ಕೊರಟಗೆರೆ: ರೈತರ ಜೀವನಾಡಿ ಆಗಿರುವ ತೀತಾ ಜಲಾಶಯ ಮಳೆರಾಯನ ಕೃಪೆಯಿಂದ ದಶಕಗಳ ನಂತರ ಕೋಡಿ ಬಿದ್ದಿದೆ.
ದೇವರಾಯನ ದುರ್ಗದ ತಪ್ಪಲಿನಲ್ಲಿ ಉದಯಿಸುವ ಜಯ ಮಂಗಲಿ ನದಿ ಪಾತ್ರದ ಏಕೈಕ ಜಲಾಶಯ ಇದಾಗಿದೆ. ಜಯಮಂಗಲಿ ನದಿ ಹಾಗೂ ತೀತಾ ಜಲಾಶಯ ಕೊರಟಗೆರೆ ಕ್ಷೇತ್ರದ ಸಾವಿರಾರು ರೈತರಿಗೆ ನೀರಿನ ಅಸರೆಯಾಗಿದೆ.
ತಾಲ್ಲೂಕಿನ ಕೋಳಾಲ ಹೋಬಳಿ ಸುಪ್ರಸಿದ್ಧ ಗೊರವನಹಳ್ಳಿ ಮಹಾಲಕ್ಷ್ಮಿ ಪುಣ್ಯಕ್ಷೇತ್ರದ ಸಮೀಪ ಇರುವಂತಹ ಜಲಾಶಯ ಮಲೆನಾಡಿನ ಸೊಬಗನ್ನು ನಾಚಿಸುವಂತಿದೆ. ತೀತಾ ಜಲಾಶಯದ ತೂಬಿನ ಮಟ್ಟ 764ಮೀ ಇದೆ. ಎಡದಂಡೆ ಮತ್ತು ಬಲದಂಡೆಯ ತೂಬಿನ ನಾಲೆಯ ಮೂಲಕ20 ಕ್ಕೂ ಅಧಿಕ ಗ್ರಾಮದ ಸಾವಿರಾರು ರೈತರಿಗೆ ಇದರಿಂದ ನೀರಾವರಿ ಉಪಯೋಗವಾಗಲಿದೆ.
ತೀತಾ ಜಲಾಶಯದ ಬಲದಂಡೆಯ ತೂಬು ಮತ್ತು ನಾಲೆಯ ಮೂಲಕ ತೀತಾ, ವೆಂಕಟಾಪುರ, ಗಡ್ಡೋಬನಹಳ್ಳಿ, ಕಂಬದಹಳ್ಳಿ, ಮೇಳೆಹಳ್ಳಿ ಎಡದಂಡೆಯ ತೂಬು ಮತ್ತು ನಾಲೆಯ ಮೂಲಕ ಗೊರವನಹಳ್ಳಿ ಮಾದವಾರ , ತಿಮ್ಮನಹಳ್ಳಿ ತುಂಬುಗಾನಹಳ್ಳಿ, ಚಿಕ್ಕವಳ್ಳಿ ರಾಜಯ್ಯನಪಾಳ್ಯ,ಹೊನ್ನಾರನಹಳ್ಳಿ, ಕ್ಯಾಮೇನಹಳ್ಳಿ, ಬಿದಲೋಟಿ, ಹೊಳವನಹಳ್ಳಿ, ಕತ್ತಿನಾಗೇನಹಳ್ಳಿ ಗ್ರಾಮದ ರೈತರಿಗೆ ನೀರಾವರಿಯ ಅನುಕೂಲ ಕಲ್ಪಿಸಲಿದೆ.
ಕೊರಟಗೆರೆಯ ಕ್ಷೇತ್ರದ ಜೀವನಾಡಿ ಆದ ತೀತಾ ಜಲಾಶಯ ತುಂಬಿದ ಸಂತೋಷಕ್ಕೆ ಸ್ಥಳೀಯ ರೈತಾಪಿ ವರ್ಗ,ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಕರುನಾಡಿನ ಪ್ರವಾಸಿ ತಾಣವಾಗಿರುವ ಮಹಾಲಕ್ಷ್ಮಿ ದರ್ಶನಕ್ಕೆ ಆಗಮಿಸುವ ಸಾವಿರಾರು ಭಕ್ತಾದಿಗಳು ತೀತಾ ಜಲಾಶಯಕ್ಕೆ ಬರುತ್ತಿದ್ದಾರೆ. ತೀತಾ ಜಲಾಶಯದ ಕೋಡಿ ಬಿದ್ದ ನೀರು ಚಿಕ್ಕವಳ್ಳಿ ಧರ್ಮಸಾಗರ ಕೆರೆಗೆ ಹರಿಯುತ್ತಿದ್ದು ರೈತರ ಮುಖದಲ್ಲಿ ಸಂತೋಷ ಮನೆ ಮಾಡಿದೆ.
ರೈತರ ಅನುಕೂಲಕ್ಕಾಗಿ ಜಯಮಂಗಲಿ ನದಿಪಾತ್ರಕ್ಕೆ ಅಡ್ಡಲಾಗಿ 1978ರಲ್ಲಿ ತೀತಾ ಜಲಾಶಯ ನಿರ್ಮಾಣವಾಗಿದೆ. 1991 ರಲ್ಲಿ ಕೋಡಿ ಬಿದ್ದಿದ್ದು ಎರಡು ದಶಕಗಳ ನಂತರ ಮೊದಲ ಸಲ ಕೋಡಿ ಬಿದ್ದಿದೆ. ಜಯಮಂಗಲಿ ನದಿಪಾತ್ರದ ಸಾವಿರಾರು ರೈತರಿಗೆ ನೀರಿನ ಅನುಕೂಲ ಆಗಲಿದೆ. ಸರ್ಕಾರಿ ಮತ್ತು ಹೇಮಾವತಿ ಇಲಾಖೆ ನಾಲೆಗಳ ಮೂಲಕ ರೈತರಿಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕಿದೆ
.- ಮಾರುತಿ- ರೈತ ತೀತಾ ಗ್ರಾಮ
ತೀತಾ ಜಲಾಶಯ ತುಂಬಿ ಕೋಡಿ ಬಿದ್ದ ಹಿನ್ನಲೆಯಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಜಲಾಶಯವನ್ನು ನೋಡಲು ನಿಷೇಧಿಸಲಾಗಿದೆ. ಜಲಾಶಯದ ಭದ್ರತೆಗಾಗಿ ಇಬ್ಬರು ಪೋಲಿಸ್ ಸಿಬ್ಬಂದಿಗಳನ್ನು ನೇಮಿಸಲಾಗಿದೆ
.- ನಾಗರಾಜು ಪಿಎಸ್ಐ.ಕೊರಟಗೆರೆ.