ಕೊರಟಗೆರೆ: ನನಗೆ ಚುನಾವಣೆಯ ಪ್ರತಿ ಸ್ಪರ್ಧಿ ಜೆಡಿಎಸ್ ಪಕ್ಷ ಮಾತ್ರ.ಕಾಂಗ್ರೆಸ್ ಪಕ್ಷವು ಕೊರಟಗೆರೆ ಕ್ಷೇತ್ರದಲ್ಲಿ 3 ನೇ ಸ್ಥಾನಕ್ಕೆ ಇಳಿಯುತ್ತದೆ ಎಂದು ಬಿಜೆಪಿ ಅಭ್ಯರ್ಥಿ ಬಿ.ಹೆಚ್.ಅನಿಲ್‌ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಕೊರಟಗೆರೆ ಪಟ್ಟಣದಲ್ಲಿ ಸೋಮವಾರ ನಾಮಪತ್ರ ಸಲ್ಲಿಕೆ ಮತ್ತು ಬಿಜೆಪಿ ಶೋಭಾಯಾತ್ರೆ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿ ಬಿಜೆಪಿ ಪಕ್ಷದ ನನ್ನ ಕಾರ್ಯಕರ್ತರು ಇತಿಹಾಸ ಸೃಷ್ಟಿಸಿದ್ದಾರೆ. ಕೊರಟಗೆರೆ ಕ್ಷೇತ್ರದಲ್ಲಿ 2023ಕ್ಕೆ ಬಿಜೆಪಿ ಬಾವುಟ ಹಾರಾಡುವುದು ಖಚಿತ ಎಂದರು.
ಬಿಜೆಪಿ ಪಕ್ಷದ ಶೋಭಯಾತ್ರೆಯ ಬೃಹತ್ ಮೆರವಣಿಗೆಯಲ್ಲಿ 25 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಆಗಮಿಸುವ ಮೂಲಕ ಕೊರಟಗೆರೆ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಯಾಗಿದೆ. 2023ರ ಚುನಾವಣೆಗೆ ಜೆಡಿಎಸ್ ಪಕ್ಷದ ಅಭ್ಯರ್ಥಿ ಸುಧಾಕರಲಾಲ್ ನನಗೆ ಪ್ರಬಲ ಎದುರಾಳಿ ಅಷ್ಟೇ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ.ಜಿ.ಪರಮೇಶ್ವರ ನನಗೆ ಎದುರಾಳಿ ಅಲ್ಲ. ಅವರು ಕೊರಟಗೆರೆ ಕ್ಷೇತ್ರದಲ್ಲಿ 3ನೇ ಸ್ಥಾನಕ್ಕೆ ತಲುಪುವುದು ಖಚಿತವಾಗಿದೆ ಎಂದರು.
ತುಮಕೂರು ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ನಮ್ಮ ಬಿಜೆಪಿ ಪಕ್ಷವು ಆಕಾಶದ ಎತ್ತರಕ್ಕೆ ಬೆಳೆದು ನಿಂತಿದೆ. ಯಾರೇ ಹೋದ್ರು ನಮ್ಮ ಪಕ್ಷಕ್ಕೆ ನಷ್ಟ ಆಗೋದಿಲ್ಲ. ಕಾಂಗ್ರೆಸ್ ಪಕ್ಷದವ್ರು ಸಾಕಷ್ಟು ಜನ ನಮ್ಮ ಪಕ್ಷಕ್ಕೆ ಬಂದಾಗಿದೆ. ಬಿಜೆಪಿ ಶಾಸಕ ಭ್ರಷ್ಟ ಅನ್ನುತ್ತಿದ್ದ ವ್ಯಕ್ತಿಯನ್ನೇ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡು ಈಗ ನಮಗೇ ಶಕ್ತಿ ಬಂದಿದೇ ಅಂತಾರೇ. ಎತ್ತಿನಹೊಳೆ ಮತ್ತು ಹೇಮಾವತಿ ನೀರು ಏನು ಪರಮೇಶ್ವರ ತಂದಿದ್ರಾ. ನೀರಾವರಿ ಯೋಜನೆಗೆ ನಮ್ಮ ಬಿಜೆಪಿ ಸರಕಾರ ಕೊಟ್ಟಿದ್ದು ಅಲ್ಲವೇ ಎಂದರು.
Related Articles
ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಕೆ.ಮಂಜುನಾಥ ಮಾತನಾಡಿ ಕೊರಟಗೆರೆ ಕ್ಷೇತ್ರದಲ್ಲಿ ಲೋಕಾಸಭಾ ಚುನಾವಣೆಗೆ 73 ಸಾವಿರ ಮತ ಬಂದಿವೆ. ಬಿಜೆಪಿ ಪಕ್ಷವು ಕೊರಟಗೆರೆ ಕ್ಷೇತ್ರದಲ್ಲಿ ಸದೃಢ ಆಗಿದೆ ಎಂಬುದಕ್ಕೆ ಜನಸ್ತೋಮವೇ ಸಾಕ್ಷಿ. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಬರುವುದು ಎಷ್ಟು ಸತ್ಯವೋ ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವುದು ಅಷ್ಟೇ ಸತ್ಯ. ಕೊರಟಗೆರೆ ಕ್ಷೇತ್ರದ ಜನತೆ ಈಗ ಬದಲಾವಣೆ ಬಯಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಎಸ್‌ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ವೆಂಕಟೇಶ್ ದೊಡ್ಡೇರಿ, ಕೊರಟಗೆರೆ ಉಸ್ತುವಾರಿ ವಿಧುರಾವಲ್, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್, ಕೊರಟಗೆರೆ ಮಂಡಲ ಅಧ್ಯಕ್ಷ ಪವನಕುಮಾರ್, ಕಾರ್ಯದರ್ಶಿ ಗುರುಧತ್, ಯುವಧ್ಯಕ್ಷ ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ವಿಶ್ವನಾಥ ಅಪ್ಪಾಜಪ್ಪ, ಮುಖಂಡರಾದ ದಾಸಾಲುಕುಂಟೆ ರಘು, ವೆಂಕಟಾಚಲಯ್ಯ, ಗೀತಾ, ಹರ್ಷ, ಅರ್ಜುನ್, ನಳೀನಾ, ದಾಡಿ ವೆಂಕಟೇಶ್, ಪ್ರದೀಪ ಕುಮಾರ್, ಸಂಜೀವರಾಜು ಸೇರಿದಂತೆ ಇತರರು ಇದ್ದರು.
ಕೊರಟಗೆರೆ ಪಟ್ಟಣದ ಸರಕಾರಿ ಬಸ್ ನಿಲ್ದಾಣದಿಂದ 25 ಸಾವಿರಕ್ಕೂ ಅಧಿಕ ಬಿಜೆಪಿ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳ ಜೊತೆ ಗೂಡಿ ಕಂದಾಯ ಇಲಾಖೆಯ ಕಚೇರಿ ಆವರಣದವರೆಗೆ ಬಿಜೆಪಿ ಅಭ್ಯರ್ಥಿ ಬಿ.ಹೆಚ್.ಅನಿಲ್‌ಕುಮಾರ್ ಬೃಹತ್ ಮೆರವಣಿಗೆ ನಡೆಸಿದರು. ಸುಡುವ ಬಿಸಿಲಿನಲ್ಲೂ ಸಾವಿರಾರು ಬಿಜೆಪಿ ಕಾರ್ಯಕರ್ತರು ಕುಣಿಯುತ್ತಾ, ಹತ್ತಾರು ಕಡೆಯಲ್ಲಿ ಪಟಾಕಿ ಸಿಡಿಸುತ್ತಾ ತಮ್ಮ ನಾಯಕನ ಪರವಾಗಿ ಜೈಘೋಷ ಹಾಕಿ ಬಿಜೆಪಿ ಪಕ್ಷದ ಪರವಾಗಿ ಭರ್ಜರಿ ಪ್ರಚಾರ ನಡೆಸಿದರು.
ಕಟ್ಟೆ ಗಣಪತಿಗೆ ವಿಶೇಷ ಪೂಜೆ ಸಲ್ಲಿಕೆ
ನಿವೃತ್ತ ಐಎಎಸ್ ಅಧಿಕಾರಿ ಬಿ.ಹೆಚ್.ಅನಿಲ್‌ಕುಮಾರ್ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮುನ್ನಾ ಕೊರಟಗೆರೆ ಪಟ್ಟಣದ ಶ್ರೀಗುಂಡಾಂಜನೇಯ ಸ್ವಾಮಿ ದೇವಾಲಯ ಮತ್ತು ಶ್ರೀಕಟ್ಟೆಗಣಪತಿ ಸ್ವಾಮಿಗೆ ನಾಮಪತ್ರದ ಜೊತೆ ಬೇಟಿನೀಡಿ ವಿಶೇಷಪೂಜೆ ಸಲ್ಲಿಸಿದ ನಂತರ ತಮ್ಮ ಬಿಜೆಪಿ ಪಕ್ಷದ ಮುಖಂಡರ ಜೊತೆಗೂಡಿ ಏ.೧೭ರ ಸೋಮವಾರ ಮಧ್ಯಾಹ್ನ ೧೧ಕ್ಕೆ ನಾಮಪತ್ರ ಸಲ್ಲಿಸಿದರು.