ಕೊಪ್ಪಳ: ತಾಲೂಕಿನ ತಿಗರಿ ಗ್ರಾಮದಲ್ಲಿ ಸಾಮೂಹಿಕ ವಿವಾಹದಲ್ಲಿ ಎರಡು ಗುಂಪುಗಳ ನಡುವೆ ಘರ್ಷನೆ ನಡೆದ ಹಿನ್ನೆಲೆಯಲ್ಲಿ ಬುಧವಾರ ಶಾಸಕರು, ಎಸ್‌ಪಿ ಸೇರಿ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಶಾಂತಿ ಸಭೆ ನಡೆಯಿತು.
ಶಾಸಕ ರಾಘವೇಂದ್ರ ಹಿಟ್ನಾಳ, ಎಸ್‌ಪಿ ರೇಣುಕಾ ಸುಕುಮಾರ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಬಿ. ಕಲ್ಲೇಶ, ತಹಶೀಲ್ದಾರ್ ಜೆ.ಬಿ. ಮಜ್ಜಗಿ ಬುಧವಾರ ಗ್ರಾಮಕ್ಕೆ ತೆರಳಿ ಎರಡೂ ಗುಂಪುಗಳ ನಡುವೆ ಶಾಂತಿ ಸಂಧಾನ ಮಾಡುವ ಪ್ರಯತ್ನ ನಡೆಸಿದರು.
ಗ್ರಾಮದಲ್ಲಿ ನಮಗೆ ಚಹಾ ಅಂಗಡಿಯಲ್ಲಿ ಪ್ರತ್ಯೇಕವಾಗಿ ಕೂರಿಸಲಾಗುತ್ತೆ, ಉಪಾಹಾರ, ನೀರು, ಚಹಾವನ್ನು ಪ್ಲಾಸ್ಟಿಕ್ ಕಪ್‌ನಲ್ಲಿ ಕೊಡಲಾಗುತ್ತಿದೆ. ಕಟಿಂಗ್ ಶಾಪ್, ದೇವಸ್ಥಾನದಲ್ಲೂ ಪ್ರವೇಶವಿಲ್ಲ. ಸ್ವಾತಂತ್ರ್ಯ ದೊರೆತು 73 ವರ್ಷಗಳಾದ್ರೂ ನಮ್ಮ ಬಗ್ಗೆ ಕೀಳರಿಮೆಯಿದೆ ಎಂದು ಒಂದು ಗುಂಪಿನವರು ಈ ಸಂದರ್ಭದಲ್ಲಿ ಆಪಾದಿಸಿದರು.
ನಾವು ಯಾವುದೇ ತಕರಾರು ಮಾಡಿಲ್ಲ. ಬೇಕಿದ್ದರೆ ದೇವಸ್ಥಾನ, ಚಹದಂಗಡಿಗೆ ಈಗಲೇ ಬನ್ನಿ, ಕಟಿಂಗ್ ಶಾಪ್‌ಗೆ ತೆರಳಿ ನಾವೇನು ವಿರೋಧಿಸಿಲ್ಲ. ಸುಮ್ಮನೆ ಗೊಂದಲ ಸೃಷ್ಟಿಯಾಗುವುದು ಬೇಡ. ನಾವೆಲ್ಲರೂ ಒಟ್ಟಿಗೆ ಇರಲಿದ್ದೇವೆ ಎಂದು ಶಾಂತಿ ಸಭೆ ವೇಳೆ ಇನ್ನೊಂದು ಗುಂಪಿನವರು ಪ್ರಸ್ತಾಪಿಸಿದರು.ಕೊನೆಗೆ ಸೌಹಾರ್ದತೆಯಿಂದ ಎಲ್ಲರೂ ಕೂಡಿ ಹಬ್ಬ, ಜಾತ್ರೆ ಮಾಡಿ ಎಂದು ಅಧಿಕಾರಿ ವರ್ಗ ಸಲಹೆ ನೀಡಿತು.
ಗುಂಪು ಚದುರಿಸಿದ ಪೊಲೀಸರು: ಸಿಪಿಐ ರವಿ ಉಕ್ಕುಂದ ಸೇರಿದಂತೆ ಪಿಎಸ್‌ಐ ರಾಮಣ್ಣ ಲಮಾಣಿ ಸ್ಥಳದಲ್ಲೇ ಮೊಕ್ಕಾಂ ಹೂಡಿ ಶಾಂತಿ ಕಾಪಾಡುವ ಪ್ರಯತ್ನ ನಡೆಸಿದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಸಂದರ್ಭದಲ್ಲಿ ಪೊಲೀಸರು ಗುಂಪು ಚದುರಿಸುವ ಕೆಲಸ ಮಾಡಿದರು. ಶಾಂತಿ ಸಭೆಯಲ್ಲಿ ಗಲಾಟೆ ಮಾಡುವ ಯುವಕರು ಹಾಗೂ ವ್ಯಕ್ತಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.