ಕೋಟ: ಪ್ರಕರಣವೊಂದರ ವಿಚಾರಣೆಗಾಗಿ ಕೋಟ ಠಾಣೆಗೆ ಕರೆತಂದು ಪೊಲೀಸರು ನಮ್ಮ ಮೇಲೆ ಹಲ್ಲೆ ನಡೆಸಿ, ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿ ಆಶಾ ಮತ್ತು ಸುಜಾತಾ ಕುಲಾಲ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಎಸ್.ಪಿ.ಯವರಿಗೂ ದೂರು ನೀಡಿದ್ದಾರೆ.
ಚಿನ್ನಾಭರಣ ಕಳವು
ಬೇಳೂರು ನಿವಾಸಿ ಕಿರಣ್ ಕುಮಾರ್ ಶೆಟ್ಟಿ ಅವರ ಮನೆಯಲ್ಲಿ 27 ಗ್ರಾಂ ತೂಕದ ಚಿನ್ನದ ಬ್ರೇಸ್‌ಲೆಟ್ ಮತ್ತು ಚಿನ್ನದ ಕೈ ಬಳೆ ಅ. 2ರಂದು ಕಳವಾಗಿತ್ತು. ಮನೆಯಲ್ಲಿ ಮಗಳ ಹುಟ್ಟು ಹಬ್ಬದ ಕಾರ್ಯಕ್ರಮದ ನಿಮಿತ್ತ ಮನೆ ಸ್ವತ್ಛತೆಯ ಕೆಲಸಕ್ಕೆಂದು ಕೆಲಸಗಾರರು ಬಂದು ಹೋಗಿದ್ದು, ಅವರೇ ಕದ್ದಿರುವ ಬಗ್ಗೆ ಸಂಶಯವಿದೆ ಎಂದು ಕಿರಣ್ ಅವರು ಕೋಟ ಠಾಣೆಗೆ ದೂರು ನೀಡಿದ್ದರು.
ಈ ದೂರಿನ ಹಿನ್ನೆಲೆಯಲ್ಲಿ ವಿಚಾ ರಣೆಗಾಗಿ ಆಶಾ ಮತ್ತು ಸುಜಾತಾ ಕುಲಾಲ್ ಅವರನ್ನು ಅ.3ರಂದು ಕೋಟ ಪೊಲೀಸ್ ಠಾಣೆಗೆ ಕರೆಸಲಾಗಿತ್ತು.
ಈ ಸಂದರ್ಭ ಕ್ರೈಂ ವಿಭಾಗದ ಉಪನಿರೀಕ್ಷಕರಾದ ಸುಧಾ ಪ್ರಭು ಅವರು ಸಿಬಂದಿ ಜತೆ ಸೇರಿ ಹಲ್ಲೆ ಮಾಡಿ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿ ಸುಜಾತಾ ಕುಂದಾಪುರದ ಸರಕಾರಿ ಆಸ್ಪತ್ರೆಗೆ ಹಾಗೂ ಆಶಾ ಅವರು ಉಡುಪಿಯ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಮಗೆ ನ್ಯಾಯ ಒದಗಿಸುವಂತೆ ಕೋರಿ ಎಸ್‌ಪಿ ಅವರಿಗೆ ದೂರಿನ ಮೂಲಕ ಮನವಿ ಮಾಡಿದ್ದಾರೆ.
ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಂಚಾ ಲಕರಾದ ಸುಂದರ ಮಾಸ್ಟರ್ ನೇತೃತ್ವದಲ್ಲಿ ಅಜ್ಜರಕಾಡು ಆಸ್ಪತ್ರೆಗೆ ಬೇಟಿ ನೀಡಿ ಘಟನೆ ಬಗ್ಗೆ ಸಂತ್ರಸ್ತೆಯಿಂದ ಮಾಹಿತಿ ಪಡೆದಿದ್ದಾರೆ. ಬಳಿಕ ಉಡುಪಿ ಡಿವೈಎಸ್ಪಿ ದಿನಕರ್ ಅವರನ್ನು ಭೇಟಿಯಾಗಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಕೋಟ ಠಾಣೆ ಎದುರು ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.