ಕೊಪ್ಪಳ: ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿರುವ ಆರ್ಚ್ ಮಲ್ಟಿ ಚೆಕ್‌ಡ್ಯಾಂಗಳಲ್ಲಿ ಹಲವಾರು ಕಳಪೆಯಾಗಿವೆ ಎನ್ನುವ ಕೂಗು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಇಲಾಖೆ ಆಯುಕ್ತರು 26 ಜಿಲ್ಲೆಗಳಲ್ಲಿ ನಿರ್ಮಾಣ ಗೊಂಡಿರುವ 3,783 ಚೆಕ್‌ಡ್ಯಾಂಗಳ ನೈಜತೆ ಪರಿಶೀಲನೆ ನಡೆಸಿ ವಾಸ್ತವ ವರದಿ ನೀಡುವಂತೆ ಸೂಚಿಸಿದ್ದು, ವಿಶೇಷ ತನಿಖಾ ತಂಡ ಪರಿಶೀಲನೆ ನಡೆಸುತ್ತಿದೆ.
Advertisement
ನರೇಗಾದಡಿ ನಿರ್ಮಾಣಗೊಂಡ ಪ್ರತಿಯೊಂದು ಚೆಕ್ ಡ್ಯಾಂಗೂ 10 ಲಕ್ಷಕ್ಕೂ ಹೆಚ್ಚು ಹಣ ವೆಚ್ಚವಾಗಿದೆ. ಅಂದರೆ 3783 ಚೆಕ್‌ಡ್ಯಾಂಗಳಿಗೆ ಕೋಟ್ಯಂತರ ರೂ.ವ್ಯಯ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ರೈತರ ಹಿತ ಕಾಯಬೇಕೆನ್ನುವ ಕೂಗುಗಳು ಕೇಳಿದ್ದರಿಂದ ತನಿಖೆಯ ಕಾರ್ಯವೂ ಭರದಿಂದ ಸಾಗಿದೆ. ಚೆಕ್ ಡ್ಯಾಂಗಳನ್ನು ಬೇಕಾಬಿಟ್ಟಿಯಾಗಿ, ಕಡಿಮೆ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎನ್ನುವ ಆಪಾದನೆಗಳು ಇವೆ. ಈ ಯೋಜನೆ ರೈತರಿಗೆ ಅನುಕೂಲವಾಗಿದ್ದರೂ ಕೆಲಸ ಮಾಡಿದ ಗುತ್ತಿಗೆದಾರರು, ಅಧಿ ಕಾರಿಗಳ ಆಟದಿಂದ ಚೆಕ್ ಡ್ಯಾಂಗಳು ಅರ್ಥವನ್ನೇ ಕಳೆದುಕೊಂಡಿವೆ. ಇದಕ್ಕೆ ಸಾಕ್ಷಿ ಎಂಬಂತೆ ಕೊಪ್ಪಳ ಜಿಲ್ಲೆಯಲ್ಲಿ ನಿರ್ಮಾಣಗೊಂಡ ಚೆಕ್‌ಡ್ಯಾಂಗಳ ಬಗ್ಗೆಯೂ ಪರಿಶೀಲನೆಗೆ ರೈತರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.