Advertisement

Koratagere: ಪಟ್ಟಣಕ್ಕೆ 10 ದಿನಕ್ಕೊಮ್ಮೆ ನೀರು ಸರಬರಾಜು

08:02 PM May 07, 2024 | Team Udayavani |

ಕೊರಟಗೆರೆ: 3ತಿಂಗಳಿಗೆ ಆಗುವಷ್ಟು ಹೇಮಾವತಿ ನೀರು ಅಗ್ರಹಾರ ಕೆರೆಯಲ್ಲಿ ಲಭ್ಯವಿದೆ. 15 ವಾರ್ಡಿನ 20 ಕ್ಕೂ ಅಧಿಕ ಕೊಳವೆ ಬಾವಿಯಲ್ಲಿ ಕುಡಿಯುವ ನೀರು ಬರುತ್ತಿದೆ.

Advertisement

15 ತಿಂಗಳಿಂದ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಗೊಂದಲದಿಂದ ಆಡಳಿತ ಕುಸಿತ ಕಂಡಿದೆ. ಪಪಂ ನಿರ್ವಹಣೆ ವಿಫಲತೆಯಿಂದ ಪಟ್ಟಣದ 15 ವಾರ್ಡುಗಳಿಗೆ 10 ದಿನಕ್ಕೊಮ್ಮೆ ನೀರು ಸರಬರಾಜು ಆಗ್ತಿದೆ. ಇನ್ನೂ 4 ವಾರ್ಡುಗಳಿಗೆ ಹೇಮಾವತಿ ನೀರೇ ಇನ್ನೂ ಮರೀಚಿಕೆ.
ಕೊರಟಗೆರೆ ಪ.ಪಂ.ಯ 15 ವಾರ್ಡುಗಳಲ್ಲಿ 3100 ಮನೆಗಳಿದ್ದು, ಸರಿ ಸುಮಾರು 30 ಸಾವಿರಕ್ಕೂ ಅಧಿಕ ಜನಸಂಖ್ಯೆಯಿದೆ. ಅಧಿಕೃತವಾಗಿ 2650 ಮನೆಗಳಿಗೆ ಮಾತ್ರ ನೀರಿನ ನಲ್ಲಿಯ ಸಂಪರ್ಕಯಿದೆ. ಅನಧಿಕೃತವಾಗಿ 2 ಸಾವಿರಕ್ಕೂ ಅಧಿಕ ಮನೆಗಳಿಗೆ ನೀರಿನ ಸಂಪರ್ಕ ನೀಡಲಾಗಿದೆ. ನೀರಿನ ಸರಬರಾಜು ಅಂಕಿ-ಅಂಶದ ಮಾಹಿತಿ ಪಡೆಯಬೇಕಾದ ಪಪಂ ಆಡಳಿತ ಯಂತ್ರವೇ ಪ್ರಸ್ತುತ ಮಾಯವಾಗಿದೆ.

ಪಟ್ಟಣದ 15ವಾರ್ಡಿನಲ್ಲಿ ಒಟ್ಟು 30 ಕಡೆ ಕೊಳವೆ ಬಾವಿಗಳಿವೆ. 5 ರಲ್ಲಿ ನೀರಿಲ್ಲದೇ ಬತ್ತಿ ಹೋಗಿದ್ದು ಇನ್ನುಳಿದ 25 ರಲ್ಲಿ ನೀರು ಬರ್ತಿದೆ. 9 ಶುದ್ದ ಕುಡಿಯುವ ನೀರಿನ ಘಟಕಗಳಿವೆ. 1 ಕೆಟ್ಟು ಹೋಗಿ ವರ್ಷವೇ ಕಳೆದಿದೆ. ಧರ್ಮಸ್ಥಳ ಘಟಕಕ್ಕೆ ನೀರಿನ ಕೊರತೆಯಿಂದ ಮುಂಜಾನೆ ಮಾತ್ರ ನೀರು ನೀಡುತ್ತಿದೆ. ಇನ್ನೂ ನೀರಿನ ಕೊರತೆ ಸರಿದೂಗಿಸಲು 2 ಕಡೆ ಖಾಸಗಿ ಕೊಳವೆ ಬಾವಿ ಬಾಡಿಗೆಗೆ ಪಡೆದು ನೀರು ಸರಬರಾಜು ಮಾಡಲಾಗ್ತಿದೆ.

ಕೊರಟಗೆರೆ ಪಟ್ಟಣದ ನಾಲ್ಕು ಕಡೆ ನೀರಿನ ಸಂಗ್ರಹಣಾ ಘಟಕಗಳಿವೆ. ಗಂಗಾಧರೇಶ್ವರ ಬೆಟ್ಟ 50 ಸಾವಿರ ಲೀ. ಮತ್ತು ಕೆಎಸ್‍ಆರ್‌ಟಿಸಿ 1 ಲಕ್ಷ 80 ಸಾವಿರ ಲೀ. ನೀರಿನ ಸಾಮಾರ್ಥ್ಯ ಹೊಂದಿದೆ. ತಾಪಂ ಕಚೇರಿ, ಗಂಗಾಧರೇಶ್ವರ ದೇವಾಲಯ, ಗಿರಿನಗರ ಮತ್ತು ಅಗ್ರಹಾರದ ಸಮೀಪ ಓವರ್‍ ಹೆಡ್ ಟ್ಯಾಂಕುಗಳಿದ್ದು 8‌ ಲಕ್ಷ 50 ಸಾವಿರ ಲೀ. ನೀರಿನ ಸಾಮರ್ಥ್ಯವನ್ನು ಹೊಂದಿವೆ. ಆದರೇ ನಿರ್ವಹಣೆ ವಿಫಲತೆ ಮತ್ತು ಅವೈಜ್ಞಾನಿಕ ಪೈಪ್‍ಲೈನ್ ಸಂಪರ್ಕದಿಂದ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಆಗಿದೆ.

Advertisement

4 ವಾರ್ಡುಗಳಿಗೆ ಹೇಮಾವತಿ ಮರೀಚಿಕೆ:
15 ವಾರ್ಡುಗಳಿಗೆ ಇನ್ನೂ 3 ತಿಂಗಳು ಸರಬರಾಜು ಮಾಡುವಷ್ಟು ಹೇಮಾವತಿ ನೀರು ಅಗ್ರಹಾರ ಕೆರೆಯಲ್ಲಿ ಲಭ್ಯವಿದೆ. 4 ವಾರ್ಡುಗಳಿಗೆ ನೀರು ಪೂರೈಸುವ ಸರಕಾರಿ ಬಸ್ ನಿಲ್ದಾಣ ಹಿಂಭಾಗದ ನೀರು ಶೇಖರಣಾ ಘಟಕಕ್ಕೆ ಹೇಮಾವತಿ ನೀರಿನ ಸಂಪರ್ಕವೇ ಇಲ್ಲ. ಇತಿಹಾಸದಲ್ಲೇ 1, 2, 3, ಮತ್ತು 4ನೇ ವಾರ್ಡಿನ 800ಕ್ಕೂ ಅಧಿಕ ಕುಟುಂಬದ ಜನತೆ ಹೇಮಾವತಿ ನೀರನ್ನೇ ನೋಡೇ ಇಲ್ಲ. ಹೇಮಾವತಿ ನೀರಿನ ಪೈಪ್‍ಲೈನ್ ಸಂಪರ್ಕವು ಜನಪ್ರತಿನಿಧಿ ಮತ್ತು ಅಧಿಕಾರಿಗಳ ಭರವಸೆಗೆ ಮಾತ್ರ ಸೀಮಿತ.

10 ದಿನಕ್ಕೊಮ್ಮೆ ಮಾತ್ರ ನೀರು ಪೂರೈಕೆ:

ಅಗ್ರಹಾರ ಕೆರೆಯಲ್ಲಿ 3 ತಿಂಗಳಿಗೆ ಆಗುವಷ್ಟು 68 ಎಂಸಿಎಫ್‍ಟಿ ಹೇಮಾವತಿ ನೀರು ಲಭ್ಯವಿದೆ. 30 ಕೊಳವೆ ಬಾವಿಯಲ್ಲಿ 5 ವಿಫಲವಾಗಿದ್ದು 25 ರಲ್ಲಿ ನೀರು ಬರ್ತಿದೆ. ಕೊರಟಗೆರೆ ಪಟ್ಟಣಕ್ಕೆ ಅಗ್ರಹಾರ ಕೆರೆಯಿಂದ ಪ್ರತಿನಿತ್ಯ 4ಎಂಎಲ್‍ಡಿ ನೀರು ಸರಬರಾಜು ಆಗುತ್ತಿದೆ. ಪ್ರಸ್ತುತ ಅಗ್ರಹಾರ ಕೆರೆಯಿಂದ ಬರುತ್ತಿರುವ ಹೇಮಾವತಿ ನೀರಿನ ಅಂಕಿ ಅಂಶದ ಲೆಕ್ಕ ನೋಡಿದ್ರೇ 3 ದಿನಕ್ಕೊಮ್ಮೆ ನೀರು ಪೂರೈಕೆ ಆಗುತ್ತೆ. ಆದರೆ ಕೆರೆಯಿಂದ ಬರುತ್ತಿರುವ ನೀರು ಎಲ್ಲಿಗೆ ಹೋಗ್ತಿದೆ ಎಂಬುದನ್ನು ಇಂಜಿನಿಯರ್ ಸಾಹೇಬ್ರೇ ಉತ್ತರ ನೀಡಬೇಕಿದೆ.

ಜಂಪೇನಹಳ್ಳಿ ಕೆರೆ ನೀರು ಖಾಲಿ:

ಪಟ್ಟಣದ ಅರ್ಧ ಜನರಿಗೆ ನೀರು ಪೂರೈಕೆ ಮಾಡುವ ಜಂಪೇನಹಳ್ಳಿ ಕೆರೆಯ ನೀರು ಖಾಲಿಯಾಗಿ 2 ತಿಂಗಳಾಗಿದೆ. ಕೆರೆಯ ಏರಿ ಮತ್ತು ತೂಬು ದುರಸ್ಥಿಯಾಗಿ ಮಳೆಯಿಂದ ತುಂಬಿದ ಕೆರೆಯು ರಾತ್ರೋ ರಾತ್ರಿ ಖಾಲಿ ಆಗುತ್ತೆ. ಕಳೆದ 25 ವರ್ಷದಿಂದ ಕೆರೆಯ ಪುನಶ್ಚೇತನ ಕಾರ್ಯ ನಡೆದಿಲ್ಲ. ಕೆರೆಯ ದಾಖಲೆಯು ಕಂದಾಯ ಇಲಾಖೆ, ಗ್ರಾಪಂ ಅಥವಾ ಸಣ್ಣ ನೀರಾವರಿ ಇಲಾಖೆ ಬಳಿ ಇಲ್ಲದ ಪರಿಣಾಮ ಕೆರೆಯು ಈಗಾಗಲೇ ಒತ್ತುವರಿಗೆ ಬಲಿಯಾಗಿ ಮುಕ್ಕಾಲು ಕೆರೆಯು ಮಾಯವಾಗಿದೆ.

ನಮ್ಮ ವಾರ್ಡಿಗೆ ನಾವು ಕೇಳಿದ್ರೇ ಮಾತ್ರ 10 ದಿನಕ್ಕೊಮ್ಮೆ ನೀರು ಬೀಡ್ತಾರೆ. ಹೇಮಾವತಿ ನೀರನ್ನೇ ನಾವೆಂದು ನೋಡಿಲ್ಲ. ನೀರು ಪೂರೈಕೆ ಮಾಡುವಲ್ಲಿ ಪಪಂ ತಾರತಮ್ಯ ಮಾಡುತ್ತಿದೆ. ನಮ್ಮ ಮತಕ್ಕಾಗಿ ಬರುವ ಪಪಂ ಸದಸ್ಯರು ನಮ್ಮ ಸಮಸ್ಯೆ ಆಲಿಸುವ ಪ್ರಯತ್ನ ಮಾಡೋದಿಲ್ಲ. ದಯವಿಟ್ಟು ಶಾಸಕರು ಪ್ರತಿ ವಾರ್ಡಿಗೆ ಖುದ್ದಾಗಿ ಭೇಟಿ ನೀಡಿ ನಮ್ಮ ಸಮಸ್ಯೆ ಆಲಿಸಬೇಕಿದೆ. – ಲಕ್ಷ್ಮಮ್ಮ, 3ನೇ ವಾರ್ಡ್‌, ಸ್ಥಳೀಯ ಮಹಿಳೆ ಕೊರಟಗೆರೆ

ಜಂಪೇನಹಳ್ಳಿ ಕೆರೆಯ ನೀರು ಖಾಲಿಯಾಗಿ ಎರಡು ತಿಂಗಳಾಗಿದೆ. ಅಗ್ರಹಾರ ಕೆರೆಯಲ್ಲಿ ಇನ್ನೂ 3ತಿಂಗಳಿಗೆ ಆಗುವಷ್ಟು ಹೇಮಾವತಿ ನೀರಿದೆ. ಪಪಂಯ 25 ಕೊಳವೆ ಬಾವಿ ಮತ್ತು ಖಾಸಗಿಯ 2 ಕೊಳವೆ ಬಾವಿಯಿಂದ ನೀರಿನ ಪೂರೈಕೆ ಆಗ್ತಿದೆ. 6 ರಿಂದ 8 ದಿನಕ್ಕೊಮ್ಮೆ ವಾರ್ಡುಗಳಿಗೆ ನೀರು ಸರಬರಾಜು ಆಗುತ್ತಿದೆ. ಕೆಎಸ್‍ಆರ್‌ಟಿಸಿ ನೀರಿನ ಶೇಖರಣಾ ಘಟಕಕ್ಕೆ ಹೇಮಾವತಿ ನೀರಿನ ಪೈಪ್‍ಲೈನ್ ಸಂಪರ್ಕಕ್ಕೆ ಪಪಂಗೆ ಸೂಚಿಸಲಾಗಿದೆ. – ಅಂಜಿನಪ್ಪ, ಯೋಜನಾ ನಿರ್ದೇಶಕ, ನಗರಾಭಿವೃದ್ದಿ ಇಲಾಖೆ, ತುಮಕೂರು

Advertisement

Udayavani is now on Telegram. Click here to join our channel and stay updated with the latest news.

Next