ಕಾರಟಗಿ: ತಾಲೂಕಿನ ಯರಡೋಣ ಗ್ರಾಮದಲ್ಲಿ ತ್ಯಾಜ್ಯಗಳ ಸಂಗ್ರಹಣೆಯಿಂದ ಗಿಡಗಂಟಿಗಳು ಬೆಳೆದು ಹಾಳಾಗಿದ್ದ ಪುರಾತನ ಕಲ್ಯಾಣಿಗೆ ಉದ್ಯೋಗ ಖಾತ್ರಿ ಯೋಜನೆಯಿಂದ ಕಾಯಕಲ್ಪ ದೊರೆತಿದ್ದು, ಗ್ರಾಮಸ್ಥರ ಕಣ್ಮನ ಸೆಳೆಯುತ್ತಿದೆ.
ಯರಡೋಣ ಗ್ರಾಮದಲ್ಲಿರುವ ಕಲ್ಯಾಣಿಗೆ ಐತಿಹ್ಯ ಇದೆ. ಈ ಕಲ್ಯಾಣಿ ಹೊರಭಾಗ ಹಾಗೂ ಪಕ್ಕದಲ್ಲಿರುವ ಬನ್ನಿ ಮಹಾಂಕಾಳಿ ದೇವಸ್ಥಾನದಲ್ಲಿ ನಿಜಾಮರ ಕಾಲದ ನಾಗ ದೇವರ ಮೂರ್ತಿಗಳಿದ್ದವು. ಗ್ರಾಮದ ರೈತರು ಭತ್ತ ನಾಟಿ ಮಾಡುವಾಗ, ರಾಶಿ ಮಾಡುವಾಗ ಈ ನೀರನ್ನು ಪೂಜೆ ಹಾಗೂ ಜಮೀನಿಗೆ ಸಿಂಪಡಿಸುತ್ತಿದ್ದರು. ಇದರಿಂದ ಉತ್ತಮ ಇಳುವರಿ ಬಂದು ಲಾಭವಾಗುತ್ತಿತ್ತು. ಕಾಯಿಲೆಯಿಂದ ಬಳಲುತ್ತಿದ್ದಾಗ ಕಲ್ಯಾಣಿ ನೀರು ಕುಡಿದರೆ ಗುಣಮುಖರಾಗುತ್ತಿದ್ದರು ಎಂಬ ಐತಿಹ್ಯವಿದೆ. ಪುರಾತನ ಕಲ್ಯಾಣಿ ಕಳೆದ 20 ವರ್ಷಗಳಿಂದ ತ್ಯಾಜ್ಯ, ಹೂಳು ತುಂಬಿಕೊಂಡು ತಿಪ್ಪೆಯಂತಾಗಿತ್ತು. ಹಳೆ ಬಾವಿಗೆ ತಡೆಗೋಡೆ ಇರಲಿಲ್ಲ. ಇದರಿಂದ ಓಣಿಯ ವೃದ್ಧರು, ಮಕ್ಕಳು ಭಯದಲ್ಲೇ ಓಡಾಡಬೇಕಿತ್ತು. ಗ್ರಾಮದ ಜನರಿಗೆ ಗಂಗಾಪೂಜೆಗೆ ಸ್ಥಳವೂ ಇರಲಿಲ್ಲ. ನಮ್ಮೂರ ಕಲ್ಯಾಣಿ ಹಾಳಾಯಿತು ಎಂದು ಹಿರಿಯರು ಕೊರಗುತ್ತಿದ್ದರು. ಆದರೆ ಈಗ ಕಲ್ಯಾಣಿ ಉದ್ಯೋಗ ಖಾತ್ರಿ ಯೋಜನೆಯಡಿ ಪುನಃಶ್ಚೇತನಗೊಂಡು ಗ್ರಾಮಸ್ಥರಲ್ಲಿ ಖುಷಿ ಮೂಡಿಸಿದೆ.
ಅನುದಾನ ಬಳಕೆ: ಉದ್ಯೋಗ ಖಾತ್ರಿ ಯೋಜನೆಯಡಿ ಪುರಾತನ ಕಲ್ಯಾಣಿಗೆ 5.85 ಲಕ್ಷ ರೂ. ಬಳಕೆ ಮಾಡಲಾಗಿದೆ. ಇದರಲ್ಲಿ ಕಲ್ಯಾಣಿ ಹೂಳು ತೆಗೆದ ಕೂಲಿಕಾರ್ಮಿಕರ ಖಾತೆಗೆ 1.47 ಲಕ್ಷ ರೂ. ಜಮಾ ಮಾಡಲಾಗಿದೆ. ಉಳಿದ 3.77 ಲಕ್ಷ ರೂ. ಅನುದಾನವನ್ನು ಸಾಮಗ್ರಿ ವೆಚ್ಚಕ್ಕೆ ಭರಿಸಲಾಗಿದೆ. ಪುರಾತನ ಕಲ್ಯಾಣಿ ಅಭಿವೃದ್ಧಿಗೊಂಡಿದ್ದರಿಂದ ಗ್ರಾಮದ ಜನ ಮತ್ತೇ ಬನ್ನಿ ಮಹಾಂಕಾಳಿ ದೇವರು, ನಾಗದೇವರ ಮೂರ್ತಿಗಳಿಗೆ ಪೂಜೆ ಮಾಡುತ್ತಿದ್ದಾರೆ. ಬಸಿ ನೀರನ್ನು ಮನೆಯ ಪೂಜೆಗೆ ಕೊಂಡೊಯ್ಯುತ್ತಿದ್ದಾರೆ. ರೈತರು ತಮ್ಮ ಗದ್ದೆ ನಾಟಿ ಹಾಗೂ ಶುಭ ಕಾರ್ಯಗಳಿಗೆ ಈ ಬಾವಿ ನೀರು ಒಯ್ಯುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಮಳೆ ನೀರು ಸಂಗ್ರಹಗೊಂಡು ಅಂತರ್ಜಲ ಹೆಚ್ಚಳಕ್ಕೂ ನೆರವಾಗಲಿದೆ. ಕಲ್ಯಾಣಿ ಅಭಿವೃದ್ಧಿಗೆ ಗ್ರಾಪಂ ಸದಸ್ಯರಾದ ಶರಣಬಸವ ಕೋಲ್ಕಾರ್ ಅವರು ವಿಶೇಷ ಆಸಕ್ತಿ ವಹಿಸಿದ್ದರು.
ಹೂಳು ತುಂಬಿಕೊಂಡು ತಿಪ್ಪೆಯಂತಾಗಿದ್ದ ಪುರಾತನ ಕಲ್ಯಾಣಿಯನ್ನು ಗ್ರಾಪಂ ಸದಸ್ಯರು, ಗ್ರಾಮಸ್ಥರ ಸಹಕಾರದಿಂದ ಅಭಿವೃದ್ಧಿ ಪಡಿಸಲಾಗಿದೆ. ಶ್ರದ್ಧಾ, ಭಕ್ತಿ ಸ್ಥಳವಾಗಿ ಮಾರ್ಪಟ್ಟಿದೆ. –
ಮಹೇಶಗೌಡ, ಯರಡೋಣ ಗ್ರಾಪಂ ಪಿಡಿಒ
ಕೊಪ್ಪಳ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಐಹಿತಿಹಾಸಿಕ ಕಲ್ಯಾಣಿಗಳನ್ನು ನರೇಗಾ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಅದರಂತೆ ಯರಡೋಣ ಗ್ರಾಮದ ಪುರಾತನ ಕಲ್ಯಾಣಿ ಅಭಿವೃದ್ಧಿ ಪಡಿಸಲಾಗಿದೆ. –
ಬಿ. ಫೌಜಿಯಾ ತರನ್ನುಮ್, ಜಿಪಂ ಸಿಇಒ
ಯರಡೋಣ ಗ್ರಾಮದಲ್ಲಿ ಹಾಳಾಗಿದ್ದ ಕಲ್ಯಾಣಿಯನ್ನು ನರೇಗಾ ಯೋಜನೆ ಅನುದಾನ ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಪಡಿಸಲಾಗಿದೆ. ಮಳೆಗಾಲದಲ್ಲಿ ಕಲ್ಯಾಣಿಯಲ್ಲಿ ನೀರು ಸಂಗ್ರಹಗೊಂಡು ಅಂತರ್ಜಲ ವೃದ್ಧಿಗೆ ಸಹಕಾರಿ ಆಗಲಿದೆ. –
ಡಾ| ಡಿ. ಮೋಹನ್, ತಾಪಂ ಇಒ
-ದಿಗಂಬರ ಎನ್. ಕುರ್ಡೆಕರ