Advertisement

Koratagere : ಕೇಂದ್ರ ಬರ ಅಧ್ಯಯನ ತಂಡ ಭೇಟಿ; ಬೆಳೆ ವೀಕ್ಷಣೆ

09:09 PM Oct 06, 2023 | Team Udayavani |

ಕೊರಟಗೆರೆ: ತುಮಕೂರನ್ನು ಬರ ಪೀಡಿತ ಜಿಲ್ಲೆ ಎಂದು ಸರ್ಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ಬರಪೀಡಿತ ತಾಲೂಕುಗಳ ಪರಿಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಬರ ಅಧ್ಯಯನ ತಂಡ ಶುಕ್ರವಾರ ತಾಲೂಕಿನ ಬೈರೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿತು.

Advertisement

ಕೇಂದ್ರ ಜಲ ಆಯೋಗದ ನಿರ್ದೇಶಕ ವಿ.ಆಶೋಕ್‌ಕುಮಾರ್, ಎಂಎನ್‌ಸಿಎಫ್‌ಸಿಯು ಉಪನಿರ್ದೇಶಕ ಕರಣ್‌ಚೌಧರಿ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪಕಾರ್ಯದರ್ಶಿ ಸಂಗೀತ್‌ಕುಮಾರ್, ರಾಜ್ಯದ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ಹಿರಿಯ ಸಲಹೆಗಾರ ಡಾ.ಶ್ರೀನಿವಾಸರೆಡ್ಡಿ ಅವರನ್ನು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಸಿಇಓ ಪ್ರಭು ಅವರನ್ನು ಸ್ವಾಗತಿಸಿದರು.

ಕೇಂದ್ರ ಜಲ ಆಯೋಗದ ನಿರ್ದೇಶಕ ವಿ.ಆಶೋಕ್‌ಕುಮಾರ್ ನೇತೃತ್ವದ ತಂಡ ತಾಲೂಕಿನಲ್ಲಿ ಬರ ಅಧ್ಯಯನ ಮಾಡಿತು. ತಂಡವು ಮೊದಲಿಗೆ ಬೈರೇನಹಳ್ಳಿ ಗ್ರಾಮದ ನಾಗೇಂದ್ರಕುಮಾರ್ ಎಂಬುವರ ರೈತರ ಜಮೀನಿಗೆ ಭೇಟಿ ನೀಡಿ 1.20ಎಕರೆ ಪ್ರದೇಶದಲ್ಲಿ ಬೆಳೆದ ಶೇಂಗಾ ಬೆಳೆ ಮತ್ತು ಸುತ್ತಮುತ್ತಲಿನ ರೈತರ ಜಮೀನಿನ ತೊಗರಿ, ಜೋಳ, ರಾಗಿ, ಮುಸುಕಿನ ಜೋಳ ಬೆಳೆಗಳ ಬಗ್ಗೆ ಪರಿಶೀಲನೆ ನಡೆಸಿದರು.

ರೈತ ನಾಗೇಂದ್ರಕುಮಾರ್ ಅವರ ಜಮೀನಿನಲ್ಲಿ ನೀರಿಲ್ಲದೆ ಒಣಗಿದ್ದ ಶೇಂಗಾ ಬೆಳೆ ವೀಕ್ಷಿಸಿದರು, ಭಾಗ್ಯಮ್ಮ ಅವರ ಜಮೀನಿನಲ್ಲಿಯೂ ಒಣಗಿದ ಬೆಳೆ ಕಂಡು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದರು.

ಬರ ಅಧ್ಯಯನ ತಂಡವು ಭೇಟಿ ನೀಡಿದ ವೇಳೆ ಕರ್ನಾಟಕ ರೈತ ಸಂಘದ ಅಧ್ಯಕ್ಷ ಸಿದ್ದರಾಜು ಸೇರಿದಂತೆ ತಾಲೂಕಿನ ಅನೇಕ ರೈತರು ತಮ್ಮ ಅಳಲನ್ನು ತೋಡಿಕೊಂಡು ಬೆಳೆ ನಷ್ಟ ಪರಿಹಾರವನ್ನು ನೀಡುವಂತೆ ಕೇಂದ್ರ ಜಲ ಆಯೋಗದ ನಿರ್ದೇಶಕ ವಿ.ಆಶೋಕ್‌ಕುಮಾರ್‌ರವರ ಬಳಿ ಮನವಿ ಪತ್ರ ಮೂಲಕ ಮನವಿ ಮಾಡಿಕೊಂಡರು.

Advertisement

ಬರ ಅಧ್ಯಯನದ ಅಧಿಕಾರಿಗಳ ತಂಡವು ಭೇಟಿ ನೀಡಿದ ವೇಳೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಸಿಇಓ ಪ್ರಭು, ತಾ.ಪಂ ಇಓ ದೊಡ್ಡಸಿದ್ದಯ್ಯ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜು, ಪೋಲಿಸ್ ಇಲಾಖೆಯ ಸಿಪಿಐ ಸುರೇಶ್, ಸಬ್ ಇನ್ಸ್ಫೆಕ್ಟರ್ ಚೇತನ್‌ಕುಮಾರ್ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಕೇಂದ್ರ ಸರ್ಕಾರ ಎಕರೆಗೆ 7 ಸಾವಿರ ನಿಗದಿಪಡಿಸದೆ, ಅದನ್ನು 25 ಸಾವಿರ ರೂಗೆ ಹೆಚ್ಚಿಸಬೇಕೆಂದು ಕೇಂದ್ರದ ಬರ ಅಧ್ಯಯನ ತಂಡದ ಅಧಿಕಾರಿಗಳಲ್ಲಿ ರೈತರೆಲ್ಲರೂ ಮನವಿ ಮಾಡಿಕೊಂಡಿದ್ದೇವೆ, ಸಾಲ ಮಾಡಿ ರೈತರು ತಮ್ಮ ತಮ್ಮ ಜಮೀನುಗಳಲ್ಲಿ ಕೃಷಿಯನ್ನು ಮಾಡಿದ್ದಾರೆ, ಆದರೆ ಈ ಬಾರಿ ಮಳೆಯು ಕೈಕೊಟ್ಟಿದೆ ಆದ್ದರಿಂದ ಕೇಂದ್ರ ಸರ್ಕಾರ ಇದನ್ನು ಜಾರಿಗೊಳಿಸಿ ರೈತರಿಗೆ ನೆರವಾಗಬೇಕೆಂದು ಮನವಿ ಮಾಡುತ್ತೇವೆ.
ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾ.ಅಧ್ಯಕ್ಷ ಸಿದ್ದರಾಜು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next