ಕೊರಟಗೆರೆ: ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ನೆನೆಗುದಿಗೆ ಬಿದ್ದಿರುವ ತಾಲೂಕಿನ ನೀರಾವರಿ ಯೋಜನೆಯಾದ ಎತ್ತಿನಹೊಳೆ ಯೋಜನೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವುದರೊಂದಿಗೆ ಬೈರಗೊಂಡ್ಲು ಗ್ರಾಮದಲ್ಲಿ ನಿರ್ಮಿಸುವ ಬಫರ್ ಡ್ಯಾಂ ಸ್ಥಳಾಂತರ ವಿರೋಧಿಸಿ ಡ್ಯಾಂ ನಿರ್ಮಿಸುವಂತೆ ಮೇ೧೬ ರಂದು ಪಕ್ಷಾತೀತವಾಗಿ ರೈತರೊಂದಿಗೆ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ರೈತರ ಶಾಶ್ವತ ನೀರಿಗಾಗಿ ಹೋರಾಟ ಸಮಿತಿ ಮುಖ್ಯ ಸಂಚಾಲಕ ಜಿ.ವೆಂಕಟಾಚಲಯ್ಯ ತಿಳಿಸಿದ್ದಾರೆ.
ಪ್ರವಾಸಿ ಮಂದಿರದಲ್ಲಿ ಕೊರಟಗೆರೆ ತಾಲೂಕು ಜಯಮಂಗಲಿ ಮತ್ತು ಸುವರ್ಣಮುಖಿ ನದಿ ಪಾತ್ರದ ರೈತರ ಶಾಶ್ವತ ನೀರಿಗಾಗಿ ಹೋರಾಟ ಸಮಿತಿ ಮತ್ತು ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಶಾಶ್ವತ ಬರಪೀಡಿತ ಹಾಗೂ ಪ್ಲೋರೈಡ್ ಯುಕ್ತ ತಾಲೂಕುಗಳಾದ ಕೊರಟಗೆರೆ, ಮಧುಗಿರಿ ತಾಲೂಕುಗಳಿಗೆ ಜಯಮಂಗಲಿ ಮತ್ತು ಸುವರ್ಣಮುಖಿ ನದಿಗಳಲ್ಲಿ ಹೇಮಾವತಿ ಕುಡಿಯುವ ನೀರಾವರಿ ಯೋಜನೆ ಮೂಲಕ ನೀರು ಹರಿಸಿ ಪ್ಲೋರೈಡ್ ಮುಕ್ತ ತಾಲೂಕುಗಳನ್ನಾಗಿ ಮಾಡುವ ಯೋಜನೆ ಮತ್ತು ಎತ್ತಿನಹೊಳೆ ಯೋಜನೆ ಮೂಲಕ ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಮೂಲಕ ರೈತರ ಜಮೀನುಗಳಿಗೆ ನೀರು ಹರಿಸುವ ಯೋಜನೆಗೆ ರಾಜ್ಯದಲ್ಲಿ ೨೦೧೨ ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅವಧಿಯಲ್ಲಿ ೧೨ ಸಾವಿರ ಕೋಟಿ ಹಣದ ವೆಚ್ಚದ ಯೋಜನೆ ಸಿದ್ದವಾಗಿ ಕಾಮಗಾರಿ ಪ್ರಾರಂಭವಾಗಿತ್ತು, ಅದರೆ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷದಿಂದ ೧೦ ವರ್ಷ ಕಳೆದರೂ ಯೋಜನೆ ಪೂರ್ಣಗೊಳಿಸದೆ ಯೋಜನೆಯ ವೆಚ್ಚಮಾತ್ರ ಹೆಚ್ಚಾಗುತ್ತಿದ್ದು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಮತ್ತು ಯೋಜನೆಯ ಕಾಮಗಾರಿಗೆ ಸ್ವಾದೀನ ಪಡಿಸಿಕೊಳ್ಳುವ ರೈತರ ಜಮೀನುಗಳಿಗೆ ಪರಿಹಾರ ನೀಡದೆ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ತಾಲೂಕಿನ ಗಡಿಭಾಗ ಬೈರಗೊಂಡ್ಲು ಗ್ರಾಮ ಮತ್ತು ದೊಡ್ಡಬಳ್ಳಾಪುರ ಗಡಿಯಲ್ಲಿ ಮೂಲ ಯೋಜನೆಯಲ್ಲಿ ನಿರ್ಮಾಣ ಮಾಡಬೇಕಾದ ಬಫರ್ ಡ್ಯಾಂ ಗೆ ಸ್ವಾದೀನ ಪಡಿಸಿಕೊಳ್ಳುವ ರೈತರ ಜಮೀನುಗಳಿಗೆ ದೊಡ್ಡಬಳ್ಳಪುರ ರೈತರ ಜಮೀನುಗಳಿಗೆ ನೀಡುವ ಪರಿಹಾರ ಕೊರಟಗೆರೆ ತಾಲೂಕಿನ ರೈತರಿಗೂ ನೀಡದೆ ಅನ್ಯಾಯ ಮಾಡುತ್ತಿದ್ದು ಬೈರಗೊಂಡ್ಲುವಿನಲ್ಲಿ ನಿರ್ಮಾಣ ಮಾಡಬೇಕಾದ ಬಫರ್ ಡ್ಯಾಂ ದೊಡ್ಡಬಳ್ಳಾಪುರ ತಾಲೂಕಿಗೆ ಸ್ಥಳಾಂತರಿಸುವ ಹುನ್ನಾರ ನಡೆಯುತ್ತಿದ್ದು ತಾಲೂಕಿನ ರೈತರಿಗೆ ಮಾಡುತ್ತಿರುವ ದ್ರೋಹವಾಗಿದೆ, ಈಗಾಗಲೆ ಎತ್ತಿನಹೊಳೆ ಯೋಜನೆಯ ಕಾಮಗಾರಿಗೆ ಪೈಪ್ ಲೈನ್ ಅಳವಡಿಸುವ ಕಾಮಗಾರಿ ಬಹಳಷ್ಟು ಮುಗಿದಿದ್ದು ಬಫರ್ ಡ್ಯಾಂ ಕಾಮಗಾರಿ ಬಾಕಿ ಇದೆ, ಡ್ಯಾಂ ನಿಗದಿ ಪಡಿಸಿರುವ ಸ್ಥಳದಲ್ಲೆ ನಿರ್ಮಾಣ ಮಾಡದೆ ಡ್ಯಾಂ ಸ್ಥಳಾತಂರಕ್ಕೆ ಸರ್ಕಾರ ಕೈಹಾಕಿದೆರೆ ರೈತರೊಂದಿಗೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ನಿಗದಿತ ಸ್ಥಳದಲ್ಲೆ ಬಫರ್ ಡ್ಯಾಂ ನಿರ್ಮಾಣ ಕಾರ್ಯ ಪ್ರಾಂಭಿಸಬೇಕು ಎಂದು ಆಗ್ರಹಿಸಿದ ಅವರು ಸರ್ಕಾರ ಮತ್ತು ಜನಪ್ರತಿನಿಧಿಗಳು ತಾಲೂಕಿನ ಎಲ್ಲಾ ನದಿಗಳಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡುವ ಮೂಲಕ ತಾಲೂಕಿನಲ್ಲಿ ಅಂತರ್‌ಜಲ ಹೆಚ್ಚಿಸಲು ಮುಂದಾಗಬೇಕು ಎಂದು ಮನವಿ ಮಾಡಿದ ಅವರು ಮೇ ೧೬ ರಂದು ಪಟ್ಟಣದಲ್ಲಿ ನೀರಾವರಿ ಯೋಜನೆ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸಿ ಹಮ್ಮಿಕೊಂಡಿರುವ ಪತ್ರಿಭಟನೆಯಲ್ಲಿ ಪಕ್ಷಾತೀತವಾಗಿ ರೈತರೊಂದಿಗೆ ಭಾಗವಹಿಸುವಂತೆ ಮನವಿ ಮಾಡಿದರು.
ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಸಿದ್ದರಾಜು ಮಾತನಾಡಿ ತಾಲೂಕಿನ ಎತ್ತಿನಹೊಳೆ ಯೋಜನೆ ವಿಳಂಬದಿಂದ ರೈತರಿಗೆ ಅನ್ಯಾಯವಾಗಿದ್ದು ನೀರಾವರಿ ಯೋಜನೆ ಶೀಘ್ರ ಅನುಷ್ಠಾನಕ್ಕೆ ಮತ್ತು ತಾಲೂಕಿನ ಬೈರಗೊಂಡ್ಲು ಗ್ರಾಮದಲ್ಲಿ ಬಫರ್ ಡ್ಯಾಂ ನಿರ್ಮಾಣ ಮಾಡಬೇಕು ತಪ್ಪಿದಲ್ಲಿ ದೆಹಲಿಯಲ್ಲಿ ರೈತರು ಮಾಡಿದ ರೀತಿಯಲ್ಲಿ ಕೊರಟಗೆರೆ ತಾಲೂಕಿನಲ್ಲೂ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ ಅವರು ಎತ್ತಿನಹೊಳೆ ಯೋಜನೆಯ ಬಫರ್ ಡ್ಯಾಂ ಕಾಮಗಾರಿಗೆ ಸ್ವಾದೀನ ಪಡಿಸಿಕೊಂಡಿರುವ ರೈತರ ಜಮೀನುಗಳಿಗೆ ದೊಡ್ಡಬಳ್ಳಾಪುರ ತಾಲೂಕಿನ ರೈತರಿಗೆ ನೀಡುವ ಪರಿಹಾರ ಹಣ ತಕ್ಷಣ ಬಿಡುಗಡೆ ಮಾಡಬೇಕು ಹಾಗೂ ತಾಲೂಕಿನಲ್ಲಿ ಕಳೆದ ೪೦ ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ಬಗರ್‌ಹುಕುಂ ಸಾಗುವಳಿ ದಾರರಿಗೆ ಹಕ್ಕು ಪತ್ರ ವಿತರಣೆ ಮಾಡಬೇಕು, ಕಳೆದ ೨೦೧೮ ರಲ್ಲಿ ರೈತರಿಗೆ ಬಗರ್‌ಹುಕುಂ ಸಾಗವಳಿ ಹಕ್ಕು ಪತ್ರ ವಿತರಿಸಲಾಗಿತ್ತು ಆದರೆ ನಂತರ ಹಕ್ಕು ಪತ್ರ ವಿತರಿಸಲಾಗುತ್ತಿಲ್ಲಿ ತಾಲೂಕಿನಲ್ಲಿ ಉತ್ತಮ ತಹಶೀಲ್ದಾರ್ ನೇಮಕವಾಗಿದ್ದು ಬಗರ್ ಹುಕುಂ ಸಮಿತಿ ರಚನೆಯಾಗಿ ಕಳೆದ ೫ ತಿಂಗಳ ಹಿಂದೆ ಸಮಿತಿ ಸಭೆ ನಡೆಸಿದ್ದರೂ ಯಾವೊಬ್ಬ ರೈತರಿಗೂ ಸಾಗುವಳಿ ಚೀಟಿ ನೀಡಿಲ್ಲ, ಖಾತೆ ಮಾಡಿಲ್ಲ, ತಕ್ಷಣ ಸಂಬಂಧಿಸಿದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ತಾಲೂಕು ಜಯಮಂಗಲಿ ಮತ್ತು ಸುವರ್ಣಮುಖಿ ನದಿ ಪಾತ್ರದ ರೈತರ ಶಾಶ್ವತ ನೀರಿಗಾಗಿ ಹೋರಾಟ ಸಮಿತಿ ಪಧಾದಿಕಾರಿಗಳಾದ ಸಂಜೀವರೆಡ್ಡಿ, ಮಣವಿನಕುರಿಕೆ ಶಿವರುದ್ರಯ್ಯ, ಮಲ್ಲಣ್ಣ, ಕೊಡಗದಾಲ ಲೋಕೇಶ್‌ಕುಮಾರ್, ತೋಗರಿಘಟ್ಟ ನಾರಾಯಣಪ್ಪ, ಚಿದಾನಂದ್, ದಾಡಿವೆಂಕಟೇಶ್, ಶಿವಾನಂದ್, ಚಿದಾನಂದ್, ರೈತಸಂಘದ ಉಪಾಧ್ಯಕ್ಷ ಪುಟ್ಟರಾಜು, ಲಕ್ಷö್ಮಣ್‌ನಾಯ್ಕ್, ರಂಗರಾಜು, ರಂಗಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.