Advertisement

ತುಮಕೂರು ಜಿಲ್ಲಾಧಿಕಾರಿಗಳೇ ಬನ್ನಿ ನಮ್ಮೂರಿಗೆ :ಗ್ರಾಮವಾಸ್ತವ್ಯಕ್ಕೆ ಗಾಂಧಿನಗರ ದಲಿತರ ಆಗ್ರಹ

10:30 AM Sep 03, 2022 | Team Udayavani |

ಕೊರಟಗೆರೆ : 10 ವರ್ಷದಿಂದ ತೆಂಗಿನ ಗರಿಯ ಗುಡಿಸಲೇ ಇವರಿಗೆ ಅರಮನೆ.. ಮಳೆರಾಯನ ಆರ್ಭಟಕ್ಕೆ ನರಕ, ಸಿಡಿಲು-ಮಿಂಚಿನ ರಭಸಕ್ಕೆ ನಡುಕ.. ರಾತ್ರಿಯಾದ್ರೇ ಕರಡಿ-ಚಿರತೆಯ ಕಾಟದಿಂದ ಹೊರಗಡೆ ಬರುವುದೇ ಕಷ್ಟಸಾಧ್ಯ. ಬೆಳಕೆ ಇಲ್ಲದ ಅರಮನೆಯೊಳಗೆ ಪ್ರತಿನಿತ್ಯ ಜೀವನ.ಗಾಂಧಿನಗರದ ದಲಿತ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಅನುಧಾನವೇ ಮರೀಚಿಕೆಯಾಗಿದೆ

Advertisement

ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಬುಕ್ಕಾಪಟ್ಟಣ ಗ್ರಾಪಂ ವ್ಯಾಪ್ತಿಯ ಗಾಂಧಿನಗರ ಗ್ರಾಮದಲ್ಲಿ 55 ಕ್ಕೂ ಅಧಿಕ ದಲಿತ ಕುಟುಂಬ ವಾಸವಿದ್ದಾರೆ. 200 ಕ್ಕೂ ಅಧಿಕ ಮತದಾರರು ಇದ್ದಾರೆ. 20ಕ್ಕೂ ಅಧಿಕ ಮನೆಗಳಿಗೆ ಭದ್ರತೆಯೇ ಇಲ್ಲ. 8 ಕ್ಕೂ ಅಧಿಕ ದಲಿತರು ಕಳೆದ 10 ವರ್ಷದಿಂದ ಗುಡಿಸಲಿನಲ್ಲೇ ವಾಸವಿದ್ದಾರೆ. ಗಾಂಧಿನಗರದ ಜನತೆ ಶುದ್ದ ಕುಡಿಯುವ ನೀರನ್ನೂ ಕಂಡೇ ಇಲ್ವಂತೆ.

ಕೊರಟಗೆರೆ ಕಂದಾಯ ಇಲಾಖೆ, ತಾಪಂ, ಸಮಾಜ ಕಲ್ಯಾಣ ಇಲಾಖೆ ಮತ್ತು ಸ್ಥಳೀಯ ಗ್ರಾಪಂ ಅಧಿಕಾರಿವರ್ಗಕ್ಕೆ ಗಾಂಧಿನಗರದ ಸಮಸ್ಯೆಗಳ ಚರಿತ್ರೆಯೇ ಗೊತ್ತಿದೆ. ಅಧಿಕಾರಿಗಳ ನಿರ್ಲಕ್ಷ ಮತ್ತು ಉದಾಸೀನತೆಗೆ ದಲಿತ ಬಡ ಕುಟುಂಬಗಳಿಗೆ ಕಳೆದ 10 ವರ್ಷಗಳಿಂದ ಮೂಲಭೂತ ಸೌಲಭ್ಯವೇ ಮರೀಚಿಕೆ ಆಗಿದೆ.

ತುಮಕೂರು ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಓ ಇಂತಹ ಗ್ರಾಮದಲ್ಲಿಯೇ ಗ್ರಾಮ ವಾಸ್ತವ್ಯ ಮಾಡಿ ಸೌಲಭ್ಯ ಕಲ್ಪಿಸಬೇಕಿದೆ ಎಂಬುದೇ ಸ್ಥಳೀಯರ ಆಗ್ರಹವಾಗಿದೆ.

ಇದನ್ನೂ ಓದಿ : ಭೀಕರ ಅಪಘಾತ: ನಿಂತಿದ್ದ ಬಸ್ಸಿಗೆ ಟ್ರಕ್ ಢಿಕ್ಕಿ ಹೊಡೆದು 4ಕಾರ್ಮಿಕರು ಸಾವು, 24 ಮಂದಿಗೆ ಗಾಯ

Advertisement

ದೀಪದಿಂದ ಬಡವನ ಗುಡಿಸಲೇ ಭಸ್ಮ..
ಸೀಮೆಎಣ್ಣೆಯ ದೀಪದಿಂದ ಮಾತ್ರವೇ ಇವರಿಗೆ ರಾತ್ರಿ ವೇಳೆ ಬೆಳಕು. ಮಳೆರಾಯನ ಆರ್ಭಟ ಮತ್ತು ಬಿರುಗಾಳಿಯಿಂದ ಗುಡಿಸಲಿನಲ್ಲಿ ಉರಿಯುತ್ತೀದ್ದ ಸೀಮೆಎಣ್ಣೆಯ ದೀಪ ಕೆಳಗೆ ಬಿದ್ದು ಗುಡಿಸಲಿನ ಅರ್ಧಭಾಗ ಸುಟ್ಟು ಹೋಗಿದೆ. ಗುಡಿಸಲಿನಲ್ಲಿ ಧವಸದಾನ್ಯ ಸಂಪೂರ್ಣ ನಾಶವಾಗಿ ದಲಿತನಿಗೆ ದಾರಿಕಾಣದಾಗಿದೆ. ಮನೆ ಮೊದಲೇ ಇಲ್ಲ ಈಗ ಗುಡಿಸಲು ಸುಟ್ಟುಹೋಗಿ ಬೀದಿಗೆ ಬರುವ ಪರಿಸ್ಥಿತಿ ಎದುರಾಗಿದೆ.

ಗಾಂಧಿನಗರದಲ್ಲೇ ಗ್ರಾಮವಾಸ್ತವ್ಯಕ್ಕೆ ಆಗ್ರಹ..
ಅರಣ್ಯದಿಂದ ಗ್ರಾಮಕ್ಕೆ ಆಗಮಿಸುವ ಚಿರತೆ-ಕರಡಿಯ ಭಯಕ್ಕಿಂತ ಗ್ರಾಮದಲ್ಲಿನ ಸಮಸ್ಯೆಗಳ ಭಯದಿಂದಲೇ ಅಧಿಕಾರಿಗಳು ನಮ್ಮ ಗಾಂಧಿನಗರಕ್ಕೆ ಬರುವುದಿಲ್ಲ ಎಂಬುದೇ ಸ್ಥಳೀಯರ ಮಾತಾಗಿದೆ. 25 ವರ್ಷಗಳಿಂದ ಬಗೆಹರಿಯದ ದಲಿತ ಕುಟುಂಬದ ಹತ್ತಾರು ಸಮಸ್ಯೆಗಳು ಗಾಂಧಿನಗರ ಗ್ರಾಮದಲ್ಲಿವೆ. ತುಮಕೂರು ಜಿಲ್ಲಾಧಿಕಾರಿ ಮತ್ತು ಕೊರಟಗೆರೆ ತಹಶೀಲ್ದಾರ್ ಗ್ರಾಮವಾಸ್ತವ್ಯ ಕಾರ್ಯಕ್ರಮವನ್ನು ನಮ್ಮ ಊರಿನಲ್ಲಿ ಮಾಡಿ ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಗ್ರಾಪಂಗೆ 5 ಅರ್ಜಿ ಸಲ್ಲಿಸಿ 8 ವರ್ಷವಾದ್ರು ನನಗೆ ಮನೆಯೇ ಸಿಕ್ಕಿಲ್ಲ. ಸೀಮೆಎಣ್ಣೆ ದೀಪದಿಂದ ನನ್ನ ಪುಟ್ಟ ಗುಡಿಸಲು ಸುಟ್ಟುಹೋಗಿದೆ. ಗುಡಿಸಲಿನಲ್ಲಿ ಇದ್ದ ಸಾವಿರಾರು ಮೌಲ್ಯದ ಧವಸಧಾನ್ಯ ಸುಟ್ಟುಹೋಗಿವೆ. ಗ್ರಾಪಂ ಪಿಡಿಓ ಮತ್ತು ಶಾಸಕರಿಗೆ ಮನವಿ ನೀಡಿದ್ರೂ ನನಗೇ ಅನುಕೂಲ ಆಗಿಲ್ಲ. ಗ್ರಾಪಂನಲ್ಲಿ ದಲಿತರಿಗೆ ಮನೆಯಿಲ್ಲ ಅಂತಾರೇ ನಮ್ಮ ನೋವು ಕೇಳೋರು ಯಾರು.

ಸಿದ್ದರಾಜು. ಸ್ಥಳೀಯ. ಗಾಂಧಿನಗರ.

ಬುಕ್ಕಾಪಟ್ಟಣ ಗ್ರಾಪಂಯಲ್ಲಿ ಶೇ. 75ರಷ್ಟು ದಲಿತ ಕುಟುಂಬಗಳಿವೆ. ನಮ್ಮ ಗ್ರಾ.ಪಂಗೆ ಅವಶ್ಯಕತೆಗೆ ಅನುಗುಣವಾಗಿ ಎಸ್‌ಸಿ/ಎಸ್‌ಟಿ ಮನೆಗಳೇ ಬರುತ್ತೀಲ್ಲ. ಸಾಮಾನ್ಯ ವರ್ಗಕ್ಕೆ ಮಾತ್ರ ಮನೆಗಳು ಬಂದಿವೆ. ಗಾಂಧಿನಗರ ವ್ಯಕ್ತಿಗೆ ನಾನು ವೈಯಕ್ತಿಕ ಧನಸಹಾಯ ಮಾಡಿದ್ದೇನೆ. ಬುಕ್ಕಾಪಟ್ಟಣ ಗ್ರಾಪಂಗೆ ಹೆಚ್ಚಿನ ಮನೆ ಮಂಜೂರಿಗೆ ಮಾನ್ಯ ಶಾಸಕರಿಗೆ ಮನವಿ ಮಾಡಲಾಗಿದೆ.
– ಶಿವರಾಮಯ್ಯ. ಅಧ್ಯಕ್ಷ. ಗ್ರಾಪಂ ಬುಕ್ಕಾಪಟ್ಟಣ.

ಗಾಂಧಿನಗರ ಗ್ರಾಮದಲ್ಲಿ ಈಗಾಗಲೇ 7 ಜನ ಬಡವರ ಗುಡಿಸಲು ಗುರುತಿಸಲಾಗಿದೆ. ರಾಜ್ಯ ಸರಕಾರದಿಂದ ಮನೆ ಮಂಜೂರು ಆದ ಕ್ಷಣವೇ ಗಾಂಧಿನಗರದ ಬಡಜನತೆಗೆ ಪ್ರಥಮ ಆಧ್ಯತೆ ನೀಡುತ್ತೇನೆ. ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವುದು ನಮ್ಮ ಕರ್ತವ್ಯ. ಗಾಂಧಿನಗರ ಗ್ರಾಮದ ಜನತೆಗೆ ಸಮರ್ಪಕ ಮೂಲ ಸೌಲಭ್ಯ ಕಲ್ಪಿಸುವಂತೆ ಬುಕ್ಕಾಪಟ್ಟಣ ಗ್ರಾಪಂ ಪಿಡಿಓ ಮತ್ತು ಅಧ್ಯಕ್ಷರಿಗೆ ಸೂಚಿಸಿದ್ದೇನೆ.

– ಡಾ.ದೊಡಸಿದ್ದಯ್ಯ ತಾಪಂ ಕಾರ್ಯನಿರ್ವಾಹಕ ಅಧಿಕಾರಿ. ಕೊರಟಗೆರೆ.

– ಸಿದ್ದರಾಜು. ಕೆ. ಕೊರಟಗೆರೆ 

Advertisement

Udayavani is now on Telegram. Click here to join our channel and stay updated with the latest news.

Next