ಕೊಪ್ಪಳ: ತಾಲೂಕಿನ ಬಹುನಿರೀಕ್ಷಿತ ರಾಜೀವಗಾಂಧಿ ಸಬ್ ಮಿಷನ್ ಯೋಜನೆಯಡಿ 2008-09ರಲ್ಲಿ ರೂಪಿಸಿದ್ದ 84 ಹಳ್ಳಿಗಳ ಬಹುಗ್ರಾಮ ಕುಡಿವ ನೀರಿನ ಯೋಜನೆಗೆ ಇಲ್ಲಿವರೆಗೂ ಬರೊಬ್ಬರಿ 58 ಕೋಟಿ ರೂ. ಖರ್ಚು ಮಾಡಲಾಗಿದೆ. ಆದರೆ ತಾಲೂಕಿನ ಜನರಿಗೆ ಹನಿ ನೀರು ಕೂಡ ಸಿಗದೇ ಇರುವುದು ದುರಂತ ಎಂದರೂ ತಪ್ಪಾಗಲಾರದು.
Advertisement
ತುಂಗಭದ್ರಾ ಜಲಾಶಯ ಪಕ್ಕದಲ್ಲೇ ಇದ್ದರೂ ತಾಲೂಕಿನ ನೂರಾರು ಹಳ್ಳಿಗಳು ಇಂದಿಗೂ ಕುಡಿಯುವ ನೀರಿಗಾಗಿ ಬಿಕ್ಕುವ ಪರಿಸ್ಥಿತಿಯಿದೆ. ಮಳೆಗಾಲದಲ್ಲಿಯೇ ನೀರಿಗೆ ಎಲ್ಲೆಡೆ ತೊಂದರೆ ಎದುರಿಸುವಂತ ಪರಿಸ್ಥಿತಿ ಇದೆ. ಅಧಿಕಾರಿಗಳ ವೈಜ್ಞಾನಿಕ ಕಾರ್ಯ ವೈಖರಿ, ಗುತ್ತಿಗೆದಾರರ ಲಾಭದ ಲೆಕ್ಕಾಚಾರ, ಸರ್ಕಾರದ ನಿಧಾನಗತಿ ಕೆಲಸಗಳಿಗೆ ಜನರು ಮಾತ್ರ ನೂರೆಂಟು ನರಳಾಟ ಅನುಭವಿಸುವುದು ಇಂದಿಗೂ ತಪ್ಪುತ್ತಿಲ್ಲ.
Related Articles
Advertisement
ಯೋಜನೆ ನನೆಗುದಿಗೆ: ಮೊದಲ ಹಾಗೂ ಎರಡನೇ ಹಂತದ ಯೋಜನೆ ಸೇರಿ 84 ಹಳ್ಳಿಗಳಿಗೆ 64 ಕೋಟಿ ರೂ. ವೆಚ್ಚದ ಯೋಜನೆಯಡಿ ಕುಡಿವ ನೀರಿನ ಯೋಜನೆ ಆರಂಭವಾಗಿದೆ. ಆದರೆ ಕಾಮಗಾರಿ ಆರಂಭ ಮಾಡಿ ಬರೊಬ್ಬರಿ 8-9 ವರ್ಷಗತಿಸಿದರೂ ಪೂರ್ಣಗೊಂಡಿಲ್ಲ. ಇಲ್ಲಿ ಅನುದಾನ ನೀರಿನಂತೆ ವ್ಯಯವಾಗಿದೆಯೇ ವಿನಃ ಜನರ ದಾಹ ನೀಗಿಸಲು ಸಾಧ್ಯವಾಗಿಲ್ಲ.
ಯೋಜನೆಗೆ ಏನಾಗಿದೆ ಸಮಸ್ಯೆ?: ಈ ಯೋಜನೆಯಡಿ ತುಂಗಭದ್ರಾ ಡ್ಯಾಂನಿಂದ ನೀರನ್ನು ಕಾಸನಕಂಡಿ ಸಮೀಪ ಗುಡ್ಡದ ಮಾರ್ಗವಾಗಿ 84 ಹಳ್ಳಿಗಳಿಗೆ ನೀರು ಪೂರೈಕೆಗೆ ನೀಲನಕ್ಷೆ ಸಿದ್ದಪಡಿಸಿದೆ. ಆದರೆ ಮುಖ್ಯ ಸಂಪ್‌ನಿಂದ ನೀರು ಪೂರೈಕೆ ಮಾಡಿದಾಕ್ಷಣ ಎಲ್ಲೆಂದರಲ್ಲಿ ಪೈಪ್‌ಗ್ಳು ಒಡೆಯುತ್ತಿದ್ದು ಹಳ್ಳಿಗಳಿಗೆ ನೀರು ಪೂರೈಕೆಯಾಗುತ್ತಿಲ್ಲ. ಇದು ಡಿಸೈನ್ ಫೇಲ್ ಆಗಿದೆ. ನೀಲನಕ್ಷೆ ಮಾಡುವಲ್ಲಿ ಅಧಿಕಾರಿಗಳು, ಕಂಪನಿ ಎಡವಿದೆ ಎಂದು ಸ್ವತಃ ತಾಂತ್ರಿಕ ವರದಿಯೇ ಹೇಳುತ್ತಿದೆ. ಇದಕ್ಕೆ ಹಲವು ಬಾರಿ ಸಭೆಗಳು ನಡೆದರೂ ಯೋಜನೆ ಇನ್ನೂ ತಾರ್ತಿಕ ಅಂತ್ಯ ಕಂಡಿಲ್ಲ.
ಹೊಸ ಡಿಸೈನ್‌ಗೆ ವರದಿ: ಮುಖ್ಯ ಸಂಪ್ ಬಳಿಯೇ ಪೈಪ್‌ಗ್ಳು ನೀರಿನ ರಭಸಕ್ಕೆ ಒಡೆಯುತ್ತಿದ್ದು, ಅಲ್ಲಿನ ಡಿಸೈನ್ ಬದಲಾವಣೆ ಮಾಡುವ ಕುರಿತಂತೆ ಸ್ವತಃ ಬೆಂಗಳೂರಿನ ಇಂಜನಿಯಿರ್ ತಂಡವೇ ಬಂದು ತಪಾಸಣೆ ನಡೆಸಿ ವರದಿ ಮಾಡಿಕೊಂಡು ತೆರಳಿದೆ. ಇಲ್ಲಿನ ಅಧಿಕಾರಿಗಳು ಹೊಸ ಮೂರು ಡಿಸೈನ್ ಕಳಿಸಿದ್ದಾರೆ. ಆದರೆ ರಾಜ್ಯಮಟ್ಟದಲ್ಲಿ ಈ ತೊಂದರೆ ಇನ್ನು ಇತ್ಯರ್ಥವಾಗಿಲ್ಲ. ಈ ಯೋಜನೆಗೆ ಮತ್ತೆ 20 ಕೋಟಿ ರೂ. ಬೇಕು ಎಂದೇಳಲಾಗುತ್ತಿದೆ.
ಸರ್ಕಾರದ ಹಣವನ್ನು ಅಧಿಕಾರಿಗಳು, ಗುತ್ತಿಗೆದಾರರು ಸೇರಿಕೊಂಡು ಮಣ್ಣಲ್ಲಿ ಇಟ್ಟಂತಾಗಿದೆ. ಜನರಿಗೆ ನೀರು ಪೂರೈಸುವ ಕೆಲಸವಂತೂ ನಡೆದಿಲ್ಲ. ಈ ಯೋಜನೆ ವಿಫಲಕ್ಕೆ ಯಾರು ಹೊಣೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಯೋಜನೆಗೆ ಹಣ ಖರ್ಚಾಯಿತೇ ವಿನಃ 8 ವರ್ಷದಿಂದ ಹನಿ ನೀರು ಹರಿದಿಲ್ಲ. ಇದೊಂದು ತಾಲೂಕಿನ ಜನರ ದುರ್ದೈವ.
ಸಚಿವರೇ ಇದನ್ನೊಮ್ಮೆ ಗಮನಿಸಿ8-9 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಈ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು ಸ್ವಲ್ಪ ಗಮನಿಸಬೇಕಿದೆ. ಅನುದಾನ ಹೊಳೆಯಂತೆ ಹರಿದರೂ ಹನಿ ನೀರು ಹರದಿಲ್ಲ. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಈ ಯೋಜನೆಗೆ ಮತ್ತೆ ಜೀವ ಕೊಡಬೇಕು. ಇಲ್ಲವೇ ತಪ್ಪಿತಸ್ಥ ಅಧಿಕಾರಿಗಳು, ಗುತ್ತಿಗೆ ಪಡೆದ ಕಂಪನಿ ಮೇಲೆ ಕ್ರಮಕೈಗೊಳ್ಳಬೇಕು. ಇಲ್ಲವೇ ಹಣ ವಸೂಲಿ ಮಾಡಿ ಜನರ ತೆರಿಗೆ ಹಣಕ್ಕೆ ಕಾವಲಾಗಬೇಕಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕಿದೆ.