ಕೊಪ್ಪಳ: ನಾಡಿನ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾಗಿರುವ ತಾಲೂಕಿನ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿಯ ದೇವಸ್ಥಾನದ ಹುಂಡಿಗೆ ಕೇವಲ 35 ದಿನಗಳಲ್ಲಿ ಬರೋಬ್ಬರಿ ಒಂದು ಕೋಟಿಗೂ ಅಧಿಕ ಹಣ ಸಂಗ್ರಹವಾಗಿ ಹೊಸ ದಾಖಲೆ ಬರೆದಿದೆ. ಇದಲ್ಲದೇ 350 ಗ್ರಾಂ ಬಂಗಾರ, 15 ಕೆಜಿ ಬೆಳ್ಳಿಯೂ ಸಂಗ್ರಹವಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಸವದತ್ತಿಯ ಯಲ್ಲಮ್ಮ ಹಾಗೂ ಕೊಪ್ಪಳ ತಾಲೂಕಿನ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ನಾಡಿನ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾಗಿವೆ. ರಾಜ್ಯ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿನ ಎ ದರ್ಜೆಯ ದೇವಸ್ಥಾನಗಳು ಎಂದೆನಿಸಿರುವ ಈ ದೇಗುಲಗಳು ಭಕ್ತರ ಆರಾಧ್ಯ ಕೇಂದ್ರಗಳಾಗಿವೆ. ಅದರಲ್ಲೂ ಕೊಪ್ಪಳ ತಾಲೂಕಿನ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ರಾಜ್ಯ ಸೇರಿ ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ತಮಿಳುನಾಡಿನಿಂದಲೂ ಅಪಾರ ಸಂಖ್ಯೆಯ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ.
ಹುಲಿಗೆಮ್ಮ ದೇವಸ್ಥಾನ ಮಂಗಳವಾರ, ಶುಕ್ರವಾರ, ಹುಣ್ಣಿಮೆ ಹಾಗೂ ಅಮಾವಾಸ್ಯೆ ದಿನಗಳಂದು ಅಪಾರ ಜನದಟ್ಟಣೆಯಿಂದ ಕೂಡಿರುತ್ತದೆ. ರಾತ್ರಿ, ಬೆಳಗಿನ ಜಾವವೇ ಇಲ್ಲಿ ದೇವಿ ದರ್ಶನ ಪಡೆಯಲು ಸರದಿ ಭಕ್ತರು ಸಾಲಿನಲ್ಲಿ ನಿಲ್ಲುತ್ತಾರೆ. ದೇವಸ್ಥಾನದ ಆಡಳಿತ ಮಂಡಳಿ ಸರ್ಕಾರದ ನಿಯಮಗಳ ಅನುಸಾರ ದೇವಿಯ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಕೈಗೊಳ್ಳುತ್ತದೆ. ಅದರಂತೆ ಕಳೆದ ಏ.21ರಿಂದ ಮೇ 24ರವರೆಗೂ 35 ದಿನಗಳ ಕಾಲ ದೇಣಿಗೆಯ ಸಂಗ್ರಹದ ಕಾಣಿಕ ಹುಂಡಿಯ ಹಣ ಎಣಿಕೆ ಮಾಡಿದಾಗ 1,02,52,900 ರೂ. ಹಣ ಸಂಗ್ರಹವಾಗಿದೆ.
ಇದಲ್ಲದೇ 350 ಗ್ರಾಂ ಕಚ್ಚಾ ಬಂಗಾರ ಹಾಗೂ 15 ಕೆಜಿ ಬೆಳ್ಳಿಯೂ ಸಂಗ್ರಹವಾಗಿದೆ. ಈ ಮೊದಲು 40ಕ್ಕೂ ಹೆಚ್ಚು ದಿನಗಳ ಅವಧಿಯಲ್ಲಿ 97 ಲಕ್ಷ ರೂ. ದೇಣಿಗೆ ಹಣ ಸಂಗ್ರಹವಾಗಿತ್ತು ಎನ್ನುವ ಮಾಹಿತಿ ದೇವಸ್ಥಾನದ ಆಡಳಿತ ಮಂಡಳಿಯಿಂದ ದೊರೆತಿದೆ. ಆದರೆ ಇದೇ ಮೊದಲ ಬಾರಿಗೆ ಕೇವಲ 35 ದಿನದ ಅವಧಿಯಲ್ಲಿಯೇ ಕೋಟಿಗೂ ಹೆಚ್ಚು ಹಣ
ಸಂಗ್ರಹವಾಗಿ ಹೊಸ ದಾಖಲೆ ಬರೆದಿದೆ. ಈ ದೇವಸ್ಥಾನಕ್ಕೆ ಜಾತ್ರೆ, ಶನಿವಾರ, ಭಾನುವಾರ ಸೇರಿದಂತೆ ಸರ್ಕಾರಿ ರಜಾ ದಿನಗಳಲ್ಲೂ ಸುತ್ತಲಿನ ಸಾವಿರಾರು ಹಳ್ಳಿಗಳ ಸದ್ಭಕ್ತರು ಆಗಮಿಸಿ ದೇವಿಗೆ ಉಡಿ ತುಂಬಿ ವಿಶೇಷ ಪೂಜೆ ಸಲ್ಲಿಸಿ ಕಾಣಿಕೆ ಅರ್ಪಿಸುವ ವಾಡಿಕೆಯೂ ಹಿಂದಿನಿಂದಲೂ ನಡೆದು ಕೊಂಡು ಬಂದಿದೆ.
ಆದಾಯಕ್ಕೆ ತಕ್ಕಂತೆ ಅಭಿವೃದ್ಧಿಯಾಗಲಿ: ಹುಲಿಗೆಮ್ಮ ದೇವಿ ದೇವಸ್ಥಾನ ಎ ದರ್ಜೆಯ ದೇವಸ್ಥಾನವಾಗಿದ್ದು, ಅಪಾರ ಸಂಖ್ಯೆಯ ಭಕ್ತಗಣ ಹೊಂದಿದೆ. ಜತೆಗೆ ಪ್ರತಿ ವರ್ಷವೂ ಕೋಟ್ಯಂತರ ರೂ. ಆದಾಯ ದೇವಸ್ಥಾನಕ್ಕೆ ಬರುತ್ತದೆ. ಇಷ್ಟೆಲ್ಲ ಆದಾಯ ದೇವಸ್ಥಾನಕ್ಕಿದ್ದರೂ ಇಲ್ಲಿನ ಒಂದು ರೂಪಾಯಿ ಖರ್ಚು ಮಾಡಬೇಕೆಂದರೂ ಸರ್ಕಾರದ ಅನುಮತಿ ಪಡೆಯಬೇಕು. ಅಭಿವೃದ್ಧಿಗೆ ಸರ್ಕಾರ ಹೆಚ್ಚು ಅನುದಾನ ಕೊಡುತ್ತಿಲ್ಲ ಎಂಬುದು ಭಕ್ತಗಣದ ಆರೋಪ. ಇಲ್ಲಿ ಬರುವ ಆದಾಯವನ್ನು ಇಲ್ಲಿಯೇ ವ್ಯಯಿಸಿ
ಅಭಿವೃದ್ಧಿ ಮಾಡಬೇಕೆಂಬುದು ಭಕ್ತರ ಒತ್ತಾಯವಾಗಿದೆ.
ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಕಾಣಿಕೆ ಹುಂಡಿಯ ಎಣಿಕೆ ಕಾರ್ಯವನ್ನು ಮೇ 24 ಹಾಗೂ 25ರಂದು ಕೈಗೊಳ್ಳಲಾಗಿತ್ತು. ಕೇವಲ 35 ದಿನದ ಅವಧಿಯಲ್ಲಿ ಅಂದರೆ ಏ.21ರಿಂದ ಮೇ 24ರವರೆಗೂ ದೇವಸ್ಥಾನದ ಹುಂಡಿಗೆ 1,02,52,900 ರೂ. ಹಣ ಸಂಗ್ರಹವಾಗಿದೆ. ಇದೇ ಮೊದಲ ಬಾರಿಗೆ ಕಡಿಮೆ ಅವಧಿಯಲ್ಲಿ ಇಷ್ಟೊಂದು ಹಣ ಸಂಗ್ರಹವಾಗಿದೆ.
ಅರವಿಂದ ಸುತುಗುಂಡಿ, ದೇವಸ್ಥಾನದ ಕಾರ್ಯ ನಿರ್ವಾಹಣಾಧಿಕಾರಿ.
ದತ್ತು ಕಮ್ಮಾರ