Advertisement

ಜಿಲ್ಲೆಯಲ್ಲಿ ಲಾಕ್‌ಡೌನ್‌ಗೆ ನಿರ್ಲಕ್ಷ್ಯ

03:44 PM Apr 15, 2020 | Naveen |

ಕೊಪ್ಪಳ: ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಹಗಲು-ರಾತ್ರಿ ಎನ್ನದೇ ಶ್ರಮಿಸುತ್ತಿದೆ. ಜಿಲ್ಲೆಯು ಅಪಾಯದ ಸ್ಥಿತಿಯಲ್ಲಿದ್ದರೂ ಜನತೆಗೆ ಇದರ ಪರಿಜ್ಞಾನವೇ ಇಲ್ಲ. ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ಎಲ್ಲೆಂದರಲ್ಲಿ ಸುತ್ತಾಟ ನಡೆಸುತ್ತಿದೆ. ಪೊಲೀಸ್‌ ಇಲಾಖೆ, ಅಧಿಕಾರಿಗಳು ಏನೇ ಮಾಡಿದರೂ ಜನರು ನಿರ್ಲಕ್ಷ್ಯ  ಭಾವನೆ ತಾಳುತ್ತಿರುವುದು ಬೇಸರಕ್ಕೂ ಕಾರಣವಾಗಿದೆ.

Advertisement

ಕೋವಿಡ್ ವೈರಸ್‌ ಸಾಂಕ್ರಾಮಿಕ ರೋಗ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಘೋಷಿಸಿದೆ. ಇಡೀ ಜಗತ್ತನೇ ಈ ಮಹಾಮಾರಿ ವೈರಸ್‌ ಬೆಚ್ಚಿ ಬೀಳಿಸುತ್ತಿದೆ. ದೇಶ ಹಾಗೂ ರಾಜ್ಯದಲ್ಲಿ ಹಲವು ರೀತಿಯ ಕ್ರಮಗಳು ಜಾರಿಯಾಗುತ್ತಲೇ ಇವೆ. ಲಾಕ್‌ಡೌನ್‌ ಘೋಷಣೆಯಾಗಿ ಬರೊಬ್ಬರಿ 21 ದಿನಗಳಾಗಿವೆ. ಆರಂಭಿಕ ದಿನದಲ್ಲಿ ಜಿಲ್ಲೆಯ ಜನತೆ ಲಾಕ್‌ಡೌನ್‌ಗೆ ಸ್ಪಂದಿಸಿದ್ದರು. ಮನೆಯಿಂದ ಯಾರೂ ಹೊರಗೆ ಬರಲಿಲ್ಲ. ಪೊಲೀಸರಿಗೂ ಬೇಸರ: ಇತ್ತ ಪೊಲೀಸರು ಬೆತ್ತ ಬೀಸುತ್ತಿದ್ದಂತೆ ಹಲವರು ಮನೆ ಸೇರಿದ್ದರು. ಆದರೆ ಕೆಲ ದಿನಗಳ ಬಳಿಕ ಪೊಲೀಸರ ಲಾಠಿ ಏಟು ಕಡಿಮೆಯಾಗುತ್ತಿದ್ದಂತೆ ಜನರು ರಸ್ತೆಗಳಿಯಲಾರಂಭಿಸಿದ್ದಾರೆ. ಕಿರಾಣಿ, ತರಕಾರಿ, ಮೆಕ್ಯಾನಿಕ್‌ ಅಂಗಡಿ, ಕೃಷಿ ಸಂಬಂಧಿತ ಕೆಲವು ಚಟುವಟಿಕೆಗಳಿಗೆ ಲಾಕ್‌ಡೌನ್‌ನಿಂದ ವಿನಾಯತಿ ನೀಡಿದೆ. ಇದನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿರುವ ಜಿಲ್ಲೆಯ ಜನರು ಬೈಕ್‌ಗಳಲ್ಲಿ ನಗರ ಪ್ರದಕ್ಷಿಣೆ ಹಾಕುತ್ತಿದ್ದಾರೆ. ಇದು ಜಿಲ್ಲಾಡಳಿತ ಹಾಗೂ ಪೊಲೀಸರಿಗೆ ಬೇಸರ ತರಿಸಿದೆ.

ಅಲ್ಲಲ್ಲಿ ಹರಟೆ: ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಮಾಡಿರದಂತಹ ಹಲವು ಸೌಲಭ್ಯಗಳನ್ನು ಜಿಲ್ಲಾಡಳಿತ ಅಚ್ಚುಕಟ್ಟಾಗಿ ಮಾಡಿದೆ. ನಗರದಲ್ಲಿ ಮನೆ ಮನೆಗೆ ತರಕಾರಿ ವಾಹನ ಬರುತ್ತಿವೆ. ಪ್ರತಿದಿನವೂ ಬೆಳಗಿನ ಅವಧಿಗೆ ಕಿರಾಣಿ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ರೈತರಿಗೆ ತೊಂದರೆಯಾಗದಿರಲಿ ಎಂದು ಮೆಕ್ಯಾನಿಕ್‌ ಅಂಗಡಿ ಆರಂಭಕ್ಕೆ ಅನುಮತಿ ನೀಡಿದೆ. ಇನ್ನೂ ಕೃಷಿಕರಿಗೆ ಔಷ ಧ ಸೇರಿ ಇತರೆ ಕಾರ್ಯಕ್ಕೆ ತೊಂದರೆ ಆಗದಿರಲೆಂದು ಅಂಗಡಿಗಳಿಗೂ ಪಾಸ್‌ ನೀಡಿ ಆರಂಭಕ್ಕೆ ಸಮ್ಮತಿಸಿದೆ. ಇಷ್ಟೆಲ್ಲ ಅಗತ್ಯ ಕ್ರಮ ಕೈಗೊಂಡಿದ್ದರೂ ಮನೆಯಲ್ಲಿ ಇರಲು ಹಿಂದೇಟು ಹಾಕುತ್ತಿದ್ದಾರೆ. ಎಲ್ಲೆಡೆ ಅಂಗಡಿ-ಮುಂಗಟ್ಟು ಬಂದ್‌ ಇದ್ದರೂ ಕುಳಿತು ಹರಟೆ ಹೊಡೆಯುತ್ತಿದ್ದಾರೆ.

ಗಡಿ ಜಿಲ್ಲೆಗಳಲ್ಲಿ ಸೋಂಕಿದೆ: ಕೆಲವರಂತೂ ಜಿಲ್ಲೆಯಲ್ಲಿ ಈ ವರೆಗೂ ಕೊರೊನಾ ಸೋಂಕಿಲ್ಲ ಎಂದು ನಿರ್ಭಯವಾಗಿಯೇ ಹೊರಗಡೆ ಸುತ್ತಾಡುತ್ತಿದ್ದಾರೆ. ಕೊಪ್ಪಳದಲ್ಲಿ ಕೊರೊನಾ ಇಲ್ಲದೇ ಇದ್ದರೂ ಸಂಕಷ್ಟದ ಸ್ಥಿತಿಯಲ್ಲಿ ಜಿಲ್ಲೆಯ ಜನರಿದ್ದಾರೆ. ಏಕೆಂದರೆ ಪಕ್ಕದ ಗದಗ, ಬಳ್ಳಾರಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ದಿನದಿಂದ ದಿನಕ್ಕೆ ಇಲ್ಲಿ ಸೋಂಕಿತರ ಪ್ರಮಾಣ ಹೆಚ್ಚುತ್ತಿದೆ. ಹೀಗಾಗಿ ಮಧ್ಯದ ಭಾಗದಲ್ಲಿ ಕೊಪ್ಪಳದ ಜನರಿದ್ದಾರೆ. ಅದರಲ್ಲೂ 22 ಸಾವಿರ ಜನರು ಗುಳೆ ಹೋಗಿ ವಾಪಸ್ಸಾಗಿದ್ದಾರೆ. ಅವರ ಮೇಲೆ ಜಿಲ್ಲಾಡಳಿತ ಪೂರ್ಣ ನಿಗಾ ವಹಿಸಿದೆ. ಸರ್ಕಾರ ಇಷ್ಟೆಲ್ಲ ಪೂರ್ವ ತಯಾರಿ ಮಾಡಿಕೊಂಡಿದ್ದರೂ ಜನರು ನಿರ್ಲಕ್ಷ್ಯ ಭಾವನೆ ತೋರುತ್ತಿದ್ದಾರೆ.

ಪ್ರಸ್ತುತ ಸ್ಥಿತಿಯಲ್ಲಿ ಜೀವನಕ್ಕಿಂತ ಜೀವ ಮುಖ್ಯ ಎನ್ನುವಂತಾಗಿದೆ. ಒಂದೊತ್ತಿನ ಆಹಾರ, ಕಿರಾಣಿ, ತರಕಾರಿ ಇಲ್ಲದಿದ್ದರೂ ಜನರು ಬದುಕು ಸಾಗಿಸಲಿದ್ದಾರೆ. ಇದನ್ನರಿತು ಜಿಲ್ಲೆಯ ಜನತೆ ಲಾಕ್‌ ಡೌನಗೆ ಸರಿಯಾಗಿ ಅರ್ಥೈಸಿಕೊಂಡು ಸಾಮಾಜಿಕ ಅಂತರದೊಂದಿಗೆ ಮನೆಯಲ್ಲೇ ಇರುವುದು ತುಂಬಾ ಅಗತ್ಯವಾಗಿದೆ.

Advertisement

ಕೊರೊನಾ ನಿಯಂತ್ರಣಕ್ಕಾಗಿ ಹಲವು ರೀತಿಯ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೇವೆ. ಆದರೂ ಜನರು ಲಾಕ್‌ಡೌನ್‌ ಉಲ್ಲಂಘಿಸಿ ಹೊರಗೆ
ಸುತ್ತಾಡುತ್ತಿರುವುದು ಗಮನಕ್ಕೆ ಬರುತ್ತಿದೆ. ಈ ಕುರಿತು ಎಸ್‌ಪಿ ಜೊತೆ ಮಾತನಾಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡುವೆ. ಲಾಕ್‌ಡೌನ್‌ ನಿಯಮ ಉಲ್ಲಂಘಿ ಸುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆಯೂ ಸೂಚನೆ ನೀಡುವೆ.
ಸುನೀಲ್‌ ಕುಮಾರ,
ಜಿಲ್ಲಾಧಿಕಾರಿ

ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next