ನಮ್ಮ ತುಳುನಾಡ್ ಟ್ರಸ್ಟ್ (ರಿ) ಇದರ ಆಶ್ರಯದಲ್ಲಿ ‘ಕೊಪ್ಪರಿಗೆ’ ಸಮಗ್ರ ತುಳುನಾಡ್ ಗ್ರಂಥ ಹಾಗೂ ವೀಡಿಯೋ ದಾಖಲೀಕರಣ ಯೋಜನೆಗೆ ಚಾಲನೆ ದೊರೆತಿದೆ.
ಈ ಬೃಹತ್ ಯೋಜನೆಯ ಮೊದಲ ಹಂತವಾಗಿ ಪರಮ ಪೂಜ್ಯರ ಹಾಗೂ ಗಣ್ಯಾತಿಗಣ್ಯರ ಶುಭ ಸಂದೇಶಗಳ ಯೂಟ್ಯೂಬ್ ವೀಡಿಯೋ ತುಣುಕುಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಅರಬ್ ಸಂಯುಕ್ತ ಸಂಸ್ಥಾನದ ಅಬುಧಾಬಿಯಲ್ಲಿ ಆಗಸ್ಟ್ 14ರಂದು ನಮ್ಮ ತುಳುನಾಡ್ ಟ್ರಸ್ಟ್‌ನ ಅಂತರಾಷ್ಟ್ರೀಯ ಘಟಕದ ಅಧ್ಯಕ್ಷರಾದ ಸರ್ವೊತ್ತಮ ಶೆಟ್ಟಿಯವರು ಈ ಸಂದೇಶವಿರುವ ವಿಡಿಯೋವನ್ನು ಲೋಕಾರ್ಪಣೆಗೊಳಿಸಿದರು. ಈ ಸಂಧರ್ಭದಲ್ಲಿ ಟ್ರಸ್ಟಿನ ಗೌರವಾಧ್ಯಕ್ಷರಾದ ಬಿ.ಕೆ ಗಣೇಶ್ ರೈ ಉಪಸ್ಥಿತರಿದ್ದರು.
ಪ್ರಸ್ತುತ ಅನೀರಿಕ್ಷಿತ ಮಹಾಮಾರಿ ಕೋವಿಡ್ -19ನ ಲಾಕ್‌ಡೌನ್‌ನ ಪರಿಣಾಮವಾಗಿ ಸಾರ್ವಜನಿಕ ಸಭೆ ಸಮಾರಂಭವನ್ನು ನಡೆಸಲು ಸಾಧ್ಯಾವಾಗದ ಕಾರಣ ಸಾಮಾಜಿಕ ಜಾಲತಾಣದ ಮೂಲಕ ಲೋಕಾರ್ಪಣೆಗೊಳಿಸಿದ ಸರ್ವೊತ್ತಮ ಶೆಟ್ಟಿಯವರು, ಕೊಪ್ಪರಿಗೆ ಸಮಗ್ರ ತುಳುನಾಡ್ ಗ್ರಂಥ ಹಾಗೂ ವೀಡಿಯೋ ದಾಖಲೀಕರಣ ಯೋಜನೆಗೆ ಶುಭಾಶಯಗಳನ್ನು ಕೋರಿ, ‘ತುಳುವರು ವಿವಿಧ ಕ್ಷೇತ್ರಗಳಲ್ಲಿ ದುಡಿದ ಹಾಗೂ ದುಡಿಯುತ್ತಿರುವವರ ಅನುಭವಗಳನ್ನು ಕೇಳಿ ತಿಳಿದು ಮಾಹಿತಿಗಳನ್ನು ಕಲೆ ಹಾಕಿ ಸಂಪೂರ್ಣ ಮಾಹಿತಿಗಳುಳ್ಳ ಅಮೂಲ್ಯ ಗ್ರಂಥ ಹಾಗೂ ವೀಡಿಯೋ ದಾಖಲೀಕರಣವನ್ನು ಮಾಡಲಾಗುವುದು.
ಈಗಾಗಲೇ ಅನೇಕ ಜ್ಞಾನ ಸಂಪತ್ತನ್ನುನಾವು ಕಳೆದು ಕೊಂಡಿದ್ದೇವೆ. ಹಲವಾರು ವಿದ್ವಾಂಸರುಗಳು ವಯಸ್ಸಿನಂಚಿನಲ್ಲಿದ್ದಾರೆ ಅವರು ಜೀವಿತದಲ್ಲಿರುವಾಗಲೇ ಅವರನ್ನೆಲ್ಲಾ ನೇರವಾಗಿ ಸಂದರ್ಶಿಸಿ ಮುಂದಿನ ಪೀಳಿಗೆಗೆ ಅವರ ಜ್ಞಾನ ಸಂಪತ್ತಿನ ದಾಖಲೀಕರಣವೇ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ವಿಶ್ವದಾದ್ಯಂತ ನೆಲೆಸಿರುವ ತುಳುವರು ನಮ್ಮ ತುಳುನಾಡ್ ಟ್ರಸ್ಟ್‌ನ ದಾಖಲೀಕರಣದ ಬೃಹತ್ ಯೋಜನೆಗೆ ಸಹಕಾರ ಪ್ರೋತ್ಸಾಹ ನೀಡಿ ಯಶಸ್ವಿಗೊಳಿಸಬೇಕೆಂದು’ ತಮ್ಮ ಸಂದೇಶದಲ್ಲಿ ತಿಳಿಸಿದರು.
ಕೊಪ್ಪರಿಗೆ ಸಮಗ್ರ ತುಳುನಾಡ್ ದಾಖಲೀಕರಣ ಯೋಜನೆಯು ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಧೋಕ್ಷಜ ಪೇಜಾವರ ಮಠ, ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು ಹಾಗೂ ರಾಜರ್ಷಿ ಡಾ ವೀರೇಂದ್ರ ಹೆಗ್ಗಡೆ ಧರ್ಮಾಧಿಕಾರಿಗಳು ಇವರುಗಳ ಶುಭಾಶಿರ್ವಾದಗಳೊಂದಿಗೆ ತುಳು ಲಿಪಿ ಶಿಕ್ಷಕಿ ವಿದ್ಯಾಶ್ರೀ ಎಸ್ ಉಳ್ಳಾಲರ ಮುಂದಾಳತ್ವದಲ್ಲಿ ಯೋಜನೆಯ ಅಂತಾರಾಷ್ಟ್ರೀಯ ಅಧ್ಯಕ್ಷರಾಗಿ ಸರ್ವೋತ್ತಮ ಶೆಟ್ಟಿ ದುಬೈ, ಕಾರ್ಯಕಾರಿ ನಿರ್ದೇಶಕರಾಗಿ ಬಿ.ಕೆ ಗಣೇಶ್ ರೈ, ಪರಿಕಲ್ಪನೆ ಮತ್ತು ನಿರ್ದೇಶಕರಾಗಿ ಜಿ.ವಿ.ಎಸ್ ಉಳ್ಳಾಲ್, ಸಹಾಯಕ ನಿರ್ದೇಶಕರಾಗಿ ಕಾರ್ತಿಕ್ ಮೂಲ್ಕಿ ಹಾಗೂ ವಿಕಾಸ್ ಶೆಟ್ಟಿ ಬೆದ್ರ, ಪಿ.ಆರ್.ಓ ಆಗಿ ರೂಪೇಶ್ ರೈ ಹಾಗೂ ದಿನೇಶ್ ರೈ ಕಡಬರವರು ಇದ್ದಾರೆ.
ಮುಂಬರುವ ದಿನಗಳಲ್ಲಿ ಪರಿಸ್ಥಿತಿಯನ್ನು ನೋಡಿಕೊಂಡು ತುಳುನಾಡಿನಿಂದ ಭಾರತದಾದ್ಯಂತ ಹಾಗೂ ವಿದೇಶಗಳಲ್ಲಿ ನೆಲೆಸಿರುವ ತುಳುವರ ದಾಖಲೀಕರಣ ಯೋಜನೆಯನ್ನು ಮುಂದುವರೆಸಲಾಗುವುದೆಂದು ನಮ್ಮ ತುಳುನಾಡ್ ಟ್ರಸ್ಟ್ (ರಿ) ಇದರ ಗೌರವಾಧ್ಯಕ್ಷರು ಬಿ.ಕೆ ಗಣೇಶ್ ರೈಯವರು ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿದ್ದಾರೆ.