ಕೊರಟಗೆರೆ: ಹೊಸಕೆರೆಯಲ್ಲಿ ಭಾನುವಾರ ಈಜಾಡಲು ಹೋಗಿ ನೀರು ಪಾಲಾಗಿದ್ದ ಮಹಾರಾಷ್ಟ್ರದ ವಿದ್ಯಾರ್ಥಿ ಗೌರವ್ ಸಿಂಗ್ ಮೃತದೇಹ ಸೋಮವಾರ ಪತ್ತೆಯಾಗಿದೆ.
ಸತತ 24 ಗಂಟೆಗಳಿಂದ ಮೃತ ದೇಹ ಪತ್ತೆ ಹಚ್ಚಲು ತೊಡಗಿದ್ದ ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಕೊನೆಗೂ ಮೃತ ದೇಹವು ನೀರಿನಲ್ಲಿ ತೇಲಿ ಪತ್ತೆಯಾಗಿದೆ. ಕೊರಟಗೆರೆ ಪಿಎಸ್ಐ ನಾಗರಾಜು ಮತ್ತು ಅಗ್ನಿ ಶಾಮಕ ಅಧಿಕಾರಿ ಶಿವಣ್ಣ ಜಂಟಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಮೃತ ಗೌರವ್ ಸಿಂಗ್ ಪೋಷಕರು ತಿಳಿಸಿದಂತೆ ಮರಣೋತ್ತರ ಪರೀಕ್ಷೆ ಮುಗಿದ ನಂತರ ಮಹಾರಾಷ್ಟ್ರಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಯೇ ಅಂತ್ಯ ಸಂಸ್ಕಾರ ಮಾಡುವುದಾಗಿ ತಿಳಿಸಿದ್ದಾರೆ. ಮೃತ ದೇಹವನ್ನು ಕೊರಟಗೆರೆಯ ಸಾರ್ವಜನಿಕರ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.
ಪಟ್ಟಣದ ಹನುಮಂತಪುರದ ಪ್ರಿಯದರ್ಶಿನಿ ಕಾಲೇಜ್‌ನಲ್ಲಿ ಹೊರರಾಜ್ಯಗಳಿಂದ ಅಥವಾ ಹೊರದೇಶಗಳಿಂದ ಬಿ ಫಾರ್ಮ್ ಮತ್ತು ಡಿ ಫಾರ್ಮ್ ವಿದ್ಯಾಭ್ಯಾಸಕ್ಕೆಂದು ಸಹಸ್ರಾರು ವಿದ್ಯಾರ್ಥಿಗಳು ಬರುತ್ತಾರೆ.
ಗೌರವ್ ಸಿಂಗ್ ತನ್ನ 12 ಸ್ನೇಹಿತರ ಜತೆಯಲ್ಲಿ ಕಾಲೇಜು ಹಿಂಭಾಗದಲ್ಲಿರುವ ಕೆರೆಯಲ್ಲಿ ಈಜು ಬಾರದೇ ಮುಳುಗಿ ಮೃತ ಪಟ್ಟಿದ್ದ. ಈಜಾಡಲು ಹೋದ ವಿದ್ಯಾರ್ಥಿಗಳಲ್ಲಿ ಕೇವಲ ಇಬ್ಬರಿಗಷ್ಟೇ ಈಜು ಬರುತ್ತಿತ್ತು ಎಂದು ಅವರ ಜತೆಯಲ್ಲಿದ್ದ ವಿದ್ಯಾರ್ಥಿಗಳಿಂದ ತಿಳಿದುಬಂದಿದೆ.