ಕೋಟ: ಕೋಟ ಬಾರಿಕೆರೆಯ ಮೆಹಂದಿ ನಡೆಯುತ್ತಿದ್ದ ಮನೆಗೆ ಪೊಲೀಸರು ದಾಳಿ ನಡೆಸಿ ಲಾಠಿ ಚಾರ್ಜ್ ನಡೆಸಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸ್ ಕಾನ್‌ಸ್ಟೆಬಲ್ ಜಯರಾಮ್ ಅವರು ಪ್ರತಿದೂರು ನೀಡಿದ್ದು, ಕಾಲನಿ ನಿವಾಸಿಗಳು ಹಾಗೂ ಸ್ಥಳೀಯರಿಂದಲೇ ಪೊಲೀಸರ ಮೇಲೆ ಹಲ್ಲೆಯಾಗಿದೆ ಎಂದು ದೂರಿದ್ದಾರೆ.
ಡಿ. 27ರಂದು ಕರ್ತವ್ಯ ಮುಗಿಸಿ ವಸತಿಗೃಹದಲ್ಲಿ ವಿಶ್ರಾಂತಿಯಲ್ಲಿರುವಾಗ ಕೋಟತಟ್ಟು ಗ್ರಾಮದ ಚಿಟ್ಟಿಬೆಟ್ಟುವಿನ ರಾಜೇಶ್ ಅವರ ಮನೆಯಲ್ಲಿ ಏರುಧ್ವನಿಯಲ್ಲಿ ಡಿಜೆ ಹಾಕಿ, ಮದ್ಯ ಸೇವನೆ ಮಾಡುತ್ತಿರುವ ಕುರಿತು ಸ್ಥಳೀಯರಿಂದ ದೂರು
ಬಂದಿದ್ದು, ಅದರಂತೆ ಪೊಲೀಸ್ ಉಪನಿರೀಕ್ಷಕ ರಾದ ಸಂತೋಷ್ ಬಿ.ಪಿ. ನಮ್ಮನ್ನು ಸ್ಥಳಕ್ಕೆ ಕರೆದೊಯ್ದರು. ಆಗ ಸ್ಥಳೀಯರಾದ ರಾಜೇಶ್, ಸುದರ್ಶನ್, ಗಣೇಶ ಬಾಕೂìರು, ಸಚಿನ್, ಗಿರೀಶ್, ನಾಗೇಂದ್ರ ಪುತ್ರನ್, ನಾಗರಾಜ ಪುತ್ರನ್ ಮತ್ತಿತರರು ಜೋರಾಗಿ ಡಿಜೆ ಹಾಡು ಹಾಕಿಕೊಂಡು ನೃತ್ಯ ಮಾಡುತ್ತಿರುವುದು ಕಂಡು ಬಂತು. ಆಗ ಸ್ಥಳೀಯ ನಿವಾಸಿ ಸುಬ್ರಹ್ಮಣ್ಯ ಉರಾಳ ಅವರು ಪಿಎಸ್‌ಐ ಬಳಿ ತನ್ನ ತಾಯಿಗೆ ಹೃದಯ ಸಂಬಂಧಿ ತೊಂದರೆ ಇದ್ದು ಡಿಜೆ ಸದ್ದನ್ನು ಕಡಿಮೆ ಮಾಡುವಂತೆ ತಿಳಿಸಿದರು. ಅದೇ ವೇಳೆ ಅವರು ತುರ್ತು ಸಹಾಯವಾಣಿ “112’ಕ್ಕೆ ನೀಡಿದ ಮಾಹಿತಿಯನುಸಾರ 112ರ ಸಿಬಂದಿಯೂ ಸ್ಥಳಕ್ಕೆ ಬಂದಿದ್ದು ಅವರಲ್ಲಿಯೂ ಆರೋಪಿತರು ಉಡಾಫೆಯಾಗಿ ಮಾತನಾಡಿದ್ದಾರೆ ಎಂದು ತಿಳಿಸಿರುತ್ತಾರೆ.
ಪಿಎಸ್‌ಐ ಅವರು ಡಿಜೆ ಶಬ್ದವನ್ನು ಕಡಿಮೆ ಮಾಡುವಂತೆ ತಿಳಿಸಿದಾಗ ಆರೋಪಿತರು ದೊಣ್ಣೆ ಹಿಡಿದು ಉಡಾಫೆಯಾಗಿ ಮಾತನಾಡಿದ್ದಲ್ಲದೆ ಸಮವಸ್ತ್ರದಲ್ಲಿದ್ದ ಪಿಎಸ್‌ಐ ಅವರನ್ನು ದೂಡಿರು ತ್ತಾರೆ, ಕಾನ್‌ಸ್ಟೆಬಲ್ ಜಯರಾಮ ಡಿಜೆ ಬಂದ್ ಮಾಡಲು ಹೋದಾಗ ದೊಣ್ಣೆಯಿಂದ ಹಲ್ಲೆ ಮಾಡಿ, ಸಮವಸ್ತ್ರ ಹರಿದು ಅವಾಚ್ಯವಾಗಿ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರತಿಭಟನೆ ಎಚ್ಚರಿಕೆ :
ಪೊಲೀಸರು ಪ್ರಕರಣ ಮುಚ್ಚಿಹಾಕುವ ಸಲುವಾಗಿ ಸುಳ್ಳು ಕೇಸು ದಾಖಲಿಸಿದ್ದಾರೆ ಎಂದು ದಲಿತ ಸಂಘಟನೆಗಳ ಮುಖಂಡರು ಗುರುವಾರ ಕೊರಗ ಕಾಲನಿಯಲ್ಲಿ ಸಭೆ ನಡೆಸಿ ಆರೋಪಿಸಿದರು. ನ್ಯಾಯ ಸಿಗದಿದ್ದರೆ ಪ್ರತಿಭಟನೆ ನಡೆಸುವುದಾಗಿ ಮುಖಂಡರು ತಿಳಿಸಿದ್ದಾರೆ.