Advertisement

ಜಾಂಬೂರಿಯಲ್ಲಿ ಗಮನ ಸೆಳೆದ ಕೊರಗಜ್ಜನ ಹರಕೆ ಬುಟ್ಟಿ: ಇದರ ಬೆಲೆ ದುಬಾರಿ!

09:05 PM Dec 26, 2022 | ವಿಷ್ಣುದಾಸ್ ಪಾಟೀಲ್ |

ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ವಿದ್ಯಾಗಿರಿಯಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮ ಹಲವು ವೈಶಿಷ್ಟ್ಯತೆಗಳ ಮೂಲಕ ಲಕ್ಷಾಂತರ ಜನರ ಮನಸೂರೆಗೊಂಡಿತು. ಅದರಲ್ಲೂ ವಿಶೇಷವಾಗಿ ಕಂಡದ್ದು ಕರ್ನಾಟಕದ ಅರಣ್ಯ ಇಲಾಖೆಯ ಸಹಕಾರದಿಂದ 7 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಕೃತಕ ಕಾಡು. ಆ ಕಾಡಿನಲ್ಲಿ ಎಲ್ಲರ ಗಮನ ಸೆಳೆದದ್ದು ಆದಿವಾಸಿ ಕೊರಗ ಸಮುದಾಯದ ತಂಡದ ನಿರಂತರ ಶ್ರಮದ ಕೆಲಸ.

Advertisement

ಕಿನ್ನಿಗೋಳಿ ಮೂಲದ ಕೊರಗ ಸಮುದಾಯದ ಶ್ರಮಿಕರು ಒಂದೆಡೆ ಜೋಪಡಿಯಲ್ಲಿ ಕುಳಿತು ಅರಣ್ಯದಿಂದ ತಂದಿದ್ದ ಬೀಳುಗಳಿಂದ ವಿಶಿಷ್ಟವಾದ ಪರಂಪರೆಯ ಕೆಲವು ಉಪಯುಕ್ತ ಆಕೃತಿಗಳನ್ನು ಸಿದ್ಧಪಡಿಸುತ್ತಿದ್ದುದು ಎಲ್ಲರ ಗಮನ ಸೆಳೆಯಿತು. ಜೋಪಡಿಯಲ್ಲಿ ಕುಳಿತಿದ್ದ ಸುಂದರ, ಸುಮತಿ, ಶಂಕರ, ಗೀತಾ ಅವರೆಲ್ಲರೂ ಕೆಲಸದ ನಡುವೆಯೇ ಉದಯವಾಣಿಯೊಂದಿಗೆ ಮಾತಿಗಿಳಿದರು.

ಸಾಮಾನ್ಯವಾಗಿ ಹಿಂದೆ ಬಳಸುತ್ತಿದ್ದ ಬೆತ್ತದಿಂದ, ಮರಕ್ಕೆ ಹಬ್ಬಿದ ಬೀಳುಗಳಿಂದ ಮಾಡುವ ಹಣ್ಣುಕಾಯಿ ಬುಟ್ಟಿ, ಅನ್ನ ಬಾಗಲು ಬಳಸುವ ಸಿಬ್ಲ,ಗೆರಸಿ,  ಇನ್ನಿತರ ಅಲಂಕಾರಿಕ ವಸ್ತುಗಳನ್ನು ಅಗತ್ಯಕ್ಕೆ ತಕ್ಕಂತೆ ಸಿದ್ಧಪಡಿಸುತ್ತಿದ್ದರು. ಆ ವೇಳೆ ಬದಿಯಲ್ಲಿ ಕುಳಿತು ತನ್ನದೇ ಆದ ಕಾರ್ಯದಲ್ಲಿ ತಲ್ಲೀನರಾಗಿದ್ದ ಸುಂದರ ಅವರು ವಿಶೇಷವಾದ ಚಿತ್ತಾಕರ್ಷಕ ಬುಟ್ಟಿಯೊಂದಕ್ಕೆ ಕಲಾತ್ಮಕ ಕುಸುರಿ ಕೆಲಸದೊಂದಿದೆ ಫೈನಲ್ ಟಚ್ ನೀಡುತ್ತಿದ್ದರು.

ಇದೇನೆಂದು ನಾವು ಕೇಳಿದಾಗ, ಇದು ”ಕೊರಗಜ್ಜ ದೈವಕ್ಕಾಗಿ ಸಿದ್ಧಪಡಿಸುತ್ತಿರುವ ವಿಶೇಷ ಬುಟ್ಟಿ” ಎಂದರು. ಈ ಬುಟ್ಟಿ ಸಿದ್ದ ಪಡಿಸಲು ಕನಿಷ್ಠ 10 ದಿನಗಳ ಶ್ರಮ ಅಗತ್ಯವಾಗಿದೆ. ವಿಶೇಷವಾದ ಕುಸುರಿ ಕೆಲಸ ಮಾಡುವ ಅಗತ್ಯವೂ ಇದೆ. ನಾವೂ ಕೂಡಾ ವಿಶೇಷ ಶ್ರದ್ದೆ ವಹಿಸಿ ಅದನ್ನು ಸಿದ್ದ ಮಾಡುತ್ತೇವೆ. ಯಾರಾದರೂ ಭಕ್ತರು ನಮಗೆ ಬುಟ್ಟಿಯ ಅಗತ್ಯವಿದೆ ಎಂದು ಮುಂಗಡ ಹಣ ಕೊಟ್ಟು ಬೇಡಿಕೆ ಇಟ್ಟರೆ ಮಾತ್ರ ನಾವು ಅದನ್ನು ತಯಾರಿಸುತ್ತೇವೆ ಎಂದರು.

ಬುಟ್ಟಿಯ ಬೆಲೆ ದುಬಾರಿ!

Advertisement

ಈ ಬುಟ್ಟಿಯನ್ನು 7 ಸಾವಿರ ರೂಪಾಯಿಗೂ ಹೆಚ್ಚು ದರ ನೀಡಿ ಭಕ್ತರು ಖರೀದಿಸಿ ಅಜ್ಜನಿಗೆ ಸಮರ್ಪಿಸುತ್ತಾರೆ. ಕೊರಗಜ್ಜನಿಗೆ ಹರಕೆಯ ರೂಪದಲ್ಲಿ ಭಕ್ತರು ಇದನ್ನು ಅರ್ಪಿಸುತ್ತಾರೆ. ಇದಕ್ಕೆ ತುಳುವಿನಲ್ಲಿ ”ಅಜಕುರುವೆ” ಎಂದು ಕರೆಯುತ್ತಾರೆ. ಕೊರಗಜ್ಜ ದೈವದ ನರ್ತಕರು ಇದನ್ನು ಹೆಗಲಲ್ಲಿ ಕಟ್ಟಿಕೊಂಡು ಸ್ವೀಕರಿಸುವ ಕ್ರಮವಿದೆ. ಇದಕ್ಕೆ ತನ್ನದೇ ಆದ ಮಹತ್ವ ಮತ್ತು ಶಕ್ತಿ ಇದೆ ಎಂದರು.

ಆಧುನೀಕರಣದ ಭರಾಟೆಯಲ್ಲಿ ನಮ್ಮ ಮೂಲ ಕಸುಬನ್ನೇ ನಂಬಿಕೊಂಡರೆ ನಮ್ಮ ಬದುಕಿನ ಬಂಡಿ ಸಾಗಿಸುವುದು ಕಷ್ಟವಾಗುತ್ತದೆ. ನಮ್ಮಲ್ಲಿ ಪದವಿ ಪಡೆದವರೂ ಇದ್ದು ಈ ಕುಲ ಕಸುಬನ್ನು ಕಲಿತಿದ್ದಾರೆ ಎಂದು ಒಂದೊಂದೇ ಅನುಭವಗಳನ್ನು ಹಂಚಿಕೊಂಡರು.

ದಕ್ಷಿಣ ಕನ್ನಡದ ಗುತ್ತಿ ಗಾಡು, ಕೆಮ್ಮಡೆ ಮೂಲದ ಶ್ರಮಿಕರು, ನಾವು ಅರಣ್ಯದಲ್ಲಿ ಅನ್ನ, ನೀರು ಬಿಟ್ಟು ಈ ಬೀಳು, ಬೆತ್ತ ವನ್ನು ಸಂಗ್ರಹಿಸುವುದಕ್ಕೆ ಬಹಳಷ್ಟು ಶ್ರಮ ಬೇಕಾಗುತ್ತದೆ. ಈಗ ಹೆಚ್ಚಿನ ನಮ್ಮ ಪರಿಕರಗಳ ಜಾಗ ಬೇರೆ ಬೇರೆ ರೂಪಗಳಲ್ಲಿ ಆಕ್ರಮಿಸಿಕೊಂಡಿವೆ. ಆದರೂ ನಮ್ಮ ತನವನ್ನು ಎಂದಿಗೂ ಮರೆಯಬಾರದು ಎಂದು ನಾವು ಇದೆಲ್ಲವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ನಾವು ಕಲಾ ತಂಡಗಳಲ್ಲಿಯೂ ಭಾಗಿಯಾಗುತ್ತೇವೆ. ಡೋಲು, ಚಂಡೆ, ಕೊಳಲು, ತಾಳ ಹಿಡಿದು ಕುಣಿಯಲೂ ಸಿದ್ದ. ಕಾಡಿಗೆ ಹೋಗಿ ಬೀಳು, ಬೆತ್ತ ಗಳನ್ನು ಸಂಗ್ರಹಿಸಿ ಪಾರಂಪರಿಕವಾಗಿ ರಕ್ತಗತವಾಗಿ ಬಂದ ಈ ಕರಕುಶಲ ಕಲೆಯನ್ನು ಮಾಡಿ ನಮ್ಮದೇ ಆದ ಸಂತೋಷವನ್ನು ಕಾಣುತ್ತೇವೆ. ಇದೆ ಮೊದಲ ಬಾರಿ ಆಳ್ವಾಸ್‌ ಸಂಸ್ಥೆ ನಮ್ಮನ್ನು ಕರೆಸಿ ಗೌರವ ನೀಡಿದೆ. ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮದಲ್ಲಿ ನಮ್ಮನ್ನು ಗುರುತಿಸಿರುವುದು ಒಂದು ಹೆಮ್ಮೆಯ ಕ್ಷಣ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next