Advertisement

ಕಾರ್ಮೋಡದಲ್ಲೂ ಬೆಳಕು ಕಂಡ ಕೊಪ್ಪಳ ಜನ

06:18 PM Dec 31, 2021 | Team Udayavani |

ಕೊಪ್ಪಳ: ಕಳೆದ ವರ್ಷದ ಕೊರೊನಾ ಆರ್ಭಟಕ್ಕೆ ನಲುಗಿದ್ದ ಜಿಲ್ಲೆಯ ಜನರು 2021ರಲ್ಲಿ ಕೊರೊನಾ ಕಾರ್ಮೋಡ ಮತ್ತೆ ಆವರಿಸಿ ಜನ ಜೀವನವನ್ನೇ ತಲ್ಲಣಗೊಳಿಸಿತು. ಈ ಮಧ್ಯೆ ಬದುಕಿಗಾಗಿ ಜನರು ನಡೆಸಿದ ಹೋರಾಟ ಅವಿಸ್ಮರಣೀಯ. ಕೃಷಿ, ಶಿಕ್ಷಣಕ್ಕೆ ದೊಡ್ಡ ಹೊಡೆತ ಬಿದ್ದಿದ್ದರೆ, ಆರೋಗ್ಯ ಕ್ಷೇತ್ರ ಸುಧಾರಣೆ ಕಂಡರೂ ಜನರ ಸಾವು-ನೋವು ತಪ್ಪಿಸಲಾಗಲಿಲ್ಲ. ಕೊನೆಗೂ ಲಸಿಕೆಯು ಜನರ ಜೀವ ಉಳಿಸುವ ಭರವಸೆ ನೀಡಿತು. ಈ ಮಧ್ಯೆ ಶ್ರೀಗಳ ಸಾಮಾಜಿಕ ಕಾರ್ಯ ನಾಡಿನ ಗಮನ ಸೆಳೆಯಿತು.

Advertisement

ಹೌದು.. ಜಿಲ್ಲೆಯಲ್ಲಿ 2020ರ ವರ್ಷ ಕೊರೊನಾ ಆರ್ಭಟದಿಂದ ನಮಗೆ ಮುಕ್ತಿ ಸಿಗಲಿದೆ ಎನ್ನುವ ಖುಷಿಯ ಭಾವನೆಯಿಂದಲೇ 2021ಕ್ಕೆ ಪಾದಾರ್ಪಣೆ ಮಾಡಿದ್ದ ಜನತೆಗೆ 2021 ದೊಡ್ಡ ಆಪತ್ತನ್ನೇ ತಂದೊಡ್ಡಿತು. ಕೋವಿಡ್‌ ಮೊದಲ ಅಲೆಗಿಂತ 2ನೇ ಅಲೆಯಲ್ಲಿಯೇ ಜನರು ಜೀವ ಭಯದಿಂದ ನಲುಗಿದರು. ಅಂಗೈಯಲ್ಲಿ ಜೀವ ಹಿಡಿದು ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಯಿತು. ಈ ಮಧ್ಯೆಯೂ ಜನತೆ ಬದುಕಿನ ಭರವಸೆಯನ್ನು ಕಳೆದುಕೊಳ್ಳಲಿಲ್ಲ.

ಕೊರೊನಾ ಬಗ್ಗೆ ಜನರಲ್ಲಿ ಭಯ ಕಡಿಮೆಯಾಗಿ ಮಾಸ್ಕ್ ಧರಿಸುವುದನ್ನೇ ಬಿಟ್ಟರು. ಜಿಲ್ಲಾಡಳಿತ, ಸರ್ಕಾರ ಎಷ್ಟೇ ಜಾಗೃತಿ ಮೂಡಿಸಿದರೂ ಜನ ಎಚ್ಚೆತ್ತುಕೊಳ್ಳಲಿಲ್ಲ. ಮೊದಲ ಅಲೆಗಿಂತ 2ನೇ ಅಲೆಯು ಜನರಲ್ಲಿ ಹೆಚ್ಚು ಭಯ ತರಿಸಿತಲ್ಲದೇ, ಆರೋಗ್ಯದ ಬಗ್ಗೆ ಕಾಳಜಿ ಮೂಡಿಸುವಲ್ಲೂ ಕಾರಣವಾಯಿತು.

ಜನವರಿರಿಂದ ಜೂನ್‌ವರೆಗೂ ಬರಿ ಕೊರೊನಾದ್ದೇ ಮಾತಾಗಿತ್ತು. ಅಲ್ಲಿ ಇಷ್ಟು ಜನ ಸತ್ತರು. ಇಲ್ಲಿ ಅಷ್ಟು ಜನ ಸತ್ತರು ಎನ್ನುವ ಬರಿ ಸಾವಿನ ಸುದ್ದಿಯನ್ನೇ ಕೇಳುವಂತಾಯಿತು. ಒಂದು ಶುಭ ನುಡಿಯಿಲ್ಲ. ಪ್ರಮುಖ ನಾಯಕರೇ ಕೋವಿಡ್‌ಗೆ ಬಲಿಯಾಗುತ್ತಿರುವುದು ಜನರಲ್ಲೂ ಭಾರಿ ಆತಂಕವನ್ನು ತರಿಸಿತ್ತು. ಸರ್ಕಾರ, ಜಿಲ್ಲಾಡಳಿತ 2ನೇ ಅಲೆ ವೇಳೆ ತೀವ್ರಗತಿಯಲ್ಲಿ ಆರೋಗ್ಯ ಕ್ಷೇತ್ರ ಸುಧಾರಣೆ ಮಾಡುವಲ್ಲಿ ವಿಳಂಬ ಮಾಡಿದ್ದೆ ಸಾವು-ನೋವಿಗೆ ಹೆಚ್ಚು ಕಾರಣವಾಯಿತು.

ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಹೊಡೆತ ! ಕೋವಿಡ್‌ ಮೊದಲ ಅಲೆಯಲ್ಲಿ ಶಾಲೆ-ಕಾಲೇಜುಗಳು ಬಂದ್‌ ಆಗಿದ್ದವು. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕೇ ಡೋಲಾಯಮಾನ ಸ್ಥಿತಿಯತ್ತ ಸಾಗಿತ್ತು. ಒಂದೆಡೆ ಆನ್‌ಲೈನ್‌, ಮತ್ತೂಂದೆಡೆ ಆಫ್‌ಲೈನ್‌ ಇದೆಲ್ಲವೂ ವಿದ್ಯಾರ್ಥಿಗಳಿಗೆ ದೊಡ್ಡ ಹೊರೆಯಾಯಿತು. ವಿದ್ಯಾಗಮದಲ್ಲೂ ಶಿಕ್ಷಕರ ಸಾವು ಸಂಭವಿಸಿದ್ದರಿಂದ ಸರ್ಕಾರವು ಅದನ್ನೂ ಸ್ಥಗಿತ ಮಾಡಿತು. ಕೊರೊನಾ ಹೊಡೆತಕ್ಕೆ ಶಾಲೆಗಳ ಬಾಗಿಲನ್ನೂ ತೆರೆಯದಂತ ಪರಿಸ್ಥಿತಿ ಎದುರಾಗಿತ್ತು. ಪಾಲಕರು ತಮ್ಮ ಮಕ್ಕಳ ಭವಿಷ್ಯ ಹೇಗೆ ಎನ್ನುವ ಚಿಂತೆಯಲ್ಲಿಯೇ ಕೊರಗಿ ಪರ್ಯಾಯ ವ್ಯವಸ್ಥೆಗೆ ಹರಸಾಹಸ ಪಟ್ಟರು.

Advertisement

ಯಾವುದೇ ಶಾಲೆ-ಕಾಲೇಜು ತೆರೆಯಲೇ ಇಲ್ಲ. ಮಕ್ಕಳಿಗೆ ವಠಾರ ಶಾಲೆ ಮಾಡಿದರೂ ಪರಿಣಾಮ ಬೀರಲಿಲ್ಲ. ಪಠ್ಯ ಕಡಿತ ಎನ್ನುವ ಮಾತಾದರೂ ಇಲ್ಲಿ ವಿದ್ಯಾರ್ಥಿಗಳಿಗೆ ಜ್ಞಾನಕ್ಕೆ ಹೊಡೆತ ಬಿದ್ದಿತು. ಕಳೆದ ಕೆಲ ತಿಂಗಳ ಹಿಂದಷ್ಟೇ ಶಾಲೆಗಳ ಬಾಗಿಲು ತೆರೆದು ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಲಾಗುತ್ತಿದೆ. ಭೌತಿಕ ತರಗತಿ ಆರಂಭಿಸಿ ಕಾಲೇಜು ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡಲಾಗಿದೆ. ಶಿಕ್ಷಣ ಕ್ಷೇತ್ರ ಕೋವಿಡ್‌ ಹೊಡೆತಕ್ಕೆ ನಲುಗಿದೆ.

ಆರೋಗ್ಯ ಕ್ಷೇತ್ರ ಸುಧಾರಣೆ: ಕೊರೊನಾ 2ನೇ ಅಲೆಯಿಂದ ಎಚ್ಚೆತ್ತ ಜಿಲ್ಲಾಡಳಿತ ಆಸ್ಪತ್ರೆಗಳಲ್ಲಿ ಬೆಡ್‌, ಆಕ್ಸಿಜನ್‌, ವೆಂಟಿಲೇಟರ್‌ ವ್ಯವಸ್ಥೆ ಸುಧಾರಣೆ ಮಾಡಿಕೊಳ್ಳಲಾರಂಭಿಸಿತು. ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆಕ್ಸಿಜನ್‌, ವೆಂಟಿಲೇಟರ್‌ ವ್ಯವಸ್ಥೆ ಮಾಡಿತು. ಜೊತೆಗೆ ಖಾಸಗಿಯಾಗಿ ಆಸ್ಪತ್ರೆಗಳ ಸಭೆ ನಡೆಸಿ ಕೋವಿಡ್‌ ನಿಯಂತ್ರಣಕ್ಕೆ, ಚಿಕಿತ್ಸೆಗೆ ಸಹಕಾರದ ಮಾತನ್ನಾಡಿತು. ಖಾಸಗಿ ಆಸ್ಪತ್ರೆಗಳೂ ಜನರ ಜೀವ ಉಳಿಸುವ ಕೆಲಸ ಮಾಡಿದವು. ವೈದ್ಯರು, ಆರೋಗ್ಯ ಸಿಬ್ಬಂದಿ ಹಗಲು-ರಾತ್ರಿ ಎನ್ನದೇ ಕೆಲಸ ಮಾಡಿ, ಜನರ ಜೀವ ಉಳಿಸುವ ಪ್ರಯತ್ನ ನಡೆಸಿದರು.

ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತೆಯರು ಹಗಲು-ರಾತ್ರಿ ಎನ್ನದೇ ಜಿಲ್ಲಾದ್ಯಂತ ಮನೆ ಮನೆಗೆ ಸುತ್ತಿ ಮಾಹಿತಿ ಸಂಗ್ರಹಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಿ ಅಗತ್ಯ ಸಹಕಾರ ನೀಡಿದರು. ಆದರೆ ಅವರ ಜೀವನಕ್ಕೆ ರಾಜ್ಯ ಸರ್ಕಾರ ಆಸರೆಯಾಗದೇ ಇರುವುದು ಬೇಸರದ ಸಂಗತಿ. ಕೊನೆ ಹಂತಕ್ಕೆ ಆಸ್ಪತ್ರೆಗಳು ಸುಧಾರಣೆ ಕಂಡವು. ಆಕ್ಸಿಜನ್‌ ಘಟಕ ಆರಂಭಗೊಂಡವು.

ಅಭಿನವ ಶ್ರೀಗಳ ಜನಸೇವಾ ಕಾರ್ಯ: ಗವಿಸಿದ್ದೇಶ್ವರ ಸ್ವಾಮಿಗಳು ಕೊರೊನಾ ಸೋಂಕಿತರ ಸೇವೆಗೆ ಪಣ ತೊಟ್ಟು ನಿಂತು ಕೆಲವೇ ದಿನದಲ್ಲಿ ತಮ್ಮ ಆಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯನ್ನಾಗಿ ಪರಿವರ್ತಿಸಿದರು. ಅಲ್ಲದೇ ಕೋವಿಡ್‌ ಕೇರ್‌ ಸೆಂಟರ್‌ ಆರಂಭಿಸಿದರು. ಮಠದಿಂದಲೇ ಊಟ, ಉಪಹಾರ ಸೇರಿ ಹಣ್ಣು-ಹಂಪಲು ಪೂರೈಸಿದರು. ಇದಲ್ಲದೇ, ನಗರ ಕೇಂದ್ರದಲ್ಲಿನ ಹಲವು ಆಸ್ಪತ್ರೆಗಳಿಗೆ ಮಠದಿಂದ ಪ್ರಸಾದ ಪೂರೈಸಿದರು. ಮಠದ ಆಸ್ಪತ್ರೆಯಲ್ಲಿ ಸಾವಿನ ದವಡೆಯ ಹಂತಕ್ಕೆ ತಲುಪಿದ್ದ ಅದೆಷ್ಟೋ ಜನರು ಪ್ರಾಣಪಾಯದಿಂದ ಪಾರಾದರು. ಇದೆಲ್ಲ ಗವಿಮಠದ ಪವಾಡ ಎಂದರೂ ತಪ್ಪಾಗಲಾರದು. ಕೋವಿಡ್‌ ಕೇರ್‌ ಸೆಂಟರ್‌ನಲ್ಲೂ ತುಂಬ ಜನರು ಚೇತರಿಕೆ ಕಂಡು ಗುಣಮುಖರಾಗಿ ಬಂದರು.

ಆಸ್ಪತ್ರೆಯ ಕಾಳಜಿ ವಹಿಸುತ್ತಿದ್ದ ಶ್ರೀಗಳೇ ಆಸ್ಪತ್ರೆಯೊಳಗೆ ಪ್ರವೇಶಿಸಿ ಸೋಂಕಿತರಿಗೆ ಆತ್ಮಸ್ಥೈರ್ಯ ಹೇಳುತ್ತಿದ್ದರಿಂದ ಸೋಂಕಿತರು ಭಯ ದೂರ ಮಾಡಿ ಆರೋಗ್ಯದತ್ತ ಕಾಳಜಿ ಕೊಟ್ಟರು. ಯೋಗ, ಧ್ಯಾನ, ಮಂತ್ರ ಪಠಣದಿಂದಲೂ ಬಹುಪಾಲು ರೋಗಿಗಳು ಗುಣಮುಖರಾದರು. ಮಠದ ಈ ಕಾರ್ಯ ರಾಜ್ಯ ಸೇರಿದಂತೆ ನಾಡಿನ ಮಠಾಧಿಶರು, ರಾಜಕಾರಣಿಗಳು, ಗಣ್ಯಾತೀತ ಮುಖಂಡರು ಗುಣಗಾನ ಮಾಡಿದರು. ಇದಕ್ಕೂ ಮುನ್ನ ಜಾತ್ರೆಯನ್ನು ಸರಳ ಆಚರಣೆ ಮಾಡುವ ಜೊತೆಗೆ ಗಿಣಗೇರಿ ಕೆರೆಯ ಅಭಿವೃದ್ಧಿಗೆ ಪಣ ತೊಟ್ಟು ಇಡೀ ದೊಡ್ಡ ಕೆರೆಯ ಹೂಳು ತೆಗೆಸಿದರು. ಜನರೂ ದೇಣಿಗೆ ನೀಡಿದರು. ಇದಲ್ಲದೇ
ಅಡವಿಹಳ್ಳಿ ದತ್ತು ಪಡೆದು ಅಭಿವೃದ್ಧಿ ಮಾಡಿದರು. ಡಿಜಿಟಲ್‌ ಗ್ರಂಥಾಲಯ ಆರಂಭಿಸಿ ವಿದ್ಯಾರ್ಥಿಗಳಿಗೆ ಆಸರೆಯಾದರು.

ಕೃಷಿಗೆ ಹೊಡೆತ: ವರ್ಷದ ಆರಂಭದಲ್ಲಿ ಮತ್ತೆ ಲಾಕ್‌ಡೌನ್‌ ಆಗಿದ್ದರಿಂದ ರೈತರು ಫಸಲು ಮಾರಾಟ ಮಾಡಲಾಗದೇ ಪ್ರಯಾಸಪಟ್ಟರು. ಕೊನೆಗೆ ಜಿಲ್ಲಾಡಳಿತದ ಅನುಮತಿ ದೊರೆತರೂ ರೈತರ ಉತ್ಪನ್ನ ಖರೀದಿ ಮಾಡುವವರೇ ಇಲ್ಲದಂತಾಯಿತು. ಅದೆಷ್ಟೋ ರೈತರು ಹೊಲದಲ್ಲಿಯೇ ತಮ್ಮ ಫಸಲನ್ನು ಹಾಗೇ ಬಿಟ್ಟರು. ಮಾರಾಟ ಮಾಡಿದ ವೆಚ್ಚವೂ ಬರದಂತೆ ತುಂಬ ತೊಂದರೆ ಎದುರಿಸಿ ನಷ್ಟವನ್ನೇ ಅನುಭವಿಸಿತು. ಸರ್ಕಾರ ಪ್ಯಾಕೆಜ್‌ ಘೋಷಿಸಿತು. ಮೆಕ್ಕೆಜೋಳಕ್ಕೆ ಪರಿಹಾರ ಕೊಟ್ಟಿತು.

ಅಲ್ಲೊಂದು-ಇಲ್ಲೊಂದಿಷ್ಟು ಪರಿಹಾರ ಬಂದಿತು. ಕ್ರಮೇಣ ಕೋವಿಡ್‌ ಕಡಿಮೆಯಾಯಿತು. ಜೂನ್‌-ಸೆಪ್ಟೆಂಬರ್‌ ತಿಂಗಳಲ್ಲಿ ನಿರಂತರ ಮಳೆ ಸುರಿದ ಕಾರಣ ಉತ್ತಮ ಫಸಲು ಬಂತು. ಆದರೆ ಅತಿಯಾದ ಮಳೆಯಿಂದಾಗಿ ರೈತರ ಅಪಾರ ಬೆಳೆ ನಷ್ಟ ಅನುಭವಿಸಿದರು. ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆಯೂ ಸಿಗಲಿಲ್ಲ. ಬೆಳೆ ಹಾನಿಗೆ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಈಗಷ್ಟೇ ಪರಿಹಾರ ಬರಲಾರಂಭಿಸಿದೆ.

ಜಿಲ್ಲಾ ರಾಜಕೀಯ: ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದಾಗ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ಸಿಗುತ್ತೆ ಎನ್ನುವ ನಿರೀಕ್ಷೆಯಿತ್ತು. ಆರಂಭದಲ್ಲಿ ಅದು ಹುಸಿಯಾಯಿತು. ಕ್ರಮೇಣ ಜಿಲ್ಲೆಯ ಶಾಸಕರಿಗೆ ಮಂತ್ರಿ ಭಾಗ್ಯ ಸಿಗಲಿ ಎನ್ನುವ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಅನುಭವಿ ರಾಜಕಾರಣಿ ಹಾಲಪ್ಪ ಆಚಾರ್‌ ಸಚಿವರಾಗಿ ಜಿಲ್ಲಾ ಅಭಿವೃದ್ಧಿಗೆ ಪಣತೊಟ್ಟು ನೀರಾವರಿಗೆ ಒತ್ತು ನೀಡುವ ಮಾತನ್ನಾಡಿದ್ದಾರೆ. ಇನ್ನು ಬಿಜೆಪಿ ಜನ ಸೇವಕ ಯಾತ್ರೆ ನಡೆಸಿತು. ಗ್ರಾಪಂ ಚುನಾವಣೆಯಲ್ಲಿ ಅಬ್ಬರ ನಡೆಸಿ, ನಾವು ಹೆಚ್ಚು ಗೆದ್ದಿದ್ದೇವೆ ಎಂದು ಬೀಗಿತು. ಇತ್ತ ಕೈ ನಾವೇ ಮೇಲು ಎಂದು ಹಿರಿಹಿರಿ ಹಿಗ್ಗಿತು. ಈ ಬೆನ್ನಲ್ಲೇ ಘೋಷಣೆಯಾದ ವಿಪ ಚುನಾವಣೆಯಲ್ಲಿ ಬಿಜೆಪಿ ಜನ ಸ್ವರಾಜ್‌ ಯಾತ್ರೆ ನಡೆಸಿದಾಗ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಕೊಪ್ಪಳದಲ್ಲಿ ಕಹಳೆ ಮೊಳಗಿಸಿದರು. ಆದರೆ ಚುನಾವಣೆ ಫಲಿತಾಂಶದಲ್ಲಿ ಕಮಲದ ಅಭ್ಯರ್ಥಿ ಸೋತರು.

ಅಭಿವೃದ್ಧಿ ಕುಂಟಿತ: ಇನ್ನೂ ಜಿಲ್ಲೆಯಲ್ಲಿ ಕೋವಿಡ್‌ ಹೊಡೆತದ ಮಧ್ಯೆಯೂ ಹಲವು ಕೈಗಾರಿಕೆಗಳು ಕಾರ್ಯ ನಡೆಸಿದವು. ಆದರೆ ಜಿಲ್ಲಾದ್ಯಂತ ಕೆಲ ಅಭಿವೃದ್ಧಿ ಕೆಲಸಗಳೇ ನಿಂತವು. ಸಕಾಲಕ್ಕೆ ಅನುದಾನ ಇಲ್ಲದೇ ಹಲವು ಕಾಮಗಾರಿಗಳು ಅರೆಬರೆಯಾದವು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನ ತಡವಾದ ಹಿನ್ನೆಲೆಯಲ್ಲಿ ಅಭಿವೃದ್ಧಿಗೆ ಸಕಾಲಕ್ಕೆ ವೇಗ ದೊರೆಯಲಿಲ್ಲ. ಈಗಷ್ಟೇ ಅನುದಾನ ಹಂತ ಹಂತವಾಗಿ ಬರುತ್ತಿದೆ. ಅಭಿವೃದ್ಧಿ ನಿಧಾನಗತಿಯಲ್ಲಿ ನಡೆದಿದೆ.

ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next