Advertisement

ದಂಡ ಕಟ್ಟಲೊಲ್ಲದ ಗಣಿ ಧಣಿಗಳು

06:11 PM Dec 08, 2019 | Naveen |

„ದತ್ತು ಕಮ್ಮಾರ
ಕೊಪ್ಪಳ:
ಜಿಲ್ಲೆಯ ಸರ್ಕಾರದ ಗಾಯರಾಣ ಜಮೀನಿನಲ್ಲಿ ನಿಯಮ ಮೀರಿ ಗಣಿ ಉದ್ಯಮ ನಡೆಸಿದ್ದ 8 ಗಣಿ ಉದ್ಯಮಿಗಳಿಗೆ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಅವರು ವಿಧಿ ಸಿದ್ದ 28 ಕೋಟಿ ರೂ. ದಂಡ ಕಟ್ಟಲು ಈ ವರೆಗೂ ಮನಸ್ಸು ಮಾಡುತ್ತಿಲ್ಲ.

Advertisement

ನೋಟಿಸ್‌ ನೀಡಿ ಆರು ತಿಂಗಳು ಕಳೆದರೂ ಉದ್ಯಮಿಗಳು ಇನ್ನೂ ಲೆಕ್ಕಾಚಾರ ಹಾಕುತ್ತಿದ್ದಾರೆ. ಹೌದು. ಜಿಲ್ಲೆಯಲ್ಲಿ ಗಣಿ ಉದ್ಯಮ ಜೋರಾಗಿಯೇ ನಡೆದಿವೆ. ಸರ್ಕಾರದ ಗಾಯರಾಣ ಜಮೀನಿನಲ್ಲಿ ನಿಗ ದಿತ ವರ್ಷಕ್ಕೆ ಎಂದು ಈ ಹಿಂದೆ ಹಲವರಿಗೆ ಗಣಿ ಉದ್ಯಮ ನಡೆಸಲು ಪರವಾನಗಿ ನೀಡಿದೆಯಲ್ಲದೇ, ಜಮೀನು ಗುರುತು ಮಾಡಿ ಕೊಟ್ಟಿದೆ. ಇದಲ್ಲದೇ, ಪ್ರತಿ ವರ್ಷ ಇಂತಿಷ್ಟು ಪ್ರಮಾಣದಲ್ಲಿ ಮಾತ್ರ ಕಲ್ಲು ಗಣಿಗಾರಿಕೆ ನಡೆಸಬೇಕು ಎನ್ನುವ ಷರತ್ತು ಹಾಕಿ ಕೊಟ್ಟಿದ್ದರೂ ಉದ್ಯಮಿಗಳು ತಮ್ಮ ಲಾಭಕ್ಕಾಗಿ ಅತ್ಯಧಿಕ ಪ್ರಮಾಣದಲ್ಲಿ ಗಣಿಗಾರಿಕೆಯನ್ನು ನಡೆಸಿ ಆದಾಯ ಪಡೆದುಕೊಂಡಿದ್ದಾರೆ.

ಆದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಉದ್ಯಮ ನಡೆಸಿದ ಬಗ್ಗೆ ಡ್ರೋನ್‌ ಕ್ಯಾಮೆರಾ ಮೂಲಕ ಸರ್ವೇ ನಡೆಸಿದ ವೇಳೆ ನಿಗಧಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಗಣಿ ಉದ್ಯಮ ನಡೆಸಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಆರು ತಿಂಗಳ ಹಿಂದೆಯೇ ಜಿಲ್ಲಾಧಿಕಾರಿ ನೇತೃತ್ವದ ಟಾಸ್ಕ್ ಫೋರ್ಸ್‌ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಿ, ನಿಯಮ ಮೀರಿ ಹೆಚ್ಚುವರಿ ಉದ್ಯಮ ನಡೆಸಿರುವ ಎಂಟು ಗಣಿ ಮಾಲೀಕರಿಗೆ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಅವರು 28 ಕೋಟಿ ರೂ. ದಂಡ ವಿಧಿಸಿದ್ದು, ಸಕಾಲಕ್ಕೆ ದಂಡ ಪಾವತಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು.

ದಂಡ ಹಾಕಿ 6 ತಿಂಗಳಾತು: ಗಂಗಾವತಿ ತಾಲೂಕಿನ ವೆಂಕಟಗಿರಿಯ ಕೆ. ಶೇಷರಾವ್‌ ಅವರಿಗೆ 1,63,20,900 ರೂ., ಕೆ. ಶೇಷರಾವ್‌ ಅವರಿಗೆ ಮತ್ತೂಂದರಲ್ಲಿ 4,52,57,100 ರೂ., ಬಿ.ಶ್ರೀನಿವಾಸ ಅವರಿಗೆ 4,94,31,600 ರೂ., ಟಿ.ಎನ್‌. ಎಸ್‌ವಿ ಪ್ರಸಾದ ಅವರಿಗೆ 3,66,04,500 ರೂ., ಬಿ. ರಾಜಶೇಖರ 6,76,42,800 ರೂ., ಅರವಿಂದ ಎಸ್‌. ಪಾಟೀಲ್‌ ಅವರಿಗೆ 79,84,800 ರೂ., ಪಿ. ಸುಧಾರಾಣಿ ಅವರಿಗೆ 3,52,67,100 ಹಾಗೂ ಕಮಲಕುಮಾರ ಅವರಿಗೆ 2,24,82,600 ಕೋಟಿ ಸೇರಿದಂತೆ ಒಟ್ಟಾರೆ 28,09,91,400 ಕೋಟಿ ರೂ. ದಂಡ ವಿಧಿಸಿದ್ದಾರೆ.

ಅಕ್ರಮ ಸಾಗಾಟ: ಸರ್ಕಾರವು ವರ್ಷಕ್ಕೆ ಇಂತಿಷ್ಟು ಮೆಟ್ರಿಕ್‌ ಟನ್‌ ಉದ್ಯಮ ನಡೆಸಬೇಕೆಂದು ನಿಯಮ ಹಾಕಿ ಪರವಾನಗಿ ನೀಡಿದ್ದರೆ, ಉದ್ಯಮಿಗಳು ನಿಯಮ ಮೀರಿ ಅಕ್ರಮವಾಗಿ ಸಾಗಾಟ ಮಾಡಿರುವುದನ್ನು ಇಲಾಖೆ ವರದಿ ಹೇಳುತ್ತಿದೆ.

Advertisement

ಕೆ. ಶೇಷರಾವ್‌ 54,403 ಮೆಟ್ರಿಕ್‌ ಟನ್‌, ಕೆ. ಶೇಷರಾವ್‌ 1,50,857 ಮೆ.ಟ., ಬಿ. ಶ್ರೀನಿವಾಸ 1,64,772 ಮೆ.ಟ., ಪ್ರಸಾದ್‌ 1,22,015 ಮೆ.ಟ., ಬಿ. ರಾಜಶೇಖರ 2,25,476 ಮೆ.ಟ., ಅರವಿಂದ ಪಾಟೀಲ್‌ 26,616 ಮೆ.ಟ., ಪಿ. ಸುಧಾರಾಣಿ 1,17,557 ಹಾಗೂ ಕಮಲಕುಮಾರ 74942 ಮೆಟ್ರಿಕ್‌ ಟನ್‌ ಸೇರಿ ಒಟ್ಟಾರೆ 9,36,638 ಮೆಟ್ರಿಕ್‌ ಟನ್‌ನಷ್ಟು ಅಕ್ರಮ ಗಣಿಗಾರಿಕೆ ನಡೆಸಿದ್ದಾರೆ ಎಂದು ಇಲಾಖೆ ಲೆಕ್ಕಾಚಾರ ಮಾಡಿದ್ದು, ಈ ಆಧಾರದಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅವರು ಒಂದರ ಐದು ಪಟ್ಟು ರಾಜಸ್ವ ದಂಡ ಪಾವತಿಗೆ ಆದೇಶ ಮಾಡಿದ್ದಾರೆ.

ಉದ್ಯಮಿದಾರರು ಅನಿವಾರ್ಯವಾಗಿ ದಂಡ ಪಾವತಿ ಮಾಡಲೇ ಬೇಕಿದೆ. ಕೆಲವೇ ಕೆಲವರು ಮಾತ್ರ ದಂಡ ಪಾವತಿಗೆ ಮನಸ್ಸು ಮಾಡಿದ್ದಾರೆ. ಇನ್ನುಳಿದವರು ಇದರ ಬಗ್ಗೆ ಯಾವುದೇ ಮಾತನ್ನಾಡಿಲ್ಲ ಎಂದು ಇಲಾಖೆ ಅಧಿಕಾರಿಗಳೇ ಹೇಳುತ್ತಿದ್ದಾರೆ.

ಶೇ. 25ರಷ್ಟು ದಂಡ ಪಾವತಿಗೆ ಸೂಚಿಸಿತ್ತು: ಇನ್ನೂ ಸರ್ಕಾರ ದಂಡದ ಮೊತ್ತ ಒಂದೇ ಬಾರಿ ಪಾವತಿಗೆ ಹೊರೆಯಾಗುವುದನ್ನು ನೋಡಿ ಉದ್ಯಮಿದಾರರಿಗೆ ದಂಡದ ಪ್ರಮಾಣದಲ್ಲಿ ಮೊದಲ ಹಂತದಲ್ಲಿ ಶೇ. 25ರಷ್ಟು ಮಾಡಿದರೆ ಪರವಾನಗಿ ನವೀಕರಣ ಮಾಡಿ ಬಳಿಕ ಉದ್ಯಮ ನಡೆಸಲು ಸರ್ಕಾರ ಅವಕಾಶ ನೀಡಿತ್ತು. ಅದಕ್ಕೂ ಸಹಿತ ಇವರು ಮುಂದೆ ಬಂದಿಲ್ಲ. ಹೀಗಾಗಿ ಇವರು ದಂಡ ಪಾವತಿ ಮಾಡೋದೇ ಅನುಮಾನ ಎನ್ನುವ ಮಾತು ಕೇಳಿ ಬಂದಿದೆ.

ಒನ್‌ ಟೈಂ ಸೆಟ್ಲಿಮೆಂಟ್‌ಗೆ ಒತ್ತು: ಇನ್ನೂ ಸರ್ಕಾರದ ಮಟ್ಟದಲ್ಲಿ ಒತ್ತಡ ಹಾಕಿರುವ ಕೆಲವರು ದಂಡದ ಬದಲಿಗೆ ಒನ್‌ಟೈಂ ಸೆಟ್ಲಮೆಂಟ್‌ ಮಾಡಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ಅಂದರೆ ಒಂದರ ಐದು ಪಟ್ಟು ದಂಡದ ಬದಲಿಗೆ ಈಗ ಅಕ್ರಮ ಗಣಿಗಾರಿಕೆ ನಡೆಸಿರುವ ಮೆಟ್ರಿಕ್‌ ಟನ್‌ ಆಧಾರದಲ್ಲಿ ಅದರ ಮೌಲ್ಯಕ್ಕೆ ಅನುಸಾರ ರಾಯಲ್ಟಿ ಕಟ್ಟಿಕೊಂಡು ತಮ್ಮ ಗುತ್ತಿಗೆ ಪರವಾನಗಿಯನ್ನು ನವೀಕರಣ ಮಾಡಿಕೊಳ್ಳುವ ಪ್ರಯತ್ನವನ್ನು ನಡೆಸಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಈ ರೀತಿ ಏನಾದರೂ ಸರ್ಕಾರ ನಿರ್ಧಾರ ಮಾಡಿದರೆ ಜಿಲ್ಲಾಧಿಕಾರಿ ಮಾಡಿದ ಆದೇಶ ಹಾಗೂ ಸರ್ಕಾರವೇ ರೂಪಿಸಿದ ಕಾನೂನಿಗೆ ಬೆಲೆಯೇ ಇಲ್ಲದಂತಾಗುತ್ತದೆ ಎನ್ನುವುದು ಸಾರ್ವಜನಿಕರ ಮಾತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next