Advertisement

ಜನವರಿ 1 ದಲಿತರ ಶೌರ್ಯದ ದಿನ : ಸೋಮಪ್ಪ ಛಲವಾದಿ

03:11 PM Jan 01, 2023 | Team Udayavani |

ಕುರುಗೋಡು: ಸಮೀಪದ ಮಣ್ಣೂರು ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಯಿತು.

Advertisement

ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಸಮಿತಿಯ ಪದಾಧಿಕಾರಿಗಳು ಘೋಷಣೆಗಳನ್ನು ಕೂಗಿದರು.

ಮಹಾರ್ ಸೈನಿಕರ ಶೌರ್ಯದ ಸ್ಮರಣಾರ್ಥ ಪ್ರತಿ ವರ್ಷ ಜನವರಿ 1 ರಂದು ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಗುತ್ತಿದೆ ಎಂದು ಸಮಿತಿಯ ರಾಜ್ಯ ಸಮಿತಿ ಸದಸ್ಯ ಸೋಮಪ್ಪ ಛಲವಾದಿ ವಕೀಲರು ತಿಳಿಸಿದರು.

ಪೇಶ್ವೆಗಳು ಜಾತಿ ವ್ಯವಸ್ಥೆಯಡಿ ಆಡಳಿತ ನಡೆಸುತ್ತಿದ್ದರು. ಪೇಶ್ವೆ ಬಾಜಿರಾಯನನ್ನು ಸೋಲಿಸಲು ಬಂದ ಬ್ರಿಟಿಷರು ಮಹಾರ ಯೋಧರ ನೆರವು ಕೋರಿದ್ದರು. ಆದರೆ, ಮಹಾರ ಯೋಧರು ಪೇಶ್ವೆಗೆ ಷರತ್ತಿನ ಬೆಂಬಲ ನೀಡಲು ಆತನ ಬಳಿಗೆ ತನ್ನ ದಂಡನಾಯಕ ಸಿದ್ಧನಾಯಕನನ್ನು ಕಳಿಸಿದರು’ ಎಂದು ಹೇಳಿದರು.

ಬಾಜಿರಾಯ ಬ್ರಾಹ್ಮಣ ಸಂಪ್ರದಾಯ ಪಾಲಿಸುವುದೇ ತನ್ನ ಧರ್ಮ ಎಂದು ಹೇಳಿ, ಅಸ್ಪೃಶ್ಯ ಯೋಧರ ಬೆಂಬಲ ತಿರಿಸ್ಕರಿಸಿ, ಸಿದ್ಧನಾಯಕನನ್ನು ಅಪಮಾನಿಸಿ ಕಳಿಸುತ್ತಾನೆ. ಇದರಿಂದ ಆಕ್ರೋಶಗೊಂಡ ಮಹಾರ್ ಯೋಧರು ಬಾಜಿರಾಯನ ಬೆನ್ನು ಮೂಳೆ ಮುರಿಯಲು ಬ್ರಿಟಿಷರ ಪರ ಯುದ್ಧ ಮಾಡಲು ಒಪ್ಪಿಕೊಳ್ಳುತ್ತಾರೆʼ ಎಂದು ತಿಳಿಸಿದರು.

Advertisement

1818ರ ಜನವರಿ 1 ರಂದು ಈಗಿನ ಪುಣೆ ಹತ್ತಿರದ ಭೀಮಾ ನದಿ ದಂಡೆ ಮೇಲಿನ ಕೋರೆಗಾಂವ್ ಬಳಿ 30 ಸಾವಿರ ಸೈನಿಕರಿದ್ದ ಪೇಶ್ವೆ ಹಾಗೂ 500 ಮಹಾರ್ ಯೋಧರ ಮಧ್ಯೆ ಯುದ್ಧ ನಡೆದು ಬ್ರಿಟಿಷರ ಕೊರಳಿಗೆ ವಿಜಯ ಮಾಲೆ ಬಿದ್ದಿತು. ಬಾಜಿರಾಯ ತಪ್ಪಿಕೊಂಡು ಓಡಿ ಹೋಗುತ್ತಾನೆ ಎಂದು ವಿವರಿಸಿದರು.

ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಪ್ರತಿ ವರ್ಷ ಭೀಮಾ ಕೋರೆಗಾಂವ್‌ಗೆ ಭೇಟಿ ನೀಡಿ ಹುತಾತ್ಮರ ಸ್ಮರಣಾರ್ಥ ಬ್ರಿಟಿಷ್ ಸರ್ಕಾರ ನಿರ್ಮಿಸಿರುವ ವೀರ ಯೋಧರ ಸ್ಮಾರಕಕ್ಕೆ ಗೌರವ ಸಲ್ಲಿಸುತ್ತಿದ್ದರು ಎಂದು ತಿಳಿಸಿದರು.

ಮಹಾರ್‌ ಯೋಧರ ತ್ಯಾಗ ವ್ಯರ್ಥವಾಗಲು ಬಿಡಬಾರದು. ಅವರ ಸಮಾನತೆಯ ಕನಸು ನನಸಾಗಿಸುವುದು ನಮ್ಮ ಗುರಿಯಾಗಬೇಕು ಎಂದು ಹೇಳಿದರು.

ಪ್ರಾರಂಭದಲ್ಲಿ ಅಂಬೇಡ್ಕರ್ ಭಾವ ಚಿತ್ರಕ್ಕೆ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾದ ಗ್ರಾಮ ಘಟಕ ಅಧ್ಯಕ್ಷ ಸಿದ್ದಲಿಂಗ, ಮುಖಂಡರಾದ ರುದ್ರಯ್ಯ, ರವಿ, ಮಣ್ಣೂರಯ್ಯ, ಮೌಲಪ್ಪ, ಶಿವರಾಜ, ಮಾರುತಿ, ಪಂಪಪಾತಿ, ವಸಂತ, ಮುದಿಯಪ್ಪ, ಯುವರಾಜ್, ಸುಧಾಕರ್ ಮಣ್ಣೂರು ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next