Advertisement

ಕೊಪ್ಪಳ: ರೋಸಿ ಹೋದ ಗ್ರಾಮಸ್ಥರು- ಡಿಜೆಗೆ ಕೊಡುವ ಹಣದಲ್ಲಿ ರಸ್ತೆ ದುರಸ್ತಿ!

05:46 PM Sep 11, 2024 | Team Udayavani |

■ ಉದಯವಾಣಿ ಸಮಾಚಾರ
ಕೊಪ್ಪಳ: ಬಹು ವರ್ಷಗಳಿಂದ ಹದಗೆಟ್ಟು ಹಳ್ಳ ಹಿಡಿದ ತಾಲೂಕಿನ ಕಿನ್ನಾಳ ರಸ್ತೆಯನ್ನು ಆಡಳಿತ ವರ್ಗ, ಜನಪ್ರತಿನಿಧಿಗಳು ನಿರ್ಮಾಣ ಮಾಡುವಲ್ಲಿ ನಿರ್ಲಕ್ಷ್ಯ ತಾಳಿದ್ದು ಇದರಿಂದ ಬೇಸತ್ತ ಗ್ರಾಮಸ್ಥರು ಈ ವರ್ಷದ ಗಣೇಶ ಹಬ್ಬದಲ್ಲಿ ಡಿಜೆಗೆ ಕೊಡುವ ಹಣದಲ್ಲಿ ಅದೇ ಹಣದಲ್ಲಿ ತಮ್ಮೂರು ರಸ್ತೆಗೆ ಮರಂ ಮಣ್ಣು ಹಾಕಿ ದುರಸ್ತಿ ಮಾಡಿದ್ದಾರೆ.

Advertisement

ಜನಪ್ರತಿನಿಧಿಗಳ ಧೋರಣೆಗೆ ಬೇಸತ್ತು ಕಿನ್ನಾಳ ಗ್ರಾಮದ ಹಿಂದೂ ಮಹಾಗಣತಿ ಕಾಮನಕಟ್ಟೆ ಗೆಳೆಯರ ಬಳಗವು ಈ ವರ್ಷ ಡಿಜೆಗೆ ವೆಚ್ಚ ಮಾಡುವ 2 ಲಕ್ಷ ರೂ. ಹಣವನ್ನು ಹದಗೆಟ್ಟ ರಸ್ತೆ ದುರಸ್ತಿ ಮಾಡಿಸೋಣ ಎಂದು ನಿರ್ಧರಿಸಿ ಮಂಗಳವಾರ ತಗ್ಗು ಗುಂಡಿ ಸಮತಟ್ಟು ಮಾಡಿ ರಸ್ತೆ ದುರಸ್ತಿ ಕಾರ್ಯ ಕೈಗೊಂಡಿದ್ದರು. ಅಲ್ಲದೇ ತಗ್ಗುಗಳಿಗೆ ಮರಂ ಹಾಕಿ ವಾಹನ ಸಂಚಾರಕ್ಕೆ ದಾರಿ ಮಾಡಿಕೊಂಡರು.

ಕೊಪ್ಪಳ-ಕಿನ್ನಾಳ ಗ್ರಾಮದ ರಸ್ತೆಯು ಕೊಪ್ಪಳದಿಂದ ಕೇವಲ 11 ಕಿಲೋ ಮೀಟರ್‌ ಇದೆ. ಆದರೆ ಈ ರಸ್ತೆ ಕೊಪ್ಪಳ ತಾಲೂಕು ಹಾಗೂ ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡಲಿದೆ. ಇದರಿಂದ ಗ್ರಾಮದ ಮುಖ್ಯ ರಸ್ತೆ ನಿರ್ಮಾಣಕ್ಕೆ ಎಲ್ಲ ಶಾಸಕರಿಂದ ತಾತ್ಸಾರ ಭಾವನೆ ಮೊದಲಿಂದಲೂ ಇದ್ದೇ ಇದೆ. ನನ್ನ ಕ್ಷೇತ್ರವಲ್ಲ ಎಂದು ಕೊಪ್ಪಳ ಶಾಸಕರು ತಾತ್ಸಾರ ತೋರಿದರೆ, ನನ್ನ ತಾಲೂಕು ಅಲ್ಲ ಎಂದು ಗಂಗಾವತಿ ಕ್ಷೇತ್ರದ ಶಾಸಕರು ತಾತ್ಸಾರ ತೋರುತ್ತಲೇ ಬಂದಿದ್ದಾರೆ.

ಕೊಪ್ಪಳ-ಕಿನ್ನಾಳ ಗ್ರಾಮದ ರಸ್ತೆ ಹದಗೆಟ್ಟು ಹಳ್ಳ ಹಡಿದಿದೆ. ಇಲ್ಲಿ ಸಂಚಾರ ಮಾಡಬೇಕೆಂದರೆ ಹರಸಾಹಸ ಪಡಬೇಕು. ಹಲವು ವರ್ಷಗಳಿಂದ ಶಾಸಕರಿಗೆ, ಸಂಸದರಿಗೆ, ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳ ವರ್ಗಕ್ಕೆ ಹಲವು ಬಾರಿ ಮೊರೆ ಇಟ್ಟಿದ್ದಾರೆ. ಎಲ್ಲರಿಂದಲೂ ಈ ರಸ್ತೆ ನಿರ್ಲಕ್ಷಕ್ಕೆ ಒಳಗಾಗಿದೆ.

ಜನಪ್ರತಿನಿಧಿಗಳ ಆಡಳಿತಕ್ಕೆ ಹಿಡಿದ ಕೈ ಗನ್ನಡಿ: ಕಿನ್ನಾಳ ರಸ್ತೆ ನಿರ್ಮಾಣ ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಈ ರಸ್ತೆ ನಿರ್ಮಾಣಕ್ಕಾಗಿ ಹಣ ಮಂಜೂರು ಆಗಿದೆ ಎಂದೆನ್ನುವ ಮಾತು ಕೇಳಿ ಬಂದಿವೆ. ಆದರೆ ರಸ್ತೆ ದುರಸ್ತಿ ಕಾರ್ಯ ಮಾತ್ರ ನಡೆಯುತ್ತಿಲ್ಲ. ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಕೆಕೆಆರ್‌ಡಿಬಿಯಲ್ಲಿ ರಸ್ತೆ ದುರಸ್ತಿ ಮಾಡಲಾಗುವುದು ಎಂದು ಏಳು ತಿಂಗಳು ಗತಿಸಿವೆ. ಆಗಂಗಾವತಿ ಶಾಸಕ ಜನಾರ್ದನ ರೆಡ್ಡಿಯಂತೂ ಇತ್ತ ಕಡೆ ಇಣುಕಿಯೂ ನೋಡಿಲ್ಲ.ಕೇವಲ ಇದೊಂದೆ ರಸ್ತೆ ಅಲ್ಲದೇ ಕ್ಷೇತ್ರದ ತುಂಬೆಲ್ಲಾ ಇಂತಹ ಹಲವು ರಸ್ತೆಗಳು ಹದಗೆಟ್ಟು ಹಳ್ಳ ಹಡಿದಿವೆ. ಜನರು ಪ್ರಯಾಣಕ್ಕೆ ಪ್ರಯಾಸ ಪಡುವಂತಾಗಿದೆ.

Advertisement

ಕೊಪ್ಪಳ-ಕಿನ್ನಾಳ ರಸ್ತೆಯಲ್ಲಿ 8 ಕಿಮೀ ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ. ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ,
ಹಲವು ಬಾರಿ ಹೋರಾಟ ಮಾಡಿದೆ. ಇದರಿಂದ ಬೇಸತ್ತು ನಾವೇ ಗಣೇಶ ಮೂರ್ತಿ ವೇಳೆ ಡಿಜೆಗೆ ಬಳಕೆ ಮಾಡುವ ಹಣದಲ್ಲಿ ರಸ್ತೆ
ದುರಸ್ತಿ ಮಾಡುವ ಕೆಲಸ ಮಾಡಿದ್ದೇವೆ.
●ಮೌನೇಶ ಕಿನ್ನಾಳ, ಹಿಂದೂ ಮಹಾಗಣತಿ ಕಾಮನಕಟ್ಟೆ ಗೆಳೆಯರ ಬಳಗದ ಸದಸ್ಯ

ಕಿನ್ನಾಳ ಗ್ರಾಮದ ರಸ್ತೆ ನಿರ್ಮಾಣ ಕಾಮಗಾರಿಗೆ 9.50 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಟೆಂಡರ್‌ ಪ್ರಕ್ರಿಯೆ ಸ್ವಲ್ಪ ವಿಳಂಬವಾಗಿದೆ. ಇದೇ ವಾರದಲ್ಲಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಮಾಡಲಿದ್ದೇನೆ. ಗ್ರಾಮಸ್ಥರು ತಾವೇ ತಮ್ಮೂರ ರಸ್ತೆ ಬಗ್ಗೆ ಕಾಳಜಿಯಿಂದ ದುರಸ್ತಿ ಮಾಡಿಕೊಂಡಿದ್ದಾರೆ.
●ರಾಘವೇಂದ್ರ ಹಿಟ್ನಾಳ, ಕೊಪ್ಪಳ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next