Advertisement

ಕೊರಟಗೆರೆ :ಭ್ರಷ್ಟಾಚಾರದ ಆರೋಪ; ವಾರದೊಳಗೆ ಇಬ್ಬರು ಪಿಡಿಒಗಳ ಅಮಾನತು

10:21 PM Feb 17, 2023 | Team Udayavani |

ಕೊರಟಗೆರೆ : ಇತ್ತೀಚಿನ ದಿನಗಳಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿ ಗ್ರಾಮೀಣ ಅಭಿವೃದ್ಧಿಯ ಹಿನ್ನೆಡೆಗೆ ಕಾರಣವಾಗುತ್ತಿರುವ ಘಟನೆಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಇತ್ತೀಚಿಗಷ್ಟೇ ಕೊರಟಗೆರೆ ತಾಲೂಕಿನ ಬೂದಗವಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತ್ತುಗೊಳಿಸಿ ತುಮಕೂರು ಜಿಲ್ಲೆಯ ಸಿಇಓ ಡಾ.ವಿದ್ಯಾಕುಮಾರಿ ರವರು ಆದೇಶ ಹೊರಡಿಸಿದ್ದರು. ಇದೇ ತಾಲೂಕಿನಲ್ಲಿ ಮತ್ತೊಬ್ಬ ಪಿಡಿಒ ಅಮಾನತು ಆಗಿರುವ ಘಟನೆ ನಡೆದಿದೆ.

Advertisement

ಕೊರಟಗೆರೆ ತಾಲ್ಲೂಕು ಕೋಳಾಲ ಗ್ರಾಮ ಪಂಚಾಯಿತಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಹೆಚ್.ವಿ. ಕೋಮಲ ರವರನ್ನು ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯಿತಿ ಕೊರಟಗೆರೆ ರವರ ವರದಿಯನ್ನು ಪರಿಶೀಲನೆ ಮಾಡಿ ಕರ್ತವ್ಯಲೋಪ ಮತ್ತು ಭ್ರಷ್ಟಾಚಾರದ ಆರೋಪದಡಿ ಅಮಾನತುಗೊಳಿಸಿ ಸಿಇಒ ಡಾ.ವಿದ್ಯಾಕುಮಾರಿಯವರು ಆದೇಶ ಹೊರಡಿಸಿದ್ದಾರೆ.

ಏನಿದು ಪ್ರಕರಣ..?
ಕೋಳಾಲ ಗ್ರಾಮ ಪಂಚಾಯಿತಿಯ ಬಿದರಗುಟ್ಟೆ ಗ್ರಾಮದ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ವಿಶೇಷ ಅಭಿವೃದ್ಧಿ ಯೋಜನೆಯಡಿ 2021, ಮೇ 10 ರಂದು ಚೆಕ್ ಮೂಲಕ ರೂ. 50 ಲಕ್ಷ ರೂ. ಗಳ ಅನುದಾನವನ್ನು ಗ್ರಾಮ ಪಂಚಾಯಿತಿ ವರ್ಗ-1 ರ ಖಾತೆಗೆ ಬಿಡುಗಡೆ ಮಾಡಲಾಗಿರುತ್ತದೆ. ಬಿಡುಗಡೆಯಾದ ಅನುದಾನವನ್ನು ಇತರೆ ಉದ್ದೇಶಗಳಿಗೆ ವೆಚ್ಚ ಮಾಡಿರುವುದು ಕಂಡು ಬಂದಿರುತ್ತದೆ. ಮುಂದುವರೆದು 2.50 ಲಕ್ಷ ರೂ ಗಳನ್ನು ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮಾರ್ಗ ಪಲ್ಲಟ ಮಾಡಿರುವುಇದು ಕಂಡು ಬಂದಿರುತ್ತದೆ. ಈಗಾಗಲೇ ಹಲವಾರು ಪ್ರಗತಿ ಪರಿಶೀಲನಾ ಸಭೆ ಹಾಗೂ ಈ ಕಛೇರಿ ಪತ್ರಗಳಲ್ಲಿ ಅಂಗನವಾಡಿ ನಿರ್ಮಾಣದ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಲಾಗಿದ್ದರೂ ಸಹಾ ಅನುದಾನ ಲಭ್ಯವಿದ್ದರೂ ಸಹಾ ಇದುವರೆವಿಗೂ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ.
ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಕೊರಟಗೆರೆ ತಾಲ್ಲೂಕಿನ ಕೋಳಾಲ ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಕೋಮಲ ರವರನ್ನು ಸರ್ಕಾರದ ಅನುದಾನವನ್ನು ದುರುಪಯೋಗಪಡಿಸಿಕೊಂಡು ಸರ್ಕಾರದ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ನಿರ್ಲಕ್ಷತೆ ತೋರಿ, ಸರ್ಕಾರದ ಆದೇಶ ಮಾರ್ಗಸೂಚಿ ಸುತ್ತೋಲೆಗಳನ್ನು ಉಲ್ಲಂಘಿಸಿದ ಕಾರಣ ಜಿಲ್ಲಾ ಪಂಚಾಯತ್ ಸಿಒಒ ಡಾ.ವಿದ್ಯಾಕುಮಾರಿರವರು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರಲ್ಲಿನ ನಿಯಮ ೧೦(೧)ರ (ಡಿ) ರಂತೆ ಅಮಾನತುಗೊಳಿಸಿ ಸಿದ್ದಾರೆ.

ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ಕೋಳಾಲ ಗ್ರಾಮ ಪಂಚಾಯತಿಯಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ ನನ್ನನ್ನು ವಿವಿಧ ರೀತಿಯಲ್ಲಿ ಹತ್ತಿಕ್ಕಲು ಪ್ರಯತ್ನಿಸಿ ವಿಫಲರಾದ ಭ್ರಷ್ಟ ಪಿಡಿಒ ಅಧಿಕಾರಿಗೆ ಇದೊಂದು ಶಾಕ್ ಆಗಿದ್ದು, ಇನ್ನೂ ಸುಮಾರು 22 ಲಕ್ಷ ರೂ.ಗಳ ಬೀದಿ ದೀಪ ಖರೀದಿಗೆ ಬೋಗಸ್ ಬಿಲ್ ಸೃಷ್ಠಿ ಮಾಡಿಕೊಂಡು ಅವ್ಯವಹಾರ ಮಾಡಿರುವ ಹಾಗೂ ಎಸ್ಸಿ/ಎಸ್ಟಿ ಅನುದಾನ ದುರುಪಯೋಗ, ನರೇಗಾ ಯೋಜನೆಯಲ್ಲಿ ಅವ್ಯವಹಾರ ಮಾಡಿರುವ ಆರೋಪಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿವೆ.
ಇನ್ನೂ ಹಳೇ ಮೋಟಾರ್ ಪಂಪ್, ಪೈಪ್ ಗಳನ್ನು ಮಾರಿಕೊಂಡಿರುವ ಗ್ರಾಂ.ಪಂ ಸದಸ್ಯರು, ಅಧ್ಯಕ್ಷರ ವಿರುದ್ಧ ಹೋರಾಟ ನಿರಂತರವಾಗಿದೆ. ಭ್ರಷ್ಟಾಚಾರ ಮುಕ್ತ ಗ್ರಾಮ ಪಂಚಾಯಿತಿ ನನ್ನ ಕನಸ್ಸಾಗಿದ್ದು, ಕೋಟಿಗಟ್ಟಲೆ ಅವ್ಯವಹಾರ ನಡೆದಿದೆ ಎಂಬುದು ಗ್ರಾಮಸ್ಥರ ಮೂಲಕ ತಿಳಿದು ಬಂದಿದೆ. ನನ್ನ ಹೋರಾಟಕ್ಕೆ ಗ್ರಾಮಸ್ಥರ ಬೆಂಬಲ ಇದ್ದು ಈ ಹೋರಾಟ ಮುಂದೆ ಸಾಗಲಿದೆ. ಹಾಗೂ ಭ್ರಷ್ಟ ಪಿಡಿಒ ರನ್ನು ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ ತುಮಕೂರು ಜಿಲ್ಲಾ ಪಂಚಾಯಿತಿಯ ಸಿಇಒ ಡಾ.ವಿದ್ಯಾಕುಮಾರಿ ರವರಿಗೆ ಧನ್ಯವಾದಗಳು.
-ಎಂ.ಎನ್ ಚಿನ್ಮಯ, ವಕೀಲರು, ಮಲುಗೋನಹಳ್ಳಿ ಕೋಳಾಲ ಹೋಬಳಿ

Advertisement

Udayavani is now on Telegram. Click here to join our channel and stay updated with the latest news.

Next