸದಸ್ಯ ಬಾರಿಕೆರೆ ರಾಘವೇಂದ್ರ ಕಾಂಚನ್ ಸಹಿತ 6 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಅವರಿಗೆ 8 ದಿನಗಳ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.
ಆರೋಪಿಗಳ ವಿವರ:
ಕೋಟದ ರಾಜಶೇಖರ ರೆಡ್ಡಿ(44) ಮತ್ತು ಮೆಡಿಕಲ್ ರವಿ (42)ಯನ್ನು ಫೆ.7ರಂದು ಮಡಿಕೇರಿಯಲ್ಲಿ ಹಾಗೂ ಹರೀಶ್ ರೆಡ್ಡಿ (40), ಕೊಡವೂರಿನ ಮಹೇಶ್ ಗಾಣಿಗ (38) ,ಲಕ್ಷ್ಮೀನಗರದ ರವಿಚಂದ್ರ ಪೂಜಾರಿ ಯಾನೆ ರವಿ (28)ಯನ್ನು ಹೊಸನಗರದಲ್ಲಿ ಫೆ.8 ರಂದು ಬಂಧಿಸಲಾಗಿದೆ. ಜಿ.ಪಂ. ಸದಸ್ಯ ರಾಘವೇಂದ್ರ ಕಾಂಚನ್ (38)ನನ್ನು ಫೆ.7ರಂದು ಮನೆ ಯಲ್ಲಿ ವಶಕ್ಕೆ ತೆಗೆದುಕೊಂಡು ಮರುದಿನ ಬಂಧಿಸಿದ್ದೇವೆ. ಉಳಿದ ಆರೋಪಿಗಳ ಪತ್ತೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಎಸ್‌ಪಿ ಲಕ್ಷ್ಮಣ್ ಬಿ.ನಿಂಬರಗಿ ತಿಳಿಸಿದ್ದಾರೆ.
ಕೋರ್ಟ್‌ನಲ್ಲಿ ಜನ ಸಂದಣಿ
ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಬಿಗಿಭದ್ರತೆ ಏರ್ಪಡಿಸಲಾಗಿತ್ತು. ನ್ಯಾಯಾಲಯದ ಆವರಣದಲ್ಲಿ ಕುತೂಹಲಿಗರ ಸಂಖ್ಯೆಯೂ ಸಾಕಷ್ಟಿತ್ತು. ಪ್ರಮುಖ ಆರೋಪಿಗಳಾದ ರಾಜಶೇಖರ ರೆಡ್ಡಿ ಮತ್ತು ಮೆಡಿಕಲ್ ರವಿ ಮುಖಕ್ಕೆ ಕಪ್ಪು ಮುಸುಕು ಹಾಕಲಾಗಿತ್ತು.
ಇಬ್ಬರು ಆರೋಪಿಗಳ ಪರ ಮುರ್ಡೇಶ್ವರ ವಕಾಲತ್ತು:
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಾದ ರವೀಂದ್ರ ಹಾಗೂ ರಾಘವೇಂದ್ರ ಕಾಂಚನ್ ಪರವಾಗಿ ಕುಂದಾಪುರದ ಹಿರಿಯ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಅವರು ವಕಾಲತ್ತು ಸಲ್ಲಿಸಿದ್ದಾರೆ. ರಿಮ್ಯಾಂಡ್ ಅರ್ಜಿಗೂ ಪೂರ್ವದಲ್ಲಿ ವಾದ ಮಂಡಿಸಿದ ಅವರು, ತನ್ನ ಕಕ್ಷಿದಾರ ರಾಘವೇಂದ್ರ ಕಾಂಚನ್ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದು, ಗೌರವಾನ್ವಿತರಾಗಿದ್ದಾರೆ ಅವರು ಘಟನೆ ನಡೆಯುವಾಗ ಸ್ಥಳಕ್ಕೆ ಹೋಗಿಲ್ಲ. ಕಾಂಚನ್ ಬಳಿ ಆಯುಧ ರಿಕವರಿ ಇಲ್ಲ, ಹಾಗಾಗಿ ಅವರನ್ನು ಪೊಲೀಸ್ ವಶಕ್ಕೆ ನೀಡಬಾರದು ಎಂದು ನ್ಯಾಯಾಲಯಕ್ಕೆ ಅರಿಕೆ ಮಾಡಿಕೊಂಡಿದ್ದರು.