ಕೊರಟಗೆರೆ: ಹೇಮಾವತಿ ಕುಡಿಯುವ ನೀರಿನ ಶುದ್ದಿಕರಣ ಘಟಕ ನಿರ್ಮಾಣಕ್ಕಾಗಿ 2009-10ರಲ್ಲಿ ಜೆಟ್ಟಿಅಗ್ರಹಾರ ರೈತರಿಂದ ಭೂಸ್ವಾಧೀನ ಪಡಿಸಿಕೊಂಡ ಜಮೀನಿನ ಭೂಪರಿಹಾರವನ್ನು 2018 ರಲ್ಲಿ ನ್ಯಾಯಾಲಯದ ಆದೇಶದ ನಂತರವೂ ನೀಡದಿರುವ ಪರಿಣಾಮ ಪಟ್ಟಣ ಪಂಚಾಯತ್ ನ ಪಿಠೋಪಕರಣ ವಶ ಪಡಿಸಿಕೊಳ್ಳುವಂತೆ ಮಧುಗಿರಿ ಅಧಿಕ ಹಿರಿಯ ಸಿವಿಲ್ ನ್ಯಾಯಾಲಯ ಆದೇಶ ಮಾಡಿರುವ ಘಟನೆ ಗುರುವಾರ ನಡೆದಿದೆ.
ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಜೆಟ್ಟಿಅಗ್ರಹಾರ ಗ್ರಾಮದ ರೈತರಾದ ಬಸವರಾಜು ಮತ್ತು ನಂದೀಶ್ ಎಂಬ ರೈತರ ಜಮೀನನ್ನು 2009ರಲ್ಲೇ ಹೇಮಾವತಿ ಕುಡಿಯುವ ನೀರಿನ ಶುದ್ದಿಕರಣ ಘಟಕ ನಿರ್ಮಾಣಕ್ಕಾಗಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. 2018ರಲ್ಲೇ ಅಗ್ರಹಾರ ರೈತರಿಗೆ ತಕ್ಷಣ ಭೂಪರಿಹಾರ ನೀಡುವಂತೆ ಕೊರಟಗೆರೆ ಪಪಂಗೆ ಮಧುಗಿರಿ ಸಿವಿಲ್ ನ್ಯಾಯಾಲಯವು ಆದೇಶ ಮಾಡಿದೆ.
ಜೆಟ್ಟಿಅಗ್ರಹಾರ ಗ್ರಾಮದ ರೈತ ಬಸವರಾಜು ಮಾತನಾಡಿ ಹೇಮಾವತಿ ನೀರಿನ ಘಟಕ ನಿರ್ಮಾಣಕ್ಕಾಗಿ 2009ರಲ್ಲಿ ನಮ್ಮ ಜಮೀನು ಸ್ವಾಧೀನ ಮಾಡಿದ್ದಾರೆ. 2018ರಲ್ಲಿ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ ಮಾಡಿದೆ. ನಮಗೇ ಇನ್ನೂ 48 ಲಕ್ಷಕ್ಕೂ ಅಧಿಕ ಭೂಪರಿಹಾರ ಬರಬೇಕಿದೆ. ನ್ಯಾಯಾಲಯದ ಆದೇಶವನ್ನು ಪಪಂಯು ಪಾಲನೆ ಮಾಡದಿರುವ ಹಿನ್ನಲೆ ಇಂದು ಪಿಠೋಪಕರಣ ಜಪ್ತಿಗೆ ಆದೇಶ ಮಾಡಲಾಗಿದೆ ಎಂದರು.
ಕೊರಟಗೆರೆ ಸಿವಿಲ್ ನ್ಯಾಯಾಲಯದ ಅಮೀನ್‌ರಾದ ಮಂಜುನಾಥ ಮಾತನಾಡಿ ಜೆಟ್ಟಿಅಗ್ರಹಾರದ ಇಬ್ಬರು ರೈತರಿಗೆ 48 ಲಕ್ಷ ರೂ.ಗೂ ಅಧಿಕ ಭೂಪರಿಹಾರ ನೀಡಲು ನ್ಯಾಯಾಲಯ ೨೦೧೮ರಲ್ಲೇ ಆದೇಶ ಮಾಡಿದೆ. ರೈತರಿಗೆ ಜಮೀನು ಸ್ವಾಧೀನದ ಪರಿಹಾರ ನೀಡುವಲ್ಲಿ ಕೊರಟಗೆರೆ ಪಪಂ ವಿಳಂಭ ಮಾಡಿದೆ. ಇಂದು ಮಧುಗಿರಿ ಸಿವಿಲ್ ನ್ಯಾಯಾಲಯದ ಆದೇಶದಂತೆ ಕೊರಟಗೆರೆ ಪಪಂಯ ಪಿಠೋಪಕರಣವನ್ನು ಜಪ್ತಿ ಮಾಡಿದ್ದೇವೆ ಎಂದು ಕೊರಟಗೆರೆಯ ಸಿವಿಲ್ ನ್ಯಾಯಾಲಯದ ಮಂಜುನಾಥ ಅಮೀನ್ ತಿಳಿಸಿದರು.
ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಮಾತನಾಡಿ ನ್ಯಾಯಾಲಯದ ಆದೇಶವನ್ನು ಕಾರ್ಯಗತ ಮಾಡುವುದು ಪಪಂ ಅಧಿಕಾರಿಗಳ ಪ್ರಮುಖ ಜವಾಬ್ದಾರಿ. ಪ.ಪಂ. ನಿಂದ ಆದೇಶ ನಿರ್ಲಕ್ಷ ಮಾಡಿರುವ ಪರಿಣಾಮ ಈಗ ಸಮಸ್ಯೆ ಆಗಿದೆ. ನ್ಯಾಯಾಲಯ ಪಿಠೋಪಕರಣ ವಶಕ್ಕೆ ಪಡೆದಿರುವ ಬಗ್ಗೆ ನನಗೇ ಮಾಹಿತಿ ಇಲ್ಲ. ಸರಕಾರದ ಅನುಧಾನ ಮತ್ತು ಪ.ಪಂ. ನಿಂದ ತಕ್ಷಣ ಮಾಹಿತಿ ಪಡೆದು ಸಮಸ್ಯೆ ಬಗೆಹರಿಸುತ್ತೇನೆ ಎಂದರು.
ಮಧುಗಿರಿಯ ಘನ ಸಿವಿಲ್ ನ್ಯಾಯಾಲಯವು 2018ರಲ್ಲೇ ಆದೇಶ ಮಾಡಿದೆ. ಕೊರಟಗೆರೆ ಪಪಂ ಮುಖ್ಯಾಧಿಕಾರಿಗೆ ಈ ಹಿಂದೆಯೇ ವಾರೆಂಟ್ ಜಾರಿಯಾಗಿದೆ. ನ್ಯಾಯಾಲಯದ ಆದೇಶವನ್ನು ನಿರ್ಲಕ್ಷ ಮಾಡಿರುವ ಪರಿಣಾಮ ಕೊರಟಗೆರೆ ಪಪಂಯ ಮುಖ್ಯಾಧಿಕಾರಿ, ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಕಚೇರಿಯ ಪಿಠೋಪಕರಣ ಜಪ್ತಿ ಮಾಡಿ ಮಧುಗಿರಿ ಸಿವಿಲ್ ನ್ಯಾಯಾಲಯವು ಆದೇಶ ಮಾಡಿದೆ.
ಕೊರಟಗೆರೆ ಸಿವಿಲ್ ನ್ಯಾಯಾಲಯದ ಅಮೀನರಾದ ಮಂಜುನಾಥ ಮತ್ತು ಪರಮೇಶ್ವರಯ್ಯ ನೇತೃತ್ವದಲ್ಲಿ ಪಪಂ ಕಚೇರಿಯ ಪಿಠೋಪಕರಣವನ್ನು ವಶಕ್ಕೆ ಪಡೆಯಲಾಗಿದೆ. ಇದೇ ಸಂದರ್ಭದಲ್ಲಿ ಪಪಂಯ ಮುಖ್ಯಾಧಿಕಾರಿ ಭಾಗ್ಯ ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.