ಕೊರಟಗೆರೆ: ಹೊರ ಜಿಲ್ಲೆಗಳಲ್ಲಿ ಕಳ್ಳತನ ಮಾಡಿದ ಬೈಕ್ ಗಳನ್ನು ನಕಲಿ ನಂಬರ್ ಮೂಲಕ ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿ ನಾಲ್ಕು ಜನ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಕೊರಟಗೆರೆ ಪೋಲೀಸರು ಯಶಸ್ವಿಯಾಗಿದ್ದಾರೆ.
ಪಟ್ಟಣದಲ್ಲಿ ದಸರಾ ಹಬ್ಬದ ಪ್ರಯುಕ್ತ ಹೆಡ್ ಕಾನ್ಸ್ ಟೇಬಲ್ ಗಳಾದ ವಂಕಟೇಶ್ ಹಾಗೂ ಸಿದ್ದಲಿಂಗ ಪ್ರಸನ್ನ ರವರು ಟೌನ್ ನಲ್ಲಿ ಗಸ್ತು ತಿರುಗುತ್ತಿದ್ದಾಗ ಕೊರಟಗೆರೆ ಟೌನ್ ರಂಗಭೂಮಿ ಹೋಟೆಲ್ ಹತ್ತಿರವಿರುವ ಬೈರವ ಟೀ ಹೋಟೆಲ್ ಬಳಿ ಇದ್ದ ಮೂರು ಜನ ಆರೋಪಿಗಳು ಪೋಲೀಸರನ್ನು ನೋಡಿದ ಕೂಡಲೇ ಬೈಕ್ ಗಳೊಂದಿಗೆ ತಪ್ಪಿಸಿಕೊಳ್ಳಲು ಯತ್ನಿಸಿದ್ದವರನ್ನು ಹಿಂಬಾಲಿಸಿ ದ್ವಿಚಕ್ರ ವಾಹನ ಸಮೇತ ಹಿಡಿದು ವಿಚಾರಣೆ ನಡೆಸಿದ ವೇಳೆ ಬೈಕ್ ಕಳವು ಪ್ರಕರಣ ಬಯಲಿಗೆ ಬಂದಿದೆ.
ಸಿರಾ ತಾಲ್ಲೂಕು ಕಳ್ಳಂಬೆಳ್ಳ ಹೋಬಳಿಯ ಕದಿರೆಕಂಬದಹಳ್ಳಿಯ ಮನು.ಕೆ ಆರ್(18), ಕೊರಟಗೆರೆ ತಾಲ್ಲೂಕಿನ ಕಸಬಾ ಹೋಬಳಿಯ ತುಂಬಾಡಿಯ ರಂಗನಾಥ ಟಿ.ಎನ್ (18) ಹಾಗೂ ತುಮಕೂರು ತಾಲ್ಲೂಕು ಕೋರಾ ಹೋಬಳಿಯ ಬಿಟ್ಟನ ಕುರಿಕೆಯ ನರಸಿಂಹರಾಜು(20) ಬಂಧಿತ ಆರೋಪಿಗಳು. ಹಾಗೂ ಇನ್ನೋಬ್ಬ ಬಾಲಾಪರಾಧಿಯಾಗಿದ್ದಾನೆ.
ಇದನ್ನೂ ಓದಿ :ಸೋಮಣ್ಣ, ನನ್ನ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ : ಆರ್. ಅಶೋಕ್ ಸ್ಪಷ್ಟನೆ
ಆರೋಪಿಗಳು ದಾಬಸ್ ಪೇಟೆಯಲ್ಲಿ ಬೈಕ್ ಗಳನ್ನು ಕದ್ದು ನಕಲಿ ನಂಬರ್ ಪ್ಲೇಟ್ ಹಾಕಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದ್ದು ಇವರಿಂದ ಯಮಹಾ ಆರ್ ಎಕ್ಸ್ ಕೆಎ 01ಯು 193 ಮತ್ತು ಪಲ್ಸರ್ ಬೈಕ್ ಕೆಎ05 ಜೆ ಎಮ್ 9363 ವಶಪಡಿಸಿಕೊಂಡಿದ್ದು ,ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳು ಹಾಗೂ ಒಬ್ಬ ಬಾಲಾ ಆರೋಪಿಯನ್ನು ಕೊರಟಗೆರೆ ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಕೊರಟಗೆರೆ ಸಿಪಿಐ ಸಿದ್ದರಾಮೇಶ್ವರ, ಪಿಎಸ್ಐ ನಾಗರಾಜು, ಹಾಗೂ ಸಿಬ್ಬಂದಿಗಳಾದ ವೆಂಕಟೇಶ್ ,ಸಿದ್ದಲಿಂಗಪ್ರಸನ್ನ ಇದ್ದರು. ಈ ಸಂಬಂಧ ಕೊರಟಗೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.