ಕೊಪ್ಪಳ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರು ಕುಣಿಸಿದಂತೆ ಕುಣಿಯುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದರು.
ಕೊಪ್ಪಳದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಟಿ.ಜೆ.ಅಬ್ರಹಾಂ ಓರ್ವ ಬ್ಲಾಕ್ ಮೇಲರ್. ಆತನ ವಿರುದ್ಧ ಸುಪ್ರೀಂ ಕೋರ್ಟ್ 20 ಲಕ್ಷ ದಂಡ ಹಾಕುವ ಮೂಲಕ ಛೀಮಾರಿ ಹಾಕಿ ಕಳುಹಿಸಿದೆ. ಅಂತಹ ವ್ಯಕ್ತಿ ರಾಜ್ಯಪಾಲರಿಗೆ ಬೆಳಗ್ಗೆ 11:30ಕ್ಕೆ ದೂರು ನೀಡಿದರೆ ಸಂಜೆ 6 ಗಂಟೆ ವೇಳೆಗೆ ಮುಖ್ಯಮಂತ್ರಿಗಳಿಗೆ ರಾಜ್ಯಪಾಲರು ನೋಟಿಸ್ ನೀಡಿದ್ದಾರೆ. ಇದನ್ನು ನೋಡಿದರೆ ರಾಜಪಾಲರು ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರು ಹೇಳಿದಂತೆ ಕುಣಿಯುತ್ತಿರುವುದು ಗೊತ್ತಾಗುತ್ತಿದೆ. ರಾಜ್ಯಪಾಲರ ನಡೆಯನ್ನು ಕನ್ನಡಿಗರು, ಕರ್ನಾಟಕದ ಜನತೆ ಎಂದಿಗೂ ಸಹಿಸಲ್ಲ ಎಂದರು.
ಮುಡಾದಲ್ಲಿ ಅವ್ಯವಾರವಾಗಿದೆ ಎಂಬ ವಿಚಾರ ಕೇಳಿ ಬಂದ ಕೂಡಲೇ ಪ್ರಕರಣವನ್ನು ಸಿಎಂ ಸಿದ್ದರಾಮಯ್ಯ ಅವರು ನ್ಯಾಯಾಂಗ ತನಿಖೆಗೆ ವಹಿಸಿದ್ದಾರೆ. ನ್ಯಾಯಾಂಗ ತನಿಖೆ ಆಗುತ್ತಿದೆ. ತನಿಖೆ ನಡೆದು ಬಿಜೆಪಿಗರ ಬಣ್ಣ ಬಯಲಾಗಲಿದೆ ಎಂದರು.
ಈ ಹಿಂದೆ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ ಮೂರ್ನಾಲ್ಕು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ್ದರು. ಆ ಪ್ರಕರಣದ ತನಿಖೆ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ನಾವು ಸಿಬಿಐ, ಇಡಿ ಅಂತಹ ಯಾವುದೇ ತನಿಖಾ ಸಂಸ್ಥೆಗೆ ಎದುರುವ ಪ್ರಶ್ನೆಗೆ ಇಲ್ಲ ಎಂದರು.
ಈ ಹಿಂದೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಭೋವಿ ಅಭಿವೃದ್ಧಿ ನಿಗಮದಲ್ಲಿ 60.4 ಕೋಟಿ ಭ್ರಷ್ಟಾಚಾರ ನಡೆದಿದೆ. ಅದನ್ನು ಯಾವ ತನಿಖೆಗೆ ವಹಿಸಿದ್ದರು? ಯಾರನ್ನು ಬಂಧಿಸಿದ್ದಾರೆ? ಇನ್ನು ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಗಮದಲ್ಲಿ 47 ಕೋಟಿ ಅವ್ಯವಹಾರ ನಡೆದಿದೆ. ಅಂದು ನಿಗಮದ ಅಧ್ಯಕ್ಷನಾಗಿದ್ದ ವೀರಯ್ಯನನ್ನು ನಾವು ಬಂದಿಸಿದ್ದೇವೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಆರ್.ಅಶೋಕ ಅವರು ಏಕೆ ತುಟಿ ಬಿಚ್ಚುವುದಿಲ್ಲ. ಮೂರು ಕೋಟಿ ಹಣ ನೇರವಾಗಿ ವೀರಯ್ಯನ ಖಾತೆಗೆ ಜಮೆಯಾಗಿದೆ. ಆ ಹಣದಲ್ಲಿ ವೀರಯ್ಯ ಭವ್ಯ ಬಂಗಲೆ ನಿರ್ಮಾಣ ಮಾಡುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ಮಿತ್ರರು ರಾಜ್ಯದ ಜನತೆಗೆ ಉತ್ತರ ನೀಡಲಿ ಎಂದು ಆಗ್ರಹಿಸಿದರು.
ಯಡಿಯೂರಪ್ಪ ಅವರ ಅವಧಿಯಲ್ಲಿ ಕರಕುಶಲ ಅಭಿವೃದ್ಧಿ ನಿಗಮದಲ್ಲಿ 22.40 ಕೋಟಿ ಹಣವನ್ನು ಖಾಸಗಿ ವ್ಯಕ್ತಿಗೆ ಖಾತೆಗೆ ಜಮೆ ಮಾಡಲಾಗಿದೆ. ಈ ಹಗರಣಗಳ ಬಗ್ಗೆ ಮಾತನಾಡದ ಬಿಜೆಪಿ ನಾಯಕರು ಯಾವ ಮುಖ ಇಟ್ಕೊಂಡು ಮೈಸೂರಿಗೆ ಪಾದಯಾತ್ರೆ ಕೈಗೊಂಡಿದ್ದಾರೋ? ಬಿಜೆಪಿ ನಾಯಕರ ಬಣ್ಣವನ್ನು ಒಂದೊಂದಾಗಿ ಬಯಲು ಮಾಡುತ್ತೇವೆ ಎಂದರು.