ಕೋಟ: ಕೋಟ ಬಾರಿಕೆರೆ ಯುವಕ ಮಂಡಲದ 16ನೇ ವಾರ್ಷಿಕೋತ್ಸವದ ಕಾರ್ಯಕ್ರಮ ‘ನಿನಾದ’ ಡಿ.16ರಂದು ಬಾರಿಕೆರೆಯಲ್ಲಿ ನಡೆಯಿತು. ಈ ಸಂದರ್ಭ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಪ್ಯಾರಾ ಅಥ್ಲೆಟಿಕ್‌ನಲ್ಲಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕೋಟ ಡಾ| ಮಾಲತಿ ಕೃಷ್ಣಮೂರ್ತಿ ಹೊಳ್ಳರಿಗೆ ಬಾರಿಕೆರೆ ವರ್ಷೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಿ.ಶಂಕರ್ ಪ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ನಾಡೋಜ ಡಾ| ಜಿ.ಶಂಕರ್ ಪ್ರಶಸ್ತಿ ಪ್ರದಾನಿಸಿ ಮಾತನಾಡಿ, ಮಾಲತಿ ಹೊಳ್ಳ ವಿಕಲಚೇತನರಾದರೂ ಎಲ್ಲವನ್ನೂ ಮೆಟ್ಟಿ ನಿಂತು ಕ್ರೀಡಾಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ಅನೇಕ ಪ್ರಶಸ್ತಿಗಳನ್ನು ತನ್ನ ಮುಡುಗೇರಿಸಿಕೊಂಡಿದ್ದಾರೆ. ಅಮ್ಮ ಫೌಂಡೇಶನ್‌ನ ಮೂಲಕ ವಿಕಲಚೇತನ ಮಕ್ಕಳನ್ನು ಸಲಹುತ್ತಿದ್ದಾರೆ ಎಂದರು.
ಪ್ರಶಸ್ತಿ ಸ್ವೀಕರಿಸಿದ ಮಾಲತಿ ಕೆ. ಹೊಳ್ಳ ಮಾತನಾಡಿ, ನಾನು ವಿಕಲಚೇತನರಾಗಿರಬಹುದು. ಆದರೆ ನನ್ನ ಆತ್ಮಶಕ್ತಿ, ಕನಸಿಗೆ ವಿಕಲಚೇತನ ಬಂದಿಲ್ಲ. ಗುರಿಯನ್ನು ಮುಟ್ಟುತ್ತಾ ಮುಂದೆ ಹೋದಾಗ ಗುರಿಯೇ ನನ್ನ ಮುಂದೆ ಮಂಡಿಯೂರಿ ಕುಳಿತುಕೊಳ್ಳುತ್ತದೆ. ಇಂದು ಹುಟ್ಟಿದ ಊರಿನಲ್ಲಿ ಪಡೆದ ಈ ಪ್ರಶಸ್ತಿ ಎಲ್ಲಾ ಪ್ರಶಸ್ತಿಗಳಿಗಿಂತ ಹೆಮ್ಮೆ ಮತ್ತು ಖುಷಿ ಕೊಟ್ಟಿದೆ ಎಂದರು. ಯುವಕ ಮಂಡಲದ ಅಧ್ಯಕ್ಷ ಅವಿನಾಶ್ ಕೆ.ಎಸ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್‌ನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಮೊದಲಾದವರು ಶುಭ ಹಾರೈಸಿದರು. ಈ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ಆನಂದ ಸಿ.ಕುಂದರ್, ಅಂತರ್‌ರಾಷ್ಟ್ರೀಯ ಪವರ್ ಲಿಪ್ಟರ್ ಅಶೋಕ್ ಜಿ.ವಿ., ಹಿರಿಯ ಕೃಷಿಕ ವಳಮಾಡು ಆನಂದ ಮರಕಾಲ, ಬಾಲ ಪ್ರತಿಭೆಗಳಾದ ತ್ರಿಶಾ ಬಾರಿಕೆರೆ, ಕೀರ್ತಿರಾಜ್, ಯಶಸ್.ಆರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಉಡುಪಿ-ದಕ್ಷಿಣ ಕನ್ನಡ ಜಿಲ್ಲಾ ಮೀನುಗಾರರ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಗದೀಶ ನಾವುಡ, ಉಡುಪಿ ಜಿಲ್ಲಾ ಆಸ್ಪತ್ರೆಯ ಮೆಡಿಸಿನ್ ವಿಭಾಗದ ವೈದ್ಯಕೀಯ ತಜ್ಞ ಡಾ| ನಾಗೇಶ್, ಉಡುಪಿ ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ, ಮಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸತೀಶ್ ಕುಂದರ್, ಪರಿಸರವಾದಿ ಕೊರ್ಗಿ ವಿಠಲ ಶೆಟ್ಟಿ, ಉದ್ಯಮಿಗಳಾದ ಇಬ್ರಾಹಿಂ ಸಾಹೇಬ್, ಸುರೇಶ್ ಚಂದನ್, ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ರಘು ತಿಂಗಳಾಯ, ಪ್ರಗತಿಪರ ಕೃಷಿಕ ರವೀಂದ್ರ ಐತಾಳ್, ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ವಿನಯ ಕರ್ಕೇರ, ಮಾಜಿ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಯುವಕ ಮಂಡಲದ ಗೌರವಾಧ್ಯಕ್ಷ ಸುರೇಶ್ ಕಾಂಚನ್ ಮುಂತಾದವರು ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ರಂಜಿತ್ ಕುಮಾರ್ ಸ್ವಾಗತಿಸಿ, ಜಿ.ಪಂ. ಸದಸ್ಯ ಬಾರಿಕೆರೆ ರಾಘವೇಂದ್ರ ಕಾಂಚನ್ ಪ್ರಾಸ್ತಾವಿಕ ಮಾತನಾಡಿ, ಶಿಕ್ಷಕ ಸತೀಶ್‌ಚಂದ್ರ ಶೆಟ್ಟಿ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿ, ರತ್ನಾಕರ ಬಾರಿಕೆರೆ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸ್ಥಳೀಯ ಪ್ರತಿಭೆಗಳಿಂದ ಭಾವಗೀತೆಗಳ ಭಾವಯಾನ, ಕೋಟ ಪ್ರಭು ಬ್ರದರ್ ಅವರಿಂದ ನೃತ್ಯ ವೈವಿಧ್ಯ, ಕುಂದಾಪುರ ಮೂರುಮುತ್ತು ಕಲಾವಿದರಿಂದ ಕಾಮಿಡಿ ಝಲಕ್ ಜರುಗಿತು.
ವಿಕಲಚೇತನರ ಪರ ಕಲಾಪದಲ್ಲಿ ಧ್ವನಿ
ವಿಕಲಚೇತನರಿಗೆ ಸರಿಯಾದ ಸಹಕಾರ, ಮಾಗದರ್ಶನ ದೊರೆತರೆ ಡಾ| ಮಾಲತಿ ಹೊಳ್ಳರ ರೀತಿಯಲ್ಲಿ ಅನೇಕ ಮಂದಿ ಜೀವನದಲ್ಲಿ ದೊಡ್ಡ ಸಾಧನೆಯನ್ನು ಮಾಡಬಹುದು. ಆದ್ದರಿಂದ ವಿಕಲಚೇತನರ ಪರ ಪರಿಷತ್‌ನ ಕಲಾಪದಲ್ಲಿ ಧ್ವನಿ ಎತ್ತಲಿದ್ದೇನೆ ಎಂದು ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು.