Advertisement

ಆಯುಷ್ಮಾನ್‌-ಆರೋಗ್ಯ ಕರ್ನಾಟಕಕ್ಕಿಲ್ಲ ಜಾಗೃತಿ

03:33 PM Dec 14, 2018 | Team Udayavani |

ಕೊಪ್ಪಳ: ಕೇಂದ್ರ ಹಾಗೂ ರಾಜ್ಯ ಸರ್ಕಾರವು ಜನರ ಆರೋಗ್ಯ ಕಾಪಾಡುವ ಉದ್ದೇಶದಿಂದ ಆರೋಗ್ಯ ಕರ್ನಾಟಕ, ಆಯುಷ್ಮಾನ್‌ ಭಾರತ ಯೋಜನೆ ಜಾರಿ ತಂದಿವೆ. ಈ ಎರಡೂ ಯೋಜನೆಗಳು ಒಂದರಲ್ಲೇ ವಿಲೀನವಾಗಿರುವುದಕ್ಕೆ ಜನರಿಗೆ ಗೊಂದಲ ಉಂಟಾಗಿದೆ. ಏಲ್ಲಿ ನೋಂದಣಿ ಮಾಡಿಸಬೇಕು? ಹೇಗೆ ನೋಂದಣಿ ಮಾಡಿಸಬೇಕು? ಏಲ್ಲಿ ಚಿಕಿತ್ಸೆ ಪಡೆಯಬೇಕು ಎನ್ನುವುದೇ ತಿಳಿಯುತ್ತಿಲ್ಲ. ಜಿಲ್ಲಾ ಆರೋಗ್ಯ ಇಲಾಖೆಯೇ ಇನ್ನೂ ಜಾಗೃತಿಗೆ ಮುಂದಾಗಿಲ್ಲ.

Advertisement

ಕೊಪ್ಪಳ ಜಿಲ್ಲೆ ಮೊದಲೇ ಹಿಂದುಳಿದ ಪ್ರದೇಶ. ಈ ಭಾಗದಲ್ಲಿ ಯಾವುದೇ ಪ್ರತಿಷ್ಠಿತ ಆಸ್ಪತ್ರೆಗಳು ಇಲ್ಲ. ಚಿಕಿತ್ಸೆ ಪಡೆಯಬೇಕೆಂದರೂ ಹುಬ್ಬಳ್ಳಿ, ಬೆಂಗಳೂರಿಗೆ ತೆರಳಬೇಕಾದ ಸ್ಥಿತಿ ಎದುರಾಗುತ್ತಿದೆ. ದೊಡ್ಡ ದೊಡ್ಡ ಆಸ್ಪತ್ರೆಗಳನ್ನು ಕಟ್ಟಡಲಾಗಿದೆಯೇ ವಿನಃ ವೈದ್ಯರ ಕೊರತೆ, ಚಿಕಿತ್ಸಾ ಸಾಮಗ್ರಿಗಳ ಕೊರತೆ ಅತೀವವಾಗಿದೆ. ಆಸ್ಪತ್ರೆಗಳೆಂದರೆ ಅಧ್ವಾನದ ಸ್ಥಿತಿಯಂತಿರುತ್ತವೆ ಎನ್ನುವ ಮಾತುಗಳು ಸಾಮಾನ್ಯವಾಗಿವೆ. ಇಂತಹ ಸಮಸ್ಯೆಗಳನ್ನೇ ಅರಿತು ಈ ಹಿಂದಿನ ಕಾಂಗ್ರೆಸ್‌ ಸರ್ಕಾರವು ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಅಂತ್ಯೋದಯ, ಬಿಪಿಎಲ್‌ ಕುಟುಂಬಕ್ಕೆ ಸಹಕಾರ ಇಲಾಖೆ ಮೂಲಕ ಯಶಸ್ವಿನಿ ಯೋಜನೆ ಜಾರಿಗೊಳಿಸಿತ್ತು. ಪ್ರತಿ ವರ್ಷವೂ ಸಹಕಾರಿ ಸಂಘದಲ್ಲಿ ಜನರು ಪ್ರತಿಯೊಬ್ಬರಂತೆ 300 ರೂ. ಕೊಟ್ಟು ನೋಂದಣಿ ಮಾಡಿಸಿ ರಸೀದಿ ಕಾಯ್ದುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. 1.50 ಲಕ್ಷ ದಷ್ಟು ಚಿಕತ್ಸಾ ಭದ್ರತೆ ಇದ್ದರೂ ಸಹಿತ ಶೇ. 40-50 ರಷ್ಟು ಮಾತ್ರ ಸರ್ಕಾರದಿಂದ ಪಾವತಿ ಮಾಡಲಾಗುತ್ತಿತ್ತು. ಉಳಿದ ಮೊತ್ತವನ್ನು ಚಿಕಿತ್ಸಾ ವೆಚ್ಚ ಭರಿಸಬೇಕಿತ್ತು.

ಜು.1ರಂದೇ ಆರೋಗ್ಯ ಕರ್ನಾಟಕ ಜಾರಿ: ಇದೆಲ್ಲವನ್ನು ಅರಿತ ಈಗಿನ ಸರ್ಕಾರ ಆರೋಗ್ಯ ಕರ್ನಾಟಕ ಯೋಜನೆಯನ್ನು ಜು. 1ರಿಂದಲೇ ಜಾರಿಗೊಳಿದೆ. ಆದರೆ ಸೆ. 30ಕ್ಕೆ ಮತ್ತೆ ಯೋಜನೆ ಬಂದ್‌ ಮಾಡಿದೆ. ಜನರಿಗೆ ಯೋಜನೆ ಹೆಸರು ಗೊತ್ತಿದೆಯೇ ವಿನಃ ಸೌಲಭ್ಯ ಹೇಗೆ ಪಡೆಯಬೇಕೆನ್ನುವ ಮಾಹಿತಿಯಿಲ್ಲ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವೂ ಆಯುಷ್ಮಾನ್‌ ಭಾರತ ಯೋಜನೆ ಜಾರಿಗೊಳಿಸಿದೆ. ಪ್ರತಿಯೊಂದು ಕುಟುಂಬಕ್ಕೂ 5 ಲಕ್ಷ ರೂ. ವರೆಗೂ ಚಿಕಿತ್ಸಾ ವೆಚ್ಚ ಭರಿಸುವ ಭದ್ರತೆ ಒದಗಿಸಿದೆ. ಇದನ್ನರಿತ ರಾಜ್ಯ ಸರ್ಕಾರ ಮತ್ತೆ ತನ್ನ ಆರೋಗ್ಯ ಕರ್ನಾಟಕ ಯೋಜನೆಯನ್ನು ‘ಆಯುಷ್ಮಾನ್‌ ಭಾರತ’ ಯೋಜನೆಯಡಿ ವಿಲೀನಗೊಳಿಸಿ ‘ಆಯುಷ್ಮಾನ್‌ -ಆರೋಗ್ಯ ಕರ್ನಾಟಕ’ ಎನ್ನುವ ಹೆಸರಿನ ಹೊಸ ಯೋಜನೆ ಯೋಜನೆ ಜಾರಿಗೊಳಿಸಿದ್ದು, ಈ ತನಕ 685 ಜನರು ಮಾತ್ರ ಜಿಲ್ಲೆಯಲ್ಲಿ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದಾರೆ. ಯಾರೊಬ್ಬರೂ ಇನ್ನೂ ಚಿಕಿತ್ಸಾ ವೆಚ್ಚದ ಸೌಲಭ್ಯ ಪಡೆದಿಲ್ಲ.

ಯೋಜನೆಗಳ ಬಗ್ಗೆ ಗೊಂದಲ:
ಕೊಪ್ಪಳ ಜಿಲ್ಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳಲ್ಲೇ ಗೊಂದಲವಾಗಿದೆ. ಆಯುಷ್ಮಾನ್‌ ಭಾರತ ಯೋಜನೆಯಲ್ಲಿ ಕುಟುಂಬಕ್ಕೆ 5 ಲಕ್ಷ ಚಿಕಿತ್ಸಾ ಸೌಲಭ್ಯದ ಭದ್ರತೆಯಿದೆ ಎಂದು ಖುಷಿಪಡುತ್ತಿದ್ದಾರೆ. ಆದರೆ ಯೋಜನಾ ವ್ಯಾಪ್ತಿಗೆ ಒಳಪಡಲು ಎಲ್ಲಿ ಮತ್ತು ಹೇಗೆ ನೋಂದಣಿ ಮಾಡಿಸಬೇಕು ಎನ್ನುವ ಸ್ಪಷ್ಟ ಮಾಹಿತಿಯಿಲ್ಲ. ದೊಡ್ಡ ಖಾಯಿಲೆಗಳಿಗೆ ತುರ್ತು ಚಿಕಿತ್ಸೆ ಪಡೆಯುವ ಅನಿವಾರ್ಯತೆ ಎದುರಾದಾಗ ಏನು ಮಾಡಬೇಕೆನ್ನುವ ಮಾಹಿತಿಯ ಕೊರತೆ ಜನರಲ್ಲಿದೆ. ಅಲ್ಲದೇ ಈ ಯೋಜನೆಯಲ್ಲಿ ಯಾವ ರೋಗಕ್ಕೆ ಚಿಕಿತ್ಸೆ ಲಭ್ಯವಿದೆ ಎನ್ನುವುದೂ ತಿಳಿದಿಲ್ಲ. ಆದರೆ ಯೋಜನೆ ಬಗ್ಗೆ ಇನ್ನೂ ನೋಡಲ್‌ ಅಧಿಕಾರಿಗಳೇ ತರಬೇತಿ ಪಡೆಯುತ್ತಿದ್ದಾರೆ.

ಆರೋಗ್ಯ ವಿಷಯದಲ್ಲೂ ರಾಜಕಾರಣ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಆರೋಗ್ಯ ಭದ್ರತೆಗೆ ಯೋಜನೆ ಜಾರಿಗೊಳಿಸಿವೆ. ಆದರೆ ಕೇಂದ್ರದ ಯೋಜನೆಯಲ್ಲೇ ರಾಜ್ಯ ಸರ್ಕಾರ ವಿಲೀನ ಮಾಡಿ ಹೆಸರು ಬದಲಾವಣೆ ಮಾಡಿಕೊಂಡಿದೆ. ಆರೋಗ್ಯದ ವಿಷಯದಲ್ಲೂ ರಾಜಕಾರಣ ಮಾಡಲು ಹೊರಟಿವೆ. ಹೀಗಾಗಿ ಯೋಜನೆ ಜಾರಿ ವಿಳಂಬವಾಗುತ್ತಿದೆ ಎನ್ನುತ್ತಿದ್ದಾರೆ ಪ್ರಜ್ಞಾವಂತರು. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಪಂ ಹಂತದಲ್ಲಿ ನೋಂದಣಿಗೆ ಅವಕಾಶ ದೊರೆತಲ್ಲಿ ಬಡವರಿಗೆ ತುಂಬ ಅನುಕೂಲವಾಗಲಿದೆ ಎನ್ನುವ ಒತ್ತಾಯ ಕೇಳಿ ಬಂದಿದೆ.

Advertisement

ರಾಜ್ಯ ಸರ್ಕಾರ ಮೊದಲು ಆರೋಗ್ಯ ಕರ್ನಾಟಕ ಯೋಜನೆ ಜಾರಿ ಮಾಡಿತ್ತು. ಕೇಂದ್ರ ಸರ್ಕಾರ ಆಯುಷ್ಮಾನ್‌ ಭಾರತ ಯೋಜನೆ ಜಾರಿಗೊಳಿಸಿದ್ದ ರಾಜ್ಯವು ಆಯುಷ್ಮಾನ್‌ ಯೋಜನೆಯಲ್ಲಿ ಮತ್ತೆ ಆರೋಗ್ಯ ಕರ್ನಾಟಕ ವಿಲೀನ ಮಾಡಿ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯು ಹೊಸದಾಗಿರುವುದರಿಂದ ಜನರಲ್ಲಿ ಇನ್ನೂ ಜಾಗೃತಿ ಮೂಡಿಸಬೇಕಿದೆ. ವಿವಿಧ ಹಂತಗಳಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ.
ಡಾ.ವಿರೂಪಾಕ್ಷರಡ್ಡಿ ಮಾದಿನೂರು,
ಡಿಎಚ್‌ಒ, ಕೊಪ್ಪಳ 

ದತ್ತು ಕಮ್ಮಾರ 

Advertisement

Udayavani is now on Telegram. Click here to join our channel and stay updated with the latest news.

Next