ಕೊಪ್ಪಳ: ಮಾ. 10 ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಅಂಗವಾಗಿ ಜಿಲ್ಲೆಯ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಿಸುವಂತೆ ಜಿಪಂ ಸಿಇಒ ಆರ್.ಎಸ್. ಪೆದ್ದಪ್ಪಯ್ಯ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಪಂ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಜಿಲ್ಲಾ ಮಟ್ಟದ ಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಪೋಲಿಯೋ ಲಿಸಿಕೆ ಅತ್ಯವಶ್ಯಕವಾಗಿದ್ದು, ಜಿಲ್ಲೆಯಲ್ಲಿರುವ 0 ರಿಂದ 05 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆ ಹಾಕಿಸಬೇಕು. ಈ ಕುರಿತು ಆರೋಗ್ಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೊಂದಿಗೆ ಎಲ್ಲರೂ ಸಹಕರಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪ್ರಾರ್ಥನೆ ಸಮಯದಲ್ಲಿ ಘೋಷಣೆ ಕೂಗುವುದು, ಜನ ಜಾಗೃತಿ ಜಾಥಾ ಕಾರ್ಯ ಕೈಗೊಳ್ಳಬೇಕು. ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ಲಸಿಕೆ ಕೇಂದ್ರಕ್ಕೆ ಮಕ್ಕಳನ್ನು ಕರೆತರುವಂತಹ ಕಾರ್ಯವಾಗಬೇಕು. ಮಹಿಳಾ ಮತ್ತು ಮಕ್ಕಳ ಕೇಂದ್ರ ಇಲಾಖೆಯಿಂದ ಲಸಿಕಾ ದಿನದಂದು ಅಂಗನವಾಡಿ ಕೇಂದ್ರ ತೆರೆಯುವುದು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸೂಚಿಸಬೇಕು ಎಂದರು.
ಬಳ್ಳಾರಿ ಎಸ್‌ಎಂಒ ಡಾ. ಶ್ರೀಧರ ಮಾತನಾಡಿ, ಭಾರತದ ನೆರೆ ರಾಷ್ಟ್ರಗಳಾದ ಪಾಕಿಸ್ತಾನ, ಅಪಘಾನಿಸ್ತಾನ, ನೈಜೀರಿಯಾಗಳಲ್ಲಿ ಪೋಲಿಯೋ ಪ್ರಕರಣ ಇರುವುದರಿಂದ ಮುಂಜಾಗ್ರತಿಗಾಗಿ ದೇಶದಲ್ಲಿ ಈ ಪೋಲಿಯೋ ಕಾರ್ಯಕ್ರಮ ನಡೆಸಲಾಗುತ್ತದೆ. ಈ ಬಾರಿ ಒಂದೇ ಸುತ್ತು ಇದ್ದು, ಈ ಕಾರ್ಯಕ್ರಮವು 2019 ರಿಂದ 2023 ರವರೆಗೆ ಮುಂದುವರಿಯಲಿದೆ. ಲಸಿಕೆ ಕೂಡ ಬದಲಾವಣೆಯಾಗಿದೆ. 2011 ರಿಂದ ಯಾವುದೇ ಪೋಲಿಯೋ ಪ್ರಕರಣಗಳು ವರದಿಯಾಗಿರುವುದಿಲ್ಲ. ಕಣ್ಣಗಾವಲು ಸಮಿತಿಯಿಂದ ಕಾರ್ಯಕ್ರಮದ ನಂತರ ಸಮೀಕ್ಷೆ ಮಾಡಲಾಗುತ್ತದೆ. ಕಾರ್ಯಕ್ರಮದಲ್ಲಿ ಸಮಸ್ಯಾತ್ಮಕ ಪ್ರದೇಶಗಳಾದ ವಲಸೆ ಜನಾಂಗ, ಇಟ್ಟಿಂಗಿ ಬಟ್ಟಿ, ಕಟ್ಟಡ ಕಾರ್ಮಿಕರ, ಕಬ್ಬು ಕಡೆಯುವ ಜನಾಂಗದ 0-5 ವರ್ಷ ಎಲ್ಲಾ ಮಕ್ಕಳಿಗೂ ಪೋಲಿಯೋ ಹನಿ ಹಾಕುವ ಗುರಿ ಹೊಂದಲಾಗಿದೆ ಎಂದರು.
ಜಿಲ್ಲಾ ಆರ್‌ಸಿಎಚ್ ಅ ಧಿಕಾರಿ ಡಾ. ಅಲಕನಂದಾ ಮಳಗಿ ಮಾತನಾಡಿ, ಜಿಲ್ಲೆಯ 0-5 ವರ್ಷ ಮಕ್ಕಳ ಸಂಖ್ಯೆ 1,82,417, ಎಲ್ಲಾ ಮಕ್ಕಳಿಗೆ ಪೋಲಿಯೋ ಹಾಕುವ ಗುರಿ ಹೊಂದಿದೆ. ಎಲ್ಲಾ ಮಕ್ಕಳಿಗೂ ಮೊದಲನೆ ದಿನದಲ್ಲಿ ಲಸಿಕೆ ಕೇಂದ್ರದಲ್ಲಿ 100 ಕ್ಕೆ 95 ರಷ್ಟು ಪ್ರಗತಿ ಸಾಧಿ ಸುವಂತೆ ಎಲ್ಲಾ ಇಲಾಖೆಗಳು ಸಹಕರಿಸಬೇಕು. 18 ಮೊಬೈಲ್ ತಂಡ, 47 ಟ್ರಾನಜೆಂಟ್ ತಂಡ, 868 ಲಸಿಕಾ ಕೇಂದ್ರಗಳು ಒಟ್ಟು ಜಿಲ್ಲೆಯಲ್ಲಿ 933 ತಂಡಗಳು ಕಾರ್ಯ ನಿರ್ವಹಿಸಲಿವೆ. ಜೆಸ್ಕಾಂ ಇಲಾಖೆಯಿಂದ ಈ ಕಾರ್ಯಕ್ರಮದ ಅವಧಿಯಲ್ಲಿ ನಿರಂತರ ವಿದ್ಯುತ್ ನೀಡಬೇಕು. ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ವಾಹನ ವ್ಯವಸ್ಥೆ ಮಾಡಿ ಸಹಕರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಬಿ ದಾನರೆಡ್ಡಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜಂಬಯ್ಯ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಮಹೇಶ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಎಸ್.ಕೆ ದೇಸಾಯಿ, ರೋಟರಿ ಕ್ಲಬ್‌ನ ಡಾ. ರಾಧಾ ಕುಲಕರ್ಣಿ ಸೇರಿದಂತೆ ನಾಲ್ಕು ತಾಲೂಕು ಆರೋಗ್ಯಾಧಿಕಾರಿಗಳು, ತಾಲೂಕು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳು, ಶಿಕ್ಷಣ, ಜೆಸ್ಕಾಂ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಕೊಪ್ಪಳ ವೈದ್ಯಕೀಯ ಕಾಲೇಜಿನ ಅಧಿಕಾರಿಗಳು, ಇತರೆ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರರು ಪಾಲ್ಗೊಂಡಿದ್ದರು.