ಸಿಯೋಲ್: ವಿವಾದದಿಂದಲೇ ಸುದ್ದಿಯಾಗಿದ್ದ ದಕ್ಷಿಣ ಕೊರಿಯಾದ ಚೋಯ್ ಸುಂಗ್-ಬಾಂಗ್ (33) ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಶಂಕಿಸಲಾಗಿದೆ.
ಮಂಗಳವಾರ ಮುಂಜಾನೆ (ಜೂ.20 ರಂದು) 9:41ರ ವೇಳೆಗೆ ದಕ್ಷಿಣ ಸಿಯೋಲ್‌ನಲ್ಲಿರುವ ಯೊಕ್ಸಾಮ್-ಡಾಂಗ್ ಜಿಲ್ಲೆಯ ನಿವಾಸದಲ್ಲಿ ಗಾಯಕ ಶವವಾಗಿ ಪತ್ತೆಯಾಗಿದ್ದರ ಕುರಿತು ಕೊರಿಯಾ ಟೈಮ್ಸ್ ವರದಿ ಮಾಡಿದೆ.
ಯಾರು ಈ ಚೋಯ್ ಸುಂಗ್-ಬಾಂಗ್?: 2011 ರಲ್ಲಿ ʼಕೊರಿಯಾಸ್ ಗಾಟ್ ಟ್ಯಾಲೆಂಟ್ʼ ಕಾರ್ಯಕ್ರಮದಲ್ಲಿ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡ ಬಳಿಕ ಚೋಯ್ ಸುಂಗ್-ಬಾಂಗ್ ಖ್ಯಾತಿಯನ್ನು ಗಳಿಸಿದ್ದರು. ಕೊರಿಯನ್ ಲೇಬಲ್ ಬಾಂಗ್ ಬಾಂಗ್ ಕಂಪನಿಯೊಂದಿಗೆ ಒಪ್ಪಂದವನ್ನು ಮಾಡಿಕೊಂಡು ಅನೇಕ ಕಾರ್ಯಕ್ರಮವನ್ನು ನೀಡಿದ್ದರು. 2014 ರಲ್ಲಿ ಅವರು ʼಸ್ಲೋ ಬಾಯ್ ಆಲ್ಬಂʼ ಅವರಿಗೆ ಮತ್ತಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತು. 2021 ರಲ್ಲಿ ತನಗೆ ಕ್ಯಾನ್ಸರ್ ಇದೆ ಎಂದು ಗಾಯಕ ಕ್ರಾಡ್ ಫಂಡಿಂಗ್ ಮಾಡಿದ್ದರು. 1 ಮಿಲಿಯನ್ ಗೂ ಅಧಿಕ ಹಣವನ್ನು ಸಂಗ್ರಹಿಸಿದ್ದರು. ಕ್ಯಾನ್ಸರ್ ಇರುವುದು ಸುಳ್ಳೆಂದು ಆ ಬಳಿಕ ಜನರಿಗೆ ಗೊತ್ತಾಗಿದೆ. ಇದು ಗಾಯಕ ವಿವಾದಕ್ಕೆ ಸಿಲುಕುವಂತೆ ಮಾಡಿತ್ತು. ಆ ಬಳಿಕ ತಾನು ಜನರಿಂದ ಸಂಗ್ರಹಿಸಿದ್ದ ಹಣವನ್ನು ಹಿಂತಿರುಗಿಸುವುದಾಗಿ ಗಾಯಕ ಭರವಸೆ ನೀಡಿದ್ದರು.
ಇಂಡಸ್ಟ್ರಿಯಲ್ಲಿ ಹೆಸರು ಹಾಳು ಮಾಡಿಕೊಂಡ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುವ ಪರಿಸ್ಥಿತಿಯೂ ಅವರಿಗೆ ಬಂದಿತ್ತು ಎಂದು ವರದಿ ತಿಳಿಸಿದೆ.
ಗಾಯಕನ ಸಾವು ಆತ್ಮಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ. ಸಾವಿನ ಒಂದು ದಿನದ ಮೊದಲು ಅವರು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ನೋಟ್ ವೊಂದನ್ನು ಪೋಸ್ಟ್ ಮಾಡಿದ್ದರು. “ನನ್ನ ಮೂರ್ಖ ತಪ್ಪಿನಿಂದ ನೊಂದವರಿಗೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ಎಲ್ಲಾ ದೇಣಿಗೆಗಳನ್ನು ಹಿಂತಿರುಗಿಸಲಾಗಿದೆ” ಎಂದು ಬರೆದಿದ್ದರು.