ಕೊರಟಗೆರೆ : ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಬೂದಗವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಮಟೇನಹಳ್ಳಿ ಗ್ರಾಮಕ್ಕೆ ರಸ್ತೆ ಇಲ್ಲದೇ ಹರಿಯುವ ಹಳ್ಳದಲ್ಲಿ ಪ್ರತಿ ನಿತ್ಯವೂ ಓಡಾಡುವ ಸ್ಥಿತಿ ನಿರ್ಮಾಣವಾಗಿತ್ತು ಈ ವಿಚಾರವಾಗಿ ಉದಯವಾಣಿ ಪತ್ರಿಕೆಯಲ್ಲಿ ವರದಿಯನ್ನು ಪ್ರಕಟಿಸಲಾಗಿತ್ತು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು.
ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದ ಕುಮಟೇನಹಳ್ಳಿ
ಗ್ರಾಮಕ್ಕೆ ತಹಶೀಲ್ದಾರ್ ನಾಹಿದಾ ಜಮ್ ಜಮ್ ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವಿಕುಮಾರ್, ಸಹಾಯಕ ಇಂಜಿನಿಯರ್ ಮುಶೀರ್, ರಾಜಸ್ವ ನಿರೀಕ್ಷಕರಾದ ಅಮ್ಜದ್, ಗ್ರಾಮ ಲೆಕ್ಕಿಗ ರಮೇಶ, ತಾಲೂಕು ಸರ್ವೆ ಇಲಾಖೆಯ ನಾಗಲಾಂಬಿಕೆ, ಮತ್ತು ಗ್ರಾಮ ಸಹಾಯಕರು ಈ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ನಕಾಶೆ ರಸ್ತೆ ತೆರವು ಮಾಡಲು ಭೂ ಸರ್ವೆ ಮಾಡಿ ಗ್ರಾಮದ ಸರ್ವೇ ನಂಬರ್ 10 ರ ಮತ್ತು 59 ಮದ್ಯೆ ಹಾದು ಹೋಗುವ ಬಂಡಿ ಜಾಡು ರಸ್ತೆ ಒತ್ತುವರಿ ಮಾಡಿರುವ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದರು.
ಕುಮಟೇನಹಳ್ಳಿಯಲ್ಲಿ ಗ್ರಾಮಕ್ಕೆ ನಕಾಶೆ ರಸ್ತೆ ಇದ್ದು ಇಲ್ಲದಂತೆ ಮಾಯವಾಗಿತ್ತು.ನಮ್ಮ ಉದಯವಾಣಿ ಪತ್ರಿಕೆಯ ವರದಿ ನೋಡಿದ ಅಧಿಕಾರಿಗಳು ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಮುಂದಾಗಿದ್ದಾರೆ.
ಹರಿಯುವ ಹಳ್ಳದ ಮದ್ಯೆಯಲ್ಲಿಯೇ ಇಷ್ಟು ದಿನ ಸಾರ್ವಜನಿಕರು, ವಿದ್ಯಾರ್ಥಿ ಗಳು, ರೈತರು ಓಡಾಡುತ್ತಿದ್ದರು.ಈ ಸಮಸ್ಯೆಯ ಬಗ್ಗೆ ಗ್ರಾಮಸ್ಥರು ತಹಶೀಲ್ದಾರ್ ರವರಿಗೆ ಮನವಿ ಮಾಡಿದ್ದರು. ನಕಾಶೆ ರಸ್ತೆ ತೆರವು ಮಾಡಿ ಸುಸಜ್ಜಿತವಾದ ರಸ್ತೆಯನ್ನು ನಿರ್ಮಿಸಲು ಮನವಿ ಸಲ್ಲಿಸಿದ್ದರು.
ಪತ್ರಿಕೆಯು ಜನರ ಕಷ್ಟಗಳ ಬಗ್ಗೆ ವರದಿ ಮಾಡಿದ ತಕ್ಷಣವೇ ತಹಶೀಲ್ದಾರ್ ಎಚ್ಚೆತ್ತು ಕೊಂಡು ನಕಾಶೆ ರಸ್ತೆ ತೆರವು ಕಾರ್ಯಾಚರಣೆ ಮಾಡಿ ಕ್ರಮ ಜರುಗಿಸಿದ್ದಾರೆ ಮತ್ತು ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಈ ಗ್ರಾಮಕ್ಕೆ ಮೇಲು ಸೇತುವೆ ನಿರ್ಮಾಣ ಮಾಡಲು ಸ್ಥಳ ಪರಿಶೀಲನೆ ಮಾಡಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರವಿಕುಮಾರ್ ಉನ್ನತ ಅಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ವರದಿ ನೀಡಿದ್ದಾರೆ.
ಈ ಕುಗ್ರಾಮಕ್ಕೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳ ಜೊತೆಗೆ ಮುಖ್ಯವಾಗಿ ಅಭಿವೃದ್ದಿ ಕಾರ್ಯ ಮಾಡಬೇಕೆಂದು ವರದಿ ಮಾಡಿದ ಉದಯವಾಣಿ ಪತ್ರಿಕೆಗೆ ಸ್ಥಳೀಯ ಜನರು ಮತ್ತು ನಾಗರೀಕರು ಧನ್ಯವಾದಗಳನ್ನು ತಿಳಿಸಿದ್ದಾರೆ.