Advertisement

ನೆಮ್ಮದಿಯನ್ನೇ ಹಾಳು ಮಾಡಿದೆ ದುರ್ನಾತ

05:16 PM Sep 26, 2018 | Team Udayavani |

ಕೊಪ್ಪಳ: ನಗರದ ಹೃದಯ ಭಾಗದಲ್ಲಿನ 16ನೇ ವಾರ್ಡ್‌ನ ಮಹಿಳೆಯರ ನರಕ ಯಾತನೆಯನ್ನು ಯಾರೂ ಕೇಳುವವರೇ ಇಲ್ಲದಂತಾಗಿದೆ. ಶೌಚಾಲಯದ ದುರ್ನಾತ ಜನರ ನಿದ್ದೆ, ನೆಮ್ಮದಿಯನ್ನೇ ಹಾಳು ಮಾಡಿದೆ. ಬಯಲು ಬಹಿರ್ದೆಸೆ ಮುಕ್ತ ಮಾಡಿದ್ದೇವೆ ಎನ್ನುವ ನಗರಸಭೆ ಅಧಿಕಾರಿಗಳೊಮ್ಮೆ ಇಲ್ಲಿ ಭೇಟಿ ನೀಡಿ ಕಣ್ತೆರೆದು ನೋಡಬೇಕಿದೆ.

Advertisement

ಹೌದು. ಇಲ್ಲಿನ ದುರ್ಗಮ್ಮನ ಗುಡಿ ಸಮೀಪದಲ್ಲಿರುವ ಹಾಳಭಾವಿ ತಗ್ಗು ಎಂದೇ ಹೆಸರು ಪಡೆದಿರುವ 16ನೇ ವಾರ್ಡ್‌ ಜನರ ಪರಿಸ್ಥಿತಿ ಹೇಳತೀರದು. ಮಹಿಳೆಯರು ಶೌಚಕ್ಕೆ ತೆರಳಬೇಕೆಂದರೆ ಮೂಗು ಮುಚ್ಚಿಕೊಂಡೇ ಹೋಗಬೇಕು. ಅಷ್ಟೊಂದು ದುರ್ವಾಸನೆ ವಾರ್ಡ್‌ ತುಂಬೆಲ್ಲ ಹರಡಿರುತ್ತದೆ. ನಗರಸಭೆಯಿಂದ ವಾರ್ಡ್ ನ ಬಯಲು ಜಾಗದಲ್ಲಿ ಸಾರ್ವಜನಿಕ ಮಹಿಳಾ ಶೌಚಾಲಯ ನಿರ್ಮಿಸಲಾಗಿದೆ. ಆದರೆ ಸರಿಯಾದ ನಿರ್ವಹಣೆ ಇಲ್ಲ. ನೀರಿನ ವ್ಯವಸ್ಥೆಯಂತೂ ದೂರದ ಮಾತು. ವಿದ್ಯುತ್‌ ಸೌಲಭ್ಯ ಗಗನ ಕುಸುಮವಾಗಿದೆ.

ಈ ವಾರ್ಡ್‌ನಲ್ಲಿ ಕೆಳ ಹಾಗೂ ಮಧ್ಯಮ ವರ್ಗದ ಕುಟುಂಬಗಳೇ ಹೆಚ್ಚು ವಾಸ ಮಾಡುತ್ತಿವೆ. ಕೆಲವರು ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಂಡಿದ್ದರೆ, ಇನ್ನು ಕೆಲವರು ಸ್ಥಳವಕಾಶದ ಕೊರತೆಯಿಂದ ಶೌಚಾಲಯ ಕಟ್ಟಿಸಿಕೊಂಡಿಲ್ಲ. ಬಯಲು ಪ್ರದೇಶವನ್ನೇ ಅವಲಂಬಿಸಿದ್ದಾರೆ. ಶೌಚಾಲಯಕ್ಕೆ ಸರಿಯಾದ ದಾರಿ ಮಾಡಿಲ್ಲ. ಗರ್ಭಿಣಿಯರು, ವೃದ್ಧೆಯರು ಸೇರಿದಂತೆ ಮಕ್ಕಳು ಶೌಚಾಲಯಕ್ಕೆ ಹೋಗಬೇಕೆಂದರೆ ಹರಸಾಹಸ ಮಾಡಬೇಕಿದೆ. ಅಷ್ಟೊಂದು ಕೆಟ್ಟ ಪರಿಸ್ಥಿತಿಯಲ್ಲಿದೆ ರಸ್ತೆ. ನಾವು ಇಲ್ಲಿ ವಾಸ ಮಾಡಲು ಕರ್ಮ ಮಾಡಿದ್ದೇವೆ. ಅನಿವಾರ್ಯವಾಗಿ ವಾಸ ಮಾಡುವಂತಹ ಪರಿಸ್ಥಿತಿಯಿದೆ. ಮನೆಯಲ್ಲಿ ಕುಳಿತು ಊಟ ಮಾಡಲು ಆಗುತ್ತಿಲ್ಲ ಅಷ್ಟೊಂದು ದುರ್ನಾತ ಬೀರುತ್ತಿದೆ ಎಂದು ಆಕ್ರೋಶದಿಂದಲೇ ಹೇಳುತ್ತಾರೆ ಇಲ್ಲಿನ ಮಹಿಳೆಯರು.

ವರ್ಷಕ್ಕೊಮ್ಮೆ ಕಾರ್ಮಿಕರು ಬರ್ತಾರೆ: ವಾರ್ಡ್‌ನಲ್ಲಿ ಚರಂಡಿ ಸ್ವಚ್ಛ  ಮಾಡೋದು ಅಪರೂಪಕ್ಕೊಮ್ಮೆ. ಇನ್ನೂ ಮಹಿಳಾ ಶೌಚಾಲಯ ಸ್ವತ್ಛ ಮಾಡೋರು ಇಲ್ಲವೇ ಇಲ್ಲ. ಖಾಸಗಿ ಏಜೆನ್ಸಿಗೂ ಕೊಟ್ಟಿಲ್ಲ. ನಗರಸಭೆಯೂ ನಿರ್ವಹಣೆ ಮಾಡುತ್ತಿಲ್ಲ. ಪೌರ ಕಾರ್ಮಿಕರು ವರ್ಷಕ್ಕೊಮ್ಮೆ ಬರುತ್ತಾರೆ. ಬೇಕಾಬಿಟ್ಟಿ ಸ್ವಚ್ಛ  ಮಾಡಿ ತೆರಳುತ್ತಾರೆ. ನಮಗೆ ಸರಿಯಾದ ವ್ಯವಸ್ಥೆ ಇಲ್ಲ. ಒಂದೊತ್ತು ಉಪವಾಸ ಇರಬಹುದು. ಆದರೆ ವಾಸನೆ ತಾಳಲಾರೆವು. ಮಳೆ ಬಂತೆಂತರೆ ತ್ಯಾಜ್ಯದ ನೀರು ಹರಿಯಲು ಜಾಗವೇ ಇಲ್ಲ. ಅಲ್ಲೇ ಸಂಗ್ರಹವಾಗಿ ಮತ್ತಷ್ಟು ಗಬ್ಬು ನಾರುತ್ತದೆ.

ನಗರಸಭೆ ಸದಸ್ಯರು ಆಗೊಮ್ಮೆ, ಈಗೊಮ್ಮೆ ಬರುತ್ತಾರೆ. ಸಮಸ್ಯೆ ಇರುವುದನ್ನು ಗಮನಿಸುತ್ತಾರೆ. ಮತ್ತೆ ಸುಮ್ಮನೆ ವಾಪಾಸ್ಸಾಗತ್ತಾರೆ. ಇಲ್ಲಿ ಶಾಶ್ವತ ವ್ಯವಸ್ಥೆ ಮಾಡುತ್ತಿಲ್ಲ. ಬಯಲು ಜಾಗದಲ್ಲಿಯೇ ತಗ್ಗು ತೋಡಿಸಿ ಶೌಚಾಲಯದ ನೀರು ಒಂದೆಡೆ ಸಂಗ್ರಹವಾಗುವಂತೆ ಮಾಡಿ ನಂತರ ಯಂತ್ರದ ಮೂಲಕ ಅದನ್ನು ಬೇರೆ ಕಡೆ ಸಾಗಿಸುವ ವ್ಯವಸ್ಥೆ ಮಾಡುತ್ತಿಲ್ಲ. ಅಧಿಕಾರಿಗಳಂತೂ ಇತ್ತ ಸುಳಿದೇ ಇಲ್ಲ ಎನ್ನುತ್ತಿದ್ದಾರೆ ಸ್ಥಳೀಯರು. ಆದರೆ ನಗರಸಭೆ ಮಾತ್ರ ಬಯಲು ಬಹಿರ್ದೆಸೆ ಮುಕ್ತ ನಗರವನ್ನಾಗಿ ಮಾಡಿದ್ದೇವೆ. ಯಾರಾದರೂ ಶೌಚಕ್ಕೆ ಬಹಿರ್ದೆಸೆಗೆ ತೆರಳಿದರೆ ಅವರ ವಿರುದ್ಧ ಕೇಸ್‌ ದಾಖಲಿಸುವ ಕುರಿತು ಫರ್ಮಾನು ಹೊರಡಿಸಿದ್ದಾರೆ. ಮೊದಲು ನಗರಸಭೆ ಸದಸ್ಯರು, ಅಧಿಕಾರಿಗಳು, ಪೌರಾಯುಕ್ತರು ಇಲ್ಲಿಗೆ ಬಂದು ನೋಡಬೇಕಿದೆ. ಜನರು ಅನುಭವಿಸುವ ಕರ್ಮವನ್ನು ಕಣ್ತೆರೆದು ವೀಕ್ಷಣೆ ಮಾಡಿದರೆ ವಾಸ್ತವ ಚಿತ್ರಣ ಗೊತ್ತಾಗಲಿದೆ. ಬರಿ ಕಚೇರಿಯಲ್ಲೇ ಕುಳಿತು ಕೆಲಸ ಮಾಡಿದರೆ ಜನರ ನೋವು ಯಾರಿಗೂ ತಿಳಿಯಲ್ಲ ಎಂದು ಸ್ಥಳೀಯ ನಿವಾಸಿಗಳು ಅಧಿಕಾರಿಗಳ, ನಗರಸಭೆ ಸದಸ್ಯರ ಕಾರ್ಯ ವೈಖರಿ ವಿರುದ್ಧ ಗುಡುತ್ತಿದ್ದಾರೆ.

Advertisement

ವಾರ್ಡ್‌ನಲ್ಲಿ ಮಹಿಳಾ ಶೌಚಾಲಯವೇ ಇಲ್ಲ. ಬಯಲು ಪ್ರದೇಶದಲ್ಲೇ ತೆರಳಬೇಕಾದ ಸ್ಥಿತಿಯಿದೆ. ಅಲ್ಲಿನ ವಾಸನೆ ನಮಗೆ ತಡೆಯಲಾಗುತ್ತಿಲ್ಲ. ದುರ್ವಾಸನೆ ವಾರ್ಡ್ ನ ತುಂಬೆಲ್ಲ ಹರಡಿದೆ. ಯಾರೊಬ್ಬರೂ ಇಲ್ಲಿನ ಸಮಸ್ಯೆ ಬಗ್ಗೆ ಕೇಳಿಲ್ಲ. ಪೌರ ಕಾರ್ಮಿಕರು ವರ್ಷಕ್ಕೊಮ್ಮೆ ಬರುತ್ತಾರೆ. ಆದರೆ ಸರಿಯಾಗಿ ಸ್ವತ್ಛ ಮಾಡಲ್ಲ. ನಮ್ಮ ಕರ್ಮ ಳ್ಳೋರ್ಯಾರು ರೀ..
ಮಾಬೂಬಿ ಆದೋನಿ, ಕಮಲಮ್ಮ ಶೆಳ್ಳೇರ್‌, ಫಕೀರಮ್ಮ ಎಳವರ್‌, ಸ್ಥಳೀಯ ನಿವಾಸಿಗಳು.

ಹಾಳಭಾವಿ ತಗ್ಗಿನಲ್ಲಿ ಶೌಚಾಲಯಕ್ಕೆ ತೆರಳಲು ಮಹಿಳೆಯರಿಗೆ ತುಂಬಾ ಸಮಸ್ಯೆಯಿದೆ. ಬಯಲು ಪ್ರದೇಶಕ್ಕೆ ಸುತ್ತಲಿನ ನಾಲ್ಕಾರು ವಾರ್ಡ್‌ನ ಜನರು ಬರುತ್ತಾರೆ. ವಾಸನೆಯಂತೂ ಹೇಳ ತೀರದಾಗಿದೆ. ಸ್ಥಳೀಯರು ನೆಮ್ಮದಿಯಿಂದ ಊಟ ಮಾಡದಂತಹ ಪರಿಸ್ಥಿತಿಯಿದೆ. ನಗರಸಭೆ ಸದಸ್ಯರು ಇಲ್ಲಿನ ಸಮಸ್ಯೆ ಆಲಿಸುತ್ತಿಲ್ಲ. ಅಧಿಕಾರಿಗಳ ಸುಳಿವೇ ಇಲ್ಲ.
 ಖಾಸೀಂ ಸರದಾರ, ಹೋರಾಟಗಾರ

.ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next