Advertisement

ನಿರ್ಮಾಣವಾದೀತೇ ಅಥ್ಲೆಟಿಕ್‌ ಟ್ರ್ಯಾಕ್‌?

03:24 PM Nov 07, 2019 | Naveen |

ದತ್ತು ಕಮ್ಮಾರ

Advertisement

ಕೊಪ್ಪಳ: ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು, ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಲು ಕೊಪ್ಪಳ ಜಿಲ್ಲಾಡಳಿತ ವಿವಿಧ ಕ್ರೀಡಾ ಸೌಲಭ್ಯಗಳಿಗಾಗಿ ಕೇಂದ್ರ ಸರ್ಕಾರಕ್ಕೆ ಖೇಲೋ ಇಂಡಿಯಾ ಯೋಜನೆಯಡಿ 15 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದೆ.

ಕೇಂದ್ರ ಅಸ್ತು ಎಂದರೆ ಕ್ರೀಡಾಂಗಣದಲ್ಲಿ ಅಥ್ಲೆಟಿಕ್‌ ಟ್ರ್ಯಾಕ್‌ ನಿರ್ಮಾಣವಾಗಲಿದೆ. ಹೈಕ ಪ್ರದೇಶ ಕ್ರೀಡೆಯಲ್ಲಿ ಸ್ವಲ್ಪ ಹಿನ್ನೆಡೆ ಅನುಭವಿಸುತ್ತಿದೆ. ಈ ಭಾಗದಲ್ಲಿ ಸಾವಿರಾರು ಪ್ರತಿಭೆಗಳಿದ್ದರೂ ಸೂಕ್ತ ತರಬೇತಿ ಮಾರ್ಗದರ್ಶನ ಸಿಗುತ್ತಿಲ್ಲ. ಜತೆಗೆ ಸುಸಜ್ಜಿತ ಮೈದಾನ, ಕ್ರೀಡಾ ಸಲಕರಣೆಗಳ ವ್ಯವಸ್ಥೆ ಇಲ್ಲ. ಹೀಗಾಗಿ ಇಲ್ಲಿನ ಪ್ರತಿಭೆಗಳು ವಿಭಾಗಮಟ್ಟ, ರಾಜ್ಯಮಟ್ಟಕ್ಕೆ ಹೋಗುವಷ್ಟರಲ್ಲೇ ತೊಂದರೆ ಎದುರಿಸುತ್ತಿವೆ. ಬೆಂಗಳೂರು, ಮೈಸೂರು ಭಾಗದ ಕ್ರೀಡಾಪಟುಗಳಿಗೆ ಕ್ರೀಡಾ ಸೌಲಭ್ಯ ಸೇರಿದಂತೆ ಉತ್ತಮ ಮಾರ್ಗದರ್ಶನ ದೊರೆಯುತ್ತಿವೆ. ಹೀಗಾಗಿ ಅವರು ಅತಿ ವೇಗವಾಗಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ತೋರುತ್ತಿರುತ್ತಾರೆ.

ಇದೆಲ್ಲವನ್ನರಿತ ಜಿಲ್ಲಾಡಳಿತ ಈ ಭಾಗದ ಕ್ರೀಡಾ ಪ್ರತಿಭೆಗಳನ್ನು ಗುರುತಿಸುವ ಕೆಲಸ ಮಾಡುತ್ತಿದೆ. ಸೂಕ್ತ ಆಟದ ಮೈದಾನ, ಅಥ್ಲೆಟಿಕ್‌, ಚೆಸ್‌, ಟೆನ್ನಿಸ್‌, ಸ್ವಿಮಿಂಗ್‌ ಗೆ ಬೇಕಾದ ವಿವಿಧ ಸೌಕರ್ಯ ಒದಗಿಸುವ ಕೆಲಸ ಮಾಡುತ್ತಿದೆ.

ವಿವಿಧ ಕೈಗಾರಿಕೆಗಳ ಸಿಎಸ್‌ಆರ್‌ ಅನುದಾನದಲ್ಲಿ ಜಿಲ್ಲಾ ಕ್ರೀಡಾಂಗಣಕ್ಕೆ ಅಗತ್ಯ ಕೆಲ ಸೌಲಭ್ಯ ಕಲ್ಪಿಸುವ ಕೆಲಸ ಮಾಡಿದೆ. ಆದರೆ ಪ್ರತ್ಯೇಕವಾಗಿ ಕ್ರೀಡಾ ಇಲಾಖೆಯಿಂದಲೇ ಹೆಚ್ಚು ಅನುದಾನ ಬಿಡುಗಡೆಯಾಗಿರಲಿಲ್ಲ. ಪ್ರಸ್ತುತ ಸುಸಜ್ಜಿತ ಕ್ರೀಡಾಂಗಣವಿದೆ. ಅಥ್ಲೆಟಿಕ್‌ ನಿರ್ಮಿಸಿದರೆ ಇಲ್ಲಿನ ಪ್ರತಿಭೆಗಳಿಗೆ ಅನುಕೂಲವಾಗಲಿದೆ ಎಂಬುದನ್ನು ಯೋಚಿಸಿದೆ.

Advertisement

ಏಷಿಯನ್‌ ಗೇಮ್ಸ್‌, ಒಲಿಂಪಿಕ್‌ ಸೇರಿದಂತೆ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಕೀರ್ತಿ ಬೆಳಗಿಸಲು ಈ ಭಾಗದ ಕ್ರೀಡಾಪಟುಗಳನ್ನು ತಯಾರು ಮಾಡುವ ಉದ್ದೇಶದಿಂದಲೇ ಜಿಲ್ಲಾ ಕ್ರೀಡಾಂಗಣಕ್ಕೆ ಅಗತ್ಯ ನೆರವು ನೀಡುವಂತೆ ರಾಜ್ಯ ಕ್ರೀಡಾ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ.

ಖೇಲೋ ಇಂಡಿಯಾ ಸ್ಕೀಂನಡಿ ಹಣ: ಜಿಲ್ಲಾಡಳಿತ ರಾಜ್ಯ ಇಲಾಖೆಗೆ 15 ಕೋಟಿ ರೂ.ಗಳ ಅನುದಾನ ಪ್ರಸ್ತಾವನೆ ಸಲ್ಲಿಸಿದೆ. ರಾಜ್ಯ ಇಲಾಖೆ ಸಹಿತ ಭಾರತ ಸರ್ಕಾರ ಆರಂಭಿಸಿರುವ ಖೇಲೋ ಇಂಡಿಯಾ ಯೋಜನೆಯಡಿ ಕೊಪ್ಪಳ ಜಿಲ್ಲಾ ಕ್ರೀಡಾಂಗಣಕ್ಕೆ 15 ಕೋಟಿ ರೂ. ಅನುದಾನ ನೀಡುವಂತೆ ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಬೇಡಿಕೆ ಸಲ್ಲಿಸಿದೆ. 15 ಕೋಟಿಯಲ್ಲಿ 7 ಕೋಟಿ ಅಥ್ಲೆಟಿಕ್‌ ಟ್ರ್ಯಾಕ್‌ ನಿರ್ಮಾಣಕ್ಕೆ ಕೇಳಿಕೊಂಡಿದ್ದರೆ, ಉಳಿದಂತೆ 8 ಕೋಟಿ ರೂ.ಗಳನ್ನು ವಿವಿಧ ಕ್ರೀಡಾ ಕಾರ್ಯಗಳಿಗೆ ಬೇಡಿಕೆಯನ್ನಿಟ್ಟಿದೆ.

ಕೇಂದ್ರ ಈ ಪ್ರಸ್ತಾವನೆಗೆ ಸಮ್ಮತಿ ನೀಡಿ ಅನುದಾನ ನೀಡಿದರೆ ಮಾತ್ರ ಜಿಲ್ಲೆಯಲ್ಲಿ ಸುಸಜ್ಜಿತ ಅಥ್ಲೆಟಿಕ್‌ ಟ್ರ್ಯಾಕ್‌ ನಿರ್ಮಾಣವಾಗಿ ಈ ಭಾಗದ ಸಾವಿರಾರು ಪ್ರತಿಭೆಗಳಿಗೆ ವರದಾನವಾಗಲಿದೆ. ಅನುದಾನ ತರುವ ಹೊಣೆಗಾರಿಕೆ ಈ ಭಾಗದ ಶಾಸಕ, ಸಂಸದರ ಮೇಲಿದೆ.

Advertisement

Udayavani is now on Telegram. Click here to join our channel and stay updated with the latest news.

Next