ಕೊಪ್ಪಳ: ಜಿಲ್ಲೆಯಲ್ಲಿ ಜಾನುವಾರು ಸಂರಕ್ಷಣೆಗಾಗಿ 7 ಗೋಶಾಲೆ ನಡೆಸಲಾಗುತ್ತಿದ್ದು, ಸಬ್ಸಿಡಿ ದರದಲ್ಲಿ ಮೇವು ಬ್ಯಾಂಕ್‌ಗಳ ಮೂಲಕವೂ ಮೇವು ಕಲ್ಪಿಸಲಾಗುತ್ತಿದೆ. ಇದರೊಂದಿಗೆ ಸರ್ಕಾರದ ಜಮೀನು, ಅಂಗಳದಲ್ಲಿ ಹಸಿರು ಮೇವು ಬೆಳೆಸಲು ಮೂಲಭೂತ ಸೌಕರ್ಯ ಕಲ್ಪಿಸಿ ನಿರ್ವಹಣೆಗೆ ಹಾಲು ಉತ್ಪಾದಕ ಸೊಸೈಟಿಗೆ ವಹಿಸುವುದರಿಂದ ಪರಿಣಾಮಕಾರಿಯಾಗಿ ನಿರ್ವಹಣೆ ಸಾಧ್ಯವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹರ್ಷ ಗುಪ್ತಾ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲೆಯಲ್ಲಿನ ಬರ ನಿರ್ವಹಣೆ ಮತ್ತು ವಿವಿಧ ಇಲಾಖೆಗಳಲ್ಲಿನ ಪ್ರಗತಿ ಪರಿಶೀಲನೆ ವೇಳೆ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಅಂದಾಜು 2.83 ಲಕ್ಷ ಜಾನುವಾರುಗಳಿವೆ. ಅದರಲ್ಲಿ 4 ಸಾವಿರ ಜಾನುವಾರುಗಳಿಗೆ ಗೋಶಾಲೆಯಲ್ಲಿ ಮೇವು ವಿತರಿಸಲಾಗುತ್ತಿದೆ. ಮೇವು ಬ್ಯಾಂಕ್‌ಗಳಲ್ಲಿ ಪ್ರತಿ ಕೆ.ಜಿಗೆ 2 ರೂ. ದರ ನಿಗದಿ ಮಾಡಿದೆ. ಆದರೆ ಜಾನುವಾರುಗಳ ಸಂಖ್ಯೆ ಹೆಚ್ಚಿರುವುದರಿಂದ ಎಲ್ಲ ಜಾನುವಾರಿಗೂ ಮೇವು ವಿತರಿಸಬೇಕು. ಇದಕ್ಕಾಗಿ ರೈತರಿಗೆ ಮೇವಿನ ಬೀಜ ಉಚಿತವಾಗಿ ವಿತರಿಸಲಾಗುತ್ತಿದೆ. ಎಲ್ಲೆಲ್ಲಿ ಅವಕಾಶವಿದೆ ಅಂತಹ ಕಡೆ ಹಸಿರು ಮೇವು ಬೆಳೆಸಲು ಸ್ಥಳ ಗುರುತಿಸಿ ಇದಕ್ಕೆ ಬೇಕಾದ ನೀರು, ತಡೆ ಬೇಲಿ ನಿರ್ಮಿಸಿ ಆಯಾ ಭಾಗದ ಹಾಲು ಉತ್ಪಾದಕರ ಸೊಸೈಟಿಗಳಿಗೆ ನಿರ್ವಹಣೆ ಮತ್ತು ವಿತರಣೆಗೆ ನೀಡುವುದರಿಂದ ಅವರ ಸಹಭಾಗಿತ್ವ ಮತ್ತು ಪಾರದರ್ಶಕವಾಗಿರುತ್ತದೆ. ಈಗಾಗಲೇ ಈ ವ್ಯವಸ್ಥೆ ಗುಜರಾತ್‌ನಲ್ಲಿದೆ ಎಂದರು.
ಮಾನವ ದಿನ ಸೃಷ್ಟಿಸಿ: ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆಯಾಗದ ಕಾರಣ ಭೀಕರ ಬರಗಾಲ ಸ್ಥಿತಿಯಿದೆ. ಆದ್ದರಿಂದ ನರೇಗಾ ಯೋಜನೆಯಡಿ ಮಾನವ ದಿನ ಸೃಷ್ಟಿಸಬೇಕು. ನರೇಗಾದಡಿ ನೋಂದಣಿ ಮಾಡಿಕೊಂಡ ಕೂಲಿಕಾರರಿಗೆ ನಮೂನೆ-6ನ್ನು ಸಂಬಂಧಿಸಿದ ಗ್ರಾಪಂ ಒದಗಿಸಬೇಕು. ನಮೂನೆ-6ನ್ನು ನೀಡಿದ 15 ದಿನಗಳಲ್ಲಿ ಆ ವ್ಯಕ್ತಿಗೆ ಕೆಲಸ ನೀಡಬೇಕು. ಮಾನವ ದಿನಗಳ ಸೃಷ್ಟಿಯಲ್ಲಿ ಇದುವರೆಗೆ ಕಡಿಮೆ ಸಾಧನೆ ಮಾಡಿರುವ ತಾಲೂಕುಗಳಲ್ಲಿ ಸಂಬಂಧಿಸಿ ಕಾರ್ಯನಿರ್ವಾಹಕ ಅಧಿಕಾರಿಗಳು, ಪಿಡಿಒಗಳು ಹಾಗೂ ಗ್ರಾಪಂ ಸಿಬ್ಬಂದಿಗಳಿಗೆ ಸೂಕ್ತ ತಿಳಿವಳಿಕೆ ನೀಡಬೇಕು ಎಂದರು.
ಜಿಪಂ ಉಪ ಕಾರ್ಯದರ್ಶಿ ಎನ್.ಕೆ. ತೊರವಿ ಮಾತನಾಡಿ, ಕಳೆದ ವರ್ಷ 36 ಲಕ್ಷ ಮಾನವ ದಿನಗಳ ಸೃಜನೆ ಗುರಿಯಲ್ಲಿ 42 ಲಕ್ಷ ಸಾಧನೆ ಮಾಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿ 44 ಲಕ್ಷ ಮಾನವ ದಿನ ಸೃಜಿಸುವ ಗುರಿ ಹೊಂದಲಾಗಿದ್ದು, ಜೂನ್‌ವರೆಗೆ 14.94 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಬರ ಪರಿಸ್ಥಿತಿ ಇರುವುದರಿಂದ ಜನರಿಗೆ ಉದ್ಯೋಗ ಕೊಡಲು ಸಮುದಾಯದ ಕಾಮಗಾರಿ ಮತ್ತು ಕೆರೆ ಹೂಳೆತ್ತುವ ಕೆಲಸ ಕೈಗೊಳ್ಳಲಾಗಿದೆ. ಇಂತಹ ಕಡೆ 1500 ರಿಂದ 2000 ವರೆಗೆ ಜನರು ಭಾಗವಹಿಸುತ್ತಿದ್ದಾರೆ ಎಂದರು.
ತಾಂತ್ರಿಕ ತೊಂದರೆ ನಿವಾರಿಸಿ: ಉಸ್ತುವಾರಿ ಕಾರ್ಯದರ್ಶಿ ಮಾತನಾಡಿ, ರೈತರ ಸಾಲ ಮನ್ನಾ ಸೇರಿದಂತೆ ರೈತರ ಬ್ಯಾಂಕ್ ಖಾತೆ ಆಧಾರ್ ಸಂಖ್ಯೆ ಜೋಡಿಸುವಲ್ಲಿ ಇರುವ ತಾಂತ್ರಿಕ ತೊಂದರೆ ಶೀಘ್ರ ಪರಿಹರಿಸಿ. ಸಾಲ ಮನ್ನಾ ವಿಷಯದಲ್ಲಿ ಸರ್ಕಾರ ನಿಗದಿ ಪಡಿಸಿರುವ ಅರ್ಹತಾ ಮಾನದಂಡ ಪರಿಶೀಲಿಸಿ ಅರ್ಹ ರೈತರಿಗೆ ಯೋಜನೆಯ ಲಾಭ ಒದಗಿಸಿ ಎಂದರು.
ಮಾಸಾಶನ ಸೇರಿ ವಿವಿಧ ಯೋಜನೆಗಳಿಗೆ ಆಧಾರ್ ಜೋಡಣೆ ಮಾಡಲಾಗುತ್ತದೆ. ಆಧಾರ್ ಜೋಡಣೆ ವಿಳಂಬದಿಂದ ಅಂಕಿ ಅಂಶ ಸಂಗ್ರಹಿಸುವಲ್ಲಿ ಸಾಕಷ್ಟು ವಿಳಂಬವಾಗುತ್ತದೆ. ಇದನ್ನು ತಪ್ಪಿಸಲು ಆಯಾ ಗ್ರಾಪಂಗಳಲ್ಲಿ ಇರುವ ಕಿಯೋಸ್ಕಗಳ ಮೂಲಕ ಆಧಾರ್ ಜೋಡಣೆ ಮಾಡಬೇಕು. ಜಿಲ್ಲೆಯ 333 ಗ್ರಾಮಗಳಲ್ಲಿ ಅಧಿಕೃತ ರುದ್ರಭೂಮಿಗಳಿಲ್ಲ ಎಂಬ ಮಾಹಿತಿಯಿದೆ. ಇಷ್ಟೊಂದು ಗ್ರಾಮಗಳಲ್ಲಿ ರುದ್ರಭೂಮಿ ಇಲ್ಲದಿರಲು ಸಾಧ್ಯವಿಲ್ಲ, ಇದನ್ನು ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
ವಿಳಂಬ ಬೇಡ: ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಯಡಿ ಜಿಲ್ಲೆಯ 20 ಗ್ರಾಮಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರ ನೀಡಿರುವ ಅನುದಾನ ವ್ಯವಸ್ಥಿತವಾಗಿ ಬಳಸಬೇಕು. ಅಭಿವೃದ್ಧಿ ಕಾಮಗಾರಿಯಲ್ಲಿ ವಿಳಂಬವಾದರೆ ಸಂಬಂಧಿಸಿದವರ ಮೇಲೆ ದಂಡ ವಿಧಿಸಿ ಎಂದರು.
ವಸತಿ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನ ಮಾಡಲು ಫಲಾನುಭವಿಗಳಿಗೆ ಉದ್ಭವಿಸುವ ಸಮಸ್ಯೆ, ತೊಂದರೆ ನಿವಾರಿಸಲು ವಸತಿ ಸಹಾಯಕರನ್ನು ನೇಮಕ ಮಾಡಿದಲ್ಲಿ ತ್ವರಿತ ಅನುಷ್ಠಾನ ಸಾಧ್ಯವಾಗಲಿದೆ ಎನ್ನುವುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ತಿಳಿಸಿದರು.
ಸಭೆಯಲ್ಲಿ ಡಿಸಿ ಸುನೀಲ್ ಕುಮಾರ, ಪ್ರೊಬೇಷನರಿ ಐಎಎಸ್ ಅಧಿಕಾರಿ ಸ್ನೇಹಾ ಜೈನ್, ಡಿಎಫ್‌ಒ ಯಶ್‌ಪಾಲ ಕ್ಷೀರಸಾಗರ, ಎಡಿಸಿ ಸೈಯದಾ ಅಯಿಷಾ, ಯೋಜನಾ ನಿರ್ದೇಶಕ ರವಿ ಬಿಸರಳ್ಳಿ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.