ಕೊಪ್ಪಳ: ಅನ್ಯ ಇಲಾಖೆಯ ಕೆಲಸದ ಒತ್ತಡವನ್ನು ನಮ್ಮ ಇಲಾಖೆ ನೌಕರರ ಮೇಲೆ ಹೇರುತ್ತಿರುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಜಿಲ್ಲಾ ಘಟಕದಿಂದ ನಗರದಲ್ಲಿ ಬುಧವಾರ ಒಂದು ದಿನದ ಸಾಂಕೇತಿಕ ಧರಣಿ ನಡೆಸಲಾಯಿತು.
ರಜಾ ದಿನದಲ್ಲಿ ಕೆಲಸದ ಒತ್ತಡ ಹೇರುವುದನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದ್ದರೂ ಹಲವು ಜಿಲ್ಲೆಗಳಲ್ಲಿ ಪದೇ ಪದೇ ಸಾರ್ವತ್ರಿಕ ರಜೆ ದಿನದಲ್ಲಿ ಕೆಲಸದ ಒತ್ತಡ ಹೇರಲಾಗುತ್ತಿದೆ. ಇದರಿಂದ ಕೌಟಂಬಿಕ ಕಲಹ ಉಂಟಾಗಿ ನಮಗೆ ಮಾನಸಿಕ ನೆಮ್ಮದಿ ಇಲ್ಲದಂತಾಗುತ್ತಿದೆ. ಕೂಡಲೇ ಇಲಾಖೆಯ ಕೆಲಸದ ಒತ್ತಡ ಹೇರುವುದನ್ನು ಕಡಿಮೆ ಮಾಡಬೇಕೆಂದು ಒತ್ತಾಯ ಮಾಡಲಾಯಿತು.
ಗ್ರಾಮ ಲೆಕ್ಕಾಧಿಕಾರಿಗಳಿಗೆ ಜಾಬ್ ಚಾರ್ಟ್ ನೀಡುವ ಬಗ್ಗೆ ತೀರ್ಮಾನಿಸಿದ್ದರೂ ಇದುವರೆಗೂ ಪರಿಷ್ಕೃತ ಜಾಬ್ ಚಾರ್ಟ್ ತೀರ್ಮಾನಿಸಿಲ್ಲ. ಗ್ರಾಮ ಲೆಕ್ಕಾಧಿಕಾರಿ ಸಾಹೇಬ್ ಪಾಟೀಲ್ ಮರಳು ದಂಧೆಕೋರರಿಂದ ಬಲಿಯಾದರು. ಕೂಡಲೇ ಆ ಕುಟುಂಬಕ್ಕೆ 20 ಲಕ್ಷ ಪರಿಹಾರ ಬಿಡುಗಡೆ ಮಾಡಬೇಕು. ಜೊತೆಗೆ ನಮ್ಮ ಹುದ್ದೆ ಮೇಲ್ದರ್ಜೆಗೇರಿಸುವ ಕುರಿತು ಈಗಾಗಲೇ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸಹಿತ ಕಡತವನ್ನು ಗ್ರಾಮ ಲೆಕ್ಕಾಧಿಕಾರಿಗಳಿಗೆ ಯಾವುದೇ ಕಾರ್ಯಕ್ಷಮತೆ ಇಲ್ಲವೆಂದು 6ನೇ ವೇತನ ಆಯೋಗದ ಸಮಿತಿ ತಿರಸ್ಕರಿಸಿದೆ. ಕೂಡಲೇ ಇದನ್ನು ಪರಿಶೀಲಿಸಬೇಕೆಂದು ಒತ್ತಾಯಿಸಿದರು.
ಗ್ರಾಮ ಸಹಾಯಕರ ಹುದ್ದೆ ಕಾಯಂಗೊಳಿಸುವುದನ್ನು ಈ ವರೆಗೂ ಈಡೇರಿಸಿಲ್ಲ. ಗ್ರಾಮ ಲೆಕ್ಕಾಧಿಕಾರಿ ಹುದ್ದೆಯು 1972ರಿಂದ ಜಾರಿಯಲ್ಲಿದ್ದು, ಆಗ ಜನಗಣತಿ ಆಧಾರದ ಮೇಲೆ ಗ್ರಾಮ ಲೆಕ್ಕಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಈಗಿನ ಜನಸಂಖ್ಯೆ ಭೌಗೋಳಿಕ ಕ್ಷೇತ್ರಗಳಿಗೆ ಅನುಗುಣವಾಗಿ ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆ ಸೃಷ್ಟಿಸಬೇಕೆಂದು ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಒಂದು ದಿನದ ಸಾಂಕೇತಿಕ ಧರಣಿ ನಡೆಸಿ ಡಿಸಿ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದರು.
ಧರಣಿ ವೇಳೆ ಸಂಘದ ಜಿಲ್ಲಾಧ್ಯಕ್ಷ ಮುಮಹ್ಮದ್ ಆಸೀಫ್ ಅಲಿ, ಬಸವನಗೌಡ, ವೇಲಪ್ಪನ್, ಮೈನುದ್ದೀನ್ ಸೇರಿದಂತೆ ಇತರರಿದ್ದರು.