ಕೊರಟಗೆರೆ: ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಓರ್ವ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಮಗುವಿನ ಸ್ಥಿತಿ ಗಂಭೀರವಾದ ಘಟನೆ ಕೊರಟಗೆರೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಜ.8ರ ಬುಧವಾರ ನಡೆದಿದೆ.
ತಾಲೂಕಿನ ಚೆನ್ನರಾಯನದುರ್ಗ ಗ್ರಾಮದ ಅಮರ್‌ನಾಥ್ (35) ಸ್ಥಳದಲ್ಲೇ ಮೃತಪಟ್ಟವರು.
ಕೊರಟಗೆರೆ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ತಿರುವಿನಲ್ಲಿ ದ್ವಿಚಕ್ರ ವಾಹನ ಚಲಿಸುವ ಸಂದರ್ಭದಲ್ಲಿ ಅತಿವೇಗವಾಗಿ ಬಂದ ಕಾರು, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರು ಮತ್ತು ದ್ವಿಚಕ್ರ ವಾಹನ ಎರಡು ಪಲ್ಟಿ ಹೊಡಿದಿದ್ದು, ವಾಹನಗಳ ಬಿಡಿಭಾಗಗಳು ಚೆಲ್ಲಾಪಿಲ್ಲಿಯಾಗಿವೆ.
ಸ್ಥಳೀಯರ ಸಹಕಾರದಿಂದ ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನು ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.
ಒಂದೇ ಬೈಕಿನಲ್ಲಿದ್ದ ಮತ್ತಿಬ್ಬ ಬೈಕ್ ಸವಾರರಾದ ಲೊಕೇಶ್ ಅವರ ಕಾಲು ಮುರಿದಿದ್ದು, ಕೃತಿಕ್ ರಾಜ್(14) ಎಂಬ ಬಾಲಕನ ತಲೆಗೆ ಪೆಟ್ಟುಬಿದ್ದು ಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತ ಸಂಭವಿಸುತ್ತಿದ್ದಂತೆ ಭಾಸ್ಕರ್ ತನ್ನ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಕೊರಟಗೆರೆ ಪೊಲೀಸ್ ಠಾಣೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.