ಕಾಪು: ಮನೆಗೆ ಸಿಡಿಲು ಬಡಿದು ಸಹೋದರಿಯರಿಬ್ಬರು ಗಾಯಗೊಂಡ ಘಟನೆ ಕಾಪುವಿನ ಕೊಪ್ಪಲಂಗಡಿಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಕಾಪು ಕೊಪ್ಪಲಂಗಡಿ ಕಮ್ಯುನಿಟಿ ಹಾಲ್ ಬಳಿಯ ನಿವಾಸಿ, ಆಶಾ ಕಾರ್ಯಕರ್ತೆ ಸುಭಾಷಿಣಿ ಅವರ ಮನೆಯ ಬಳಿ ಸಿಡಿಲು ಬಡಿದಿದ್ದು, ಇದರಿಂದಾಗಿ ಮನೆಯ ಹೊರಗಡೆ ಕುಳಿತಿದ್ದ ಸ್ನೇಹಲ್ ಮತ್ತು ಸ್ವಾತಿ ಅವರಿಗೆ ಸಿಡಿಲಿನ ರವೆ ಬಡಿದಿದೆ. ಸಿಡಿಲಿನಾಘಾತಕ್ಕೆ ಸಿಲುಕಿ ತೀವ್ರ ಆಘಾತಕ್ಕೊಳಗಾಗಿ ಮೂರ್ಚೆ ತಪ್ಪಿದ್ದ ಸ್ವಾತಿ ಅವರನ್ನು 108 ಅಂಬುಲೆನ್ಸ್ ಮೂಲಕವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಲೇಜಿನ ಕಾರ್ಯಕ್ರಮಕ್ಕೆ ಹೊರಡುತ್ತಿದ್ದರು : ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಸ್ನೇಹಲ್ ಮಂಗಳವಾರ ಕಾಲೇಜಿನಲ್ಲಿ ನಡೆಯಲಿದ್ದ ಕಾರ್ಯಕ್ರಮಕ್ಕೆ ಹೊರಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದ್ದು ಸ್ನೇಹಲ್ ಅವರನ್ನು ಸಿದ್ದ ಪಡಿಸಲೆಂದು ಆಗಮಿಸಿದ್ದ ಸ್ವಾತಿ ಸಿಲಿನಾಘಾತಕ್ಕೆ ಸಿಲುಕಿದ್ದಾರೆ. ಇಬ್ಬರೂ ಚೇತರಿಸಿಕೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಾನವೀಯತೆ ಮೆರೆದ 108 ಸಿಬ್ಬಂದಿ : ಸಿಡಲಿನಾಘಾತದಿಂದಾಗಿ ಯುವತಿಯರಿಬ್ಬರು ಗಾಯಗೊಂಡ ಘಟನೆಯ ಮಾಹಿತಿ ತಿಳಿಯುತ್ತಲೇ 108 ಅಂಬುಲೆನ್ಸ್‌ನ ಸಿಬ್ಬಂದಿ ಉಮೇಶ್ ತತ್‌ಕ್ಷಣ ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ಉಡುಪಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. 108 ಸಿಬ್ಬಂದಿ ಉಮೇಶ್ ಅವರ ತುರ್ತು ಮಾನವೀಯ ಸೇವೆಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.