ಕೊರಟಗೆರೆ: ಪಟ್ಟಣದ ಗುಂಡಾಂಜನೇಯ ಸ್ವಾಮಿಯ ಸನ್ನಿಧಾನದಲ್ಲಿ ಹನುಮ ಜಯಂತಿ ಆಚರಣೆಯ ಅಂಗವಾಗಿ ಗುಂಡಾಂಜನೇಯ ಸ್ವಾಮಿಗೆ ಬೆಳಗ್ಗೆಯಿಂದಲೇ ಅಭಿಷೇಕ, ವಿಶೇಷ ಹೂವಿನ ಅಲಂಕಾರ, ಪೂಜೆಗಳನ್ನುಮಾಡಲಾಯಿತು. ತಾಲೂಕು ದಂಡಾಧಿಕಾರಿ ನಾಹಿದಾ ಜಮ್ ಜಮ್, ಶ್ರೀ ಸುರಕ್ಷಾ ಚಾರಿಟೇಬಲ್ ಟ್ರಸ್ಟ್ ಮತ್ತು ಸಹಸ್ರ ಭಕ್ತಾದಿಗಳು ಅತ್ಯಂತ ವಿಜೃಂಭಣೆಯಿಂದ ಆಚರಿಸಿದರು.
ದೇವರ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ತಹಶೀಲ್ದಾರ್ ನಾಹಿದಾ ಜಮ್ ಜಮ್, ಮುಜರಾಯಿ ದೇವಸ್ಥಾನಗಳಲ್ಲಿ ಈಗಾಗಲೇ ಕೆಲವು ದೇವಸ್ಥಾನಗಳಿಗೆ ಅನುದಾನ ಬಿಡುಗಡೆಯಾಗಿದೆ, ಹಾಗೆಯೇ ಶ್ರೀ ಗುಂಡಾಜನೇಯ ಸ್ವಾಮಿ ದೇವಾಲಯಕ್ಕೂ ಕೂಡ ಹಣ ಬಿಡುಗಡೆಯಾಗಿದೆ, ಆದಷ್ಟು ಬೇಗ ಕೆಲಸ ಪ್ರಾರಂಭಿಸಲು ಅನುಮತಿ ನೀಡಲಾಗುವುದು, ಹಾಗೆಯೇ ಶ್ರೀ ಗುಂಡಾಂಜನೇಯ ಸ್ವಾಮಿಯು ಎಲ್ಲ ಭಕ್ತಾದಿಗಳಿಗೂ ಆರೋಗ್ಯ, ಐಶ್ವರ್ಯವನ್ನು ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಸುರಕ್ಷಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನಾಗರಾಜು ಮಾತನಾಡಿ, ಶ್ರೀ ಗುಂಡಾಂಜನೇಯ ಸ್ವಾಮಿಯು ಪುರಾತನ ಕಾಲದಿಂದಲೂ ಇಲ್ಲಿ ನೆಲೆಸಿ ಬೇಡಿ ಬಂದ ಭಕ್ತಾದಿಗಳ ಕಷ್ಟಗಳನ್ನು ನಿವಾರಿಸುತ್ತಿದ್ದಾನೆ, ಹಾಗೆಯೇ ಪುರಾತನ ಕಾಲದಿಂದಲೂ ದೇವಸ್ಥಾನವು ಹಾಗೆಯೇ ಇದೆ, ಇತ್ತೀಚಿಗೆ ನಾವೆಲ್ಲ ಸದಸ್ಯರುಗಳು ಸೇರಿ ಸುರಕ್ಷಾ ಒಂದು ಸಂಸ್ಥೆಯನ್ನು ಕಟ್ಟಿಕೊಂಡು ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮುಂದಾಗಿದ್ದೇವೆ, ಆದರೆ ಮುಜರಾಯಿ ಇಲಾಖೆಗೆ ಒಳಪಡುವ ಈ ದೇವಸ್ಥಾನವನ್ನು ಇದುವರೆಗೂ ಯಾವ ಅಧಿಕಾರಿಯೂ ಕೂಡ ಜೀರ್ಣೋದ್ಧಾರ ಮಾಡಲು ಮುಂದಾಗಿಲ್ಲ, ಇಲ್ಲಿಂದ ಭಕ್ತರು ನೀಡುವ ಹುಂಡಿಯ ಹಣವನ್ನು ಮಾತ್ರ ತೆಗೆದುಕೊಂಡು ಹೋಗುತ್ತಾರೆ, ಇನ್ನಾದರೂ ಸರ್ಕಾರ ಈ ಬಗ್ಗೆ ಗಮನ ಹರಿಸಿ ಮುಜರಾಯಿ ದೇವಸ್ಥಾನಗಳನ್ನು ಜೀರ್ಣೋದ್ಧಾರವನ್ನು ಮಾಡಬೇಕಿದೆ ಎಂದರು.
ಉಪಾಧ್ಯಕ್ಷ ರಾಘವೇಂದ್ರ ಮಾತನಾಡಿ, ನಮ್ಮ ಪೂರ್ವಜರ ಕಾಲದಿಂದಲೂ ಸುತ್ತ ಮುತ್ತಲಿನ ಜನರಲ್ಲದೆ ರಾಜ್ಯದ ವಿವಿಧ ಭಾಗಗಳಿಂದ ಇಲ್ಲಿಗೆ ಭಕ್ತಾದಿಗಳು ಬರುತ್ತಾರೆ, ಭಕ್ತಾದಿಗಳು ಬೇಡಿದ ವರವನ್ನು ಶ್ರೀ ಆಂಜನೇಯ ಸ್ವಾಮಿಯು ಈಡೇರಿಸುತ್ತಾನೆ ಎನ್ನುವ ನಂಬಿಕೆಯಿಂದಲೇ ಇಂದಿಗೂ ಸಹಸ್ರಾರು ಭಕ್ತಾದಿಗಳ ದಂಡು ಬರುತ್ತಿದ್ದಾರೆ, ಆದರೆ ಬಂದ ಭಕ್ತಾದಿಗಳಿಗೆ ಕುಳಿತುಕೊಳ್ಳಲು, ವಿಶ್ರಾಂತಿಸಲು ಜಾಗವಿಲ್ಲ, ಆದಷ್ಟು ಬೇಗ ಸರಿಪಡಿಸಬೇಕಿದೆ ಎಂದು ತಿಳಿಸಿದರು.
ಕಾರ್ಯದರ್ಶಿ ಕೆಎನ್ ಸುರೇಶ್ ಮಾತನಾಡಿ, ನಮ್ಮ ತಾತ ಮುತ್ತಾತನ ಕಾಲದಿಂದಲೂ ಶ್ರೀ ಆಂಜನೇಯ ಸ್ವಾಮಿಯ ಭಕ್ತಾದಿಗಳೇ ನಾವೆಲ್ಲರೂ, ಇಂದಿಗೂ ಪ್ರತಿ ಶನಿವಾರ ನಾವೆಲ್ಲರೂ ಪೂಜೆಯಲ್ಲಿ ಪಾಲ್ಗೊಳ್ಳುತ್ತೇವೆ, ಸಹಸ್ರಾರು ಭಕ್ತಾದಿಗಳು ಬರುವ ಶ್ರೀ ಆಂಜನೇಯ ಸ್ವಾಮಿ ಸನ್ನಿಧಾನವು ಹಿಂದಿನಿಂದಲೂ ಯಾವುದೇ ಅಭಿವೃದ್ಧಿಯನ್ನು ಕಂಡಿಲ್ಲ, ಭಕ್ತಾದಿಗಳೇ ಸಣ್ಣ ಪುಟ್ಟ ದೇವಸ್ಥಾನದ ಕೆಲಸಗಳನ್ನು ಮಾಡಿಸುತ್ತಿದ್ದಾರೆ, ಸರ್ಕಾರವು ಇತ್ತ ಕಡೆ ಗಮನ ಹರಿಸಬೇಕಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮುಜರಾಯಿ ಇಲಾಖೆಯ ಅಧಿಕಾರಿಗಳು ಹಾಗೂ ಸುರಕ್ಷಾ ಚಾರಿಟೇಬಲ್ ಟ್ರಸ್ಟ್ ಆಡಳಿತ ಮಂಡಳಿಯ ಅಧ್ಯಕ್ಷರಾದ ಶಿವಶಂಕರ್, ಗೌರವಾಧ್ಯಕ್ಷರಾದ ನಾಗರಾಜು, ಉಪಾಧ್ಯಕ್ಷರಾದ ರಾಘವೇಂದ್ರ, ಕಾರ್ಯದರ್ಶಿ ಕೆಎನ್ ಸುರೇಶ್, ಖಜಾಂಚಿ ಮಧುಸೂಧನ್ ಸೇರಿದಂತೆ ಎಲ್ಲ ಸದಸ್ಯರು ಹಾಗೂ ಭಕ್ತಾದಿಗಳು ಹಾಜರಿದ್ದರು.