Advertisement

ಕೊಪ್ಪಳದಲ್ಲಿ ಸಿದ್ದು ಸ್ಪರ್ಧೆ? ಟಕ್ಕರ್‌ ನೀಡಲು ಸಂಗಣ್ಣ ಕರಡಿ ಕಣಕ್ಕಿಳಿಸಲು ಸಿದ್ಧತೆ

11:48 PM May 12, 2022 | Team Udayavani |

ಕೊಪ್ಪಳ: ಜಿಲ್ಲೆಯಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಸದ್ದಿಲ್ಲದೇ ತಮ್ಮ ಕಾರ್ಯ ಚಟುವಟಿಕೆ ಆರಂಭಿಸಿದ್ದು, ಈ ಬಾರಿ ಹಳೇ ಹಾಗೂ ಹೊಸ ಮುಖಗಳು ಕಣಕ್ಕಿಳಿಯಲಿವೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

Advertisement

ಕೊಪ್ಪಳ ಜಿಲ್ಲೆ ಐದು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು ಪ್ರಸ್ತುತ ಮೂವರು ಬಿಜೆಪಿ ಶಾಸಕರಿದ್ದರೆ, ಇಬ್ಬರು ಕಾಂಗ್ರೆಸ್‌ ಶಾಸಕರಿದ್ದಾರೆ. 5 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಬಾವುಟ ಹಾರಿಸಬೇಕೆಂದು ಕೈ ಸನ್ನದ್ಧವಾಗುತ್ತಿದ್ದರೆ, ಜಿಲ್ಲೆಯನ್ನು ಕೇಸರಿಮಯ ಮಾಡಬೇಕೆಂದು ಬಿಜೆಪಿ ರಣತಂತ್ರ ರೂಪಿಸುತ್ತಿದೆ.

ಕೊಪ್ಪಳ ಕ್ಷೇತ್ರದ ಕುತೂಹಲ: ಕೊಪ್ಪಳ ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್‌ ಶಾಸಕ ರಾಘವೇಂದ್ರ ಹಿಟ್ನಾಳ ಹ್ಯಾಟ್ರಿಕ್‌ ಗೆಲುವಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ವಿಪಕ್ಷ ನಾಯಕ ಸಿದ್ದ   ರಾಮಯ್ಯ ಕೊಪ್ಪಳ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎನ್ನುವ ರಾಜಕೀಯ ಗುಲ್ಲು ಜನರಲ್ಲೂ ಕುತೂಹಲ ತರಿಸಿದೆ. ಸಿದ್ದರಾಮಯ್ಯ ಕೊಪ್ಪಳ ಕ್ಷೇತ್ರದ ಬಗ್ಗೆ ಪ್ರೀತಿ ತೋರುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿಯಿಂದ ಹಾಲಿ ಸಂಸದ ಸಂಗಣ್ಣ ಕರಡಿ ಅವರನ್ನು ವಿಧಾನಸಭಾ ಕ್ಷೇತ್ರಕ್ಕೆ ಮತ್ತೆ ಕಣಕ್ಕಿಳಿಸಬೇಕೆನ್ನುವ ಚರ್ಚೆಯೂ ನಡೆದಿದೆ. ಇವರೊಟ್ಟಿಗೆ ಸಿ.ವಿ.ಚಂದ್ರಶೇಖರ ಟಿಕೆಟ್ ಗಾಗಿ ಪೈಪೋಟಿ ನಡೆಸಿದ್ದಾರೆ. ಕಳೆದ ಬಾರಿಯೇ ಅವರಿಗೆ ಟಿಕೆಟ್‌ ಘೋಷಣೆಯಾಗಿ ಕೊನೇ ಘಳಿಗೆಯಲ್ಲಿ ಅಮರೇಶ ಕರಡಿಗೆ ಬಿ ಫಾರಂ ಸಿಕ್ಕು ಕೊನೇ ಹಂತದಲ್ಲಿ ಸೋಲು ಕಂಡರು. ಇಲ್ಲಿ ಆಂತರಿಕ ಭಿನ್ನಮತ ಇದ್ದೇ ಇದೆ. ಇನ್ನು ದಳದಿಂದ ವೀರೇಶ ಮಹಾಂತಯ್ಯನಮಠ ಅವರನ್ನು ಕಣಕ್ಕಿಳಿಸಲು ತಯಾರಿ ನಡೆಸಲಾಗಿದೆಯಾದರೂ ಕೊನೇ ಘಳಿಗೆಯಲ್ಲಿ ಏನೆಲ್ಲ ಬದಲಾವಣೆ ನಡೆದರೂ ಅಚ್ಚರಿಯಿಲ್ಲ.

ಗಂಗಾವತಿ ಕಥೆ ಏನು?: ಗಂಗಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಲ್ಲಿ ಇಕ್ಬಾಲ್‌ ಅನ್ಸಾರಿ ಗೆಲುವು ಕಾಣಬೇಕೆಂದು ಭರ್ಜರಿ ತಯಾರಿ ನಡೆಸಿದ್ದರೆ, ಅವರಲ್ಲೇ ಎಚ್‌.ಆರ್‌.ಶ್ರೀನಾಥ ಜೆಡಿಎಸ್‌ನಲ್ಲಿದ್ದರೂ ಕೈಯಿಂದ ಟಿಕೆಟ್‌ಗೆ ಪೈಪೋಟಿ ನಡೆಸಿದ್ದಾರೆ. ಇನ್ನು ಮಲ್ಲಿಕಾರ್ಜುನ ನಾಗಪ್ಪ ಸೇರಿ ಇತರರು ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಈಚೆಗೆ ಮೇಲ್ಮನೆ ವಿಪಕ್ಷ ನಾಯಕ ಹರಿಪ್ರಸಾದ ಜಿಲ್ಲಾ ಪ್ರವಾಸದಲ್ಲಿ ಅವರ ಮುಂದೆ ಹಲವು ರಾಜಕೀಯ ಪ್ರಸ್ತಾವಗಳು ನಡೆದಿರುವುದು ರಾಜಕೀಯ ವಲಯದಲ್ಲಿ ಹಲವು ಚರ್ಚೆಗಳಿಗೆ ಸಾಕ್ಷಿಯಾಗಿದೆ.

ಯಲಬುರ್ಗಾದಲ್ಲಿ ಯಾರು?: ಯಲಬುರ್ಗಾದಲ್ಲಿ ಬಿಜೆಪಿಯಿಂದ ಹಾಲಿ ಸಚಿವ ಹಾಲಪ್ಪ ಆಚಾರ್‌ ಅವರಿಗೆ ಟಿಕೆಟ್‌ ಸಿಗುವ ನಿರೀಕ್ಷೆಯಿದ್ದು, ಯುವ ಮುಖಗಳಿಗೆ ಅವಕಾಶ ಕೊಡಬೇಕೆನ್ನುವ ಲೆಕ್ಕಾಚಾರ ಕೇಳಿ ಬಂದರೆ ನವೀನ್‌ ಗುಳಗಣ್ಣನವರ್‌, ಬಸವರಾಜ ರಾಜೂರು(ಗೌರಾ) ಹೆಸರು ಪ್ರಸ್ತಾವವಾದರೂ ಅಚ್ಚರಿಯಿಲ್ಲ. ಆದರೆ ಹಿರಿಯ, ಅನುಭವಿ ರಾಜಕಾರಣಿ ಹಾಲಪ್ಪ ಆಚಾರ್‌ ಅವರೇ ಅಭ್ಯರ್ಥಿ ಎನ್ನುವುದು ಮಾತ್ರ ಆಂತರಿಕ ವಲಯದಲ್ಲಿ ಪಕ್ಕಾ ಎನ್ನಲಾಗುತ್ತಿದೆ. ಇನ್ನು ಕಾಂಗ್ರೆಸ್‌ನಲ್ಲಿ ಮಾಜಿ ಸಚಿವ ಬಸವರಾಜ ರಾಯರಡ್ಡಿ ಪೈಪೋಟಿ ನೀಡಲು ಭರ್ಜರಿ ರಣತಂತ್ರ ಹೆಣೆಯುತ್ತಿದ್ದಾರೆ.

Advertisement

ಕುಷ್ಟಗಿ, ಕನಕಗಿರಿ ಕಣ ಹೇಗಿದೆ?: ಕುಷ್ಟಗಿ ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್‌ ಶಾಸಕ ಅಮರೇಗೌಡ ಬಯ್ನಾಪೂರ ಮತ್ತೆ ಕಣಕ್ಕಿಳಿಯಲು ಸಜ್ಜಾಗುತ್ತಿದ್ದರೆ, ಅವರಿಗೆ ಇದಿರೇಟು ನೀಡಲು, ಮತ್ತೆ ಕಮಲ ಅರಳಿಸಲು ಬಿಜೆಪಿಯಿಂದ ದೊಡ್ಡನಗೌಡ ಪಾಟೀಲ್‌ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕನಕಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಶಿವರಾಜ ತಂಗಡಗಿ ಕಣಕ್ಕಿಳಿದು ಮತ್ತೆ ಕ್ಷೇತ್ರ ಕೈವಶ ಮಾಡಿಕೊಳ್ಳಲು ತಯಾರಿ ಮಾಡಿಕೊಂಡಿದ್ದಾರೆ. ಇವರಿಗೆ ಪ್ರತಿಯಾಗಿ ಬಿಜೆಪಿಯಿಂದ ಹಾಲಿ ಶಾಸಕ ಬಸವರಾಜ ದಡೆಸೂಗೂರು ರಣಕಣದಲ್ಲಿ ಇದಿರೇಟು ನೀಡಲು ಸಿದ್ಧವಾಗುತ್ತಿದ್ದಾರೆ.

ಶೀಘ್ರ ಪಕ್ಷಾಂತರ ಪರ್ವ?
ಜಿಲ್ಲೆಯಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಮುಖ ಪಕ್ಷಗಳ 2ನೇ ಹಂತದ ನಾಯಕರು ಪಕ್ಷಾಂತರ ಮಾಡುತ್ತಾರೆ ಎನ್ನುವ ಸುದ್ದಿಯಿದೆ. ಆದರೆ ಇನ್ನೂ ಅಂತಹ ಬೆಳವಣಿಗೆ ಸದ್ಯಕ್ಕಂತೂ ಕಾಣುತ್ತಿಲ್ಲ. ಚುನಾವಣೆ ಹತ್ತಿರವಾದಂತೆ ಪಕ್ಷಾಂತರ ಪರ್ವ ನಡೆದರೂ ಅಚ್ಚರಿಯಿಲ್ಲ. ಮೂರು ಪಕ್ಷಗಳಲ್ಲೂ ಆಂತರಿಕ ಭಿನ್ನಮತ ಇದ್ದೇ ಇದೆ. ಚುನಾವಣೆ ಸಮಯದಲ್ಲಿ ಸ್ಫೋಟಗೊಳ್ಳುವ ಸಾಧ್ಯತೆಯೂ ಇದೆ.

ಅವಧಿ ಪೂರ್ವ ಚುನಾವಣೆ ಬರುವ ಲಕ್ಷಣಗಳು ಕಾಣುತ್ತಿವೆ. ನಮ್ಮ ಪಕ್ಷದ ನಾಯಕರು ನೀವು ತಯಾರಾಗಿರಿ ಎಂದು ಸೂಚನೆ ಕೊಟ್ಟಿದ್ದಾರೆ. ಹಾಗಾಗಿ ಪಕ್ಷದ ಎಲ್ಲ ಕಾರ್ಯ ಚಟುವಟಿಕೆಗಳು ನಡೆದಿವೆ. ಯಾವುದೇ ಸಮಯದಲ್ಲಿ ಚುನಾವಣೆ ನಡೆದರೂ ನಾವು ಮತ್ತು ನಮ್ಮ ಅಭ್ಯರ್ಥಿಗಳು ಸಿದ್ಧವಾಗಿದ್ದಾರೆ.
– ಶಿವರಾಜ ತಂಗಡಗಿ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ

ಅವಧಿ ಪೂರ್ವ ಚುನಾವಣೆ ಇಲ್ಲ ಎಂದು ಪಕ್ಷದ ನಾಯಕರೇ ಸ್ಪಷ್ಟಪಡಿಸಿದ್ದಾರೆ. ಅಂತಹ ಲಕ್ಷಣವೂ ಕಾಣುತ್ತಿಲ್ಲ. ಯಾವುದೇ ಸಂದರ್ಭದಲ್ಲಿ ಚುನಾವಣೆ ಘೋಷಣೆಯಾ ದರೂ ನಾವು ತಯಾರಾಗಿದ್ದೇವೆ. ಬಿಜೆಪಿ ಸಂಘಟನಾತ್ಮಕ ಪಕ್ಷ. ಅಭ್ಯರ್ಥಿಗಳು ಯಾರೆಂದು ಹೈಕಮಾಂಡ್‌ ನಿರ್ಧಾರ ಮಾಡಲಿದೆ.
– ದೊಡ್ಡನಗೌಡ ಪಾಟೀಲ್‌, ಬಿಜೆಪಿ ಜಿಲ್ಲಾಧ್ಯಕ್ಷ

ಚುನಾವಣೆ ಯಾವುದೇ ಸಂದರ್ಭದಲ್ಲಿ ಘೋಷಣೆಯಾದರೂ ನಾವು ತಯಾರಾಗಿದ್ದೇವೆ. ತಾಲೂಕು ಹಂತದಲ್ಲಿ ನಾವು ಸಂಘಟನೆ ಮಾಡಿದ್ದೇವೆ. ಜಿಲ್ಲೆಯಲ್ಲಿ ಮೂವರು ಅಭ್ಯರ್ಥಿಗಳಿಗೆ ರಾಜ್ಯ ನಾಯಕರು ಟಾಸ್ಕ್ ನೀಡಿದ್ದಾರೆ.
– ಅಮರೇಗೌಡ ಪಾಟೀಲ್‌, ಜೆಡಿಎಸ್‌ ಜಿಲ್ಲಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next