Advertisement

ಮಿಠಾಯಿ ಸಂದೇಶ

12:43 PM Feb 24, 2018 | |

 ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ “ದೊಡ್ಡಜಾತ್ರೆ’ ಎಂದೇ ಹೆಸರಿದೆ. ಅಲ್ಲಿ ನಡೆಯುವ ದಾಸೋಹಕ್ಕೆ ಭಕ್ತಾದಿಗಳು ಪ್ರೀತಿ. ಅಭಿಮಾನದಿಂದ ನೀಡುವ ರೊಟ್ಟಿಯ ಸಂಖ್ಯೆ ಅದೆಷ್ಟೋ ಲಕ್ಷ ಇರುತ್ತದೆ. ಈ ಜಾತ್ರೆಯಲ್ಲಿ, ಮಿಠಾಯಿಯಲ್ಲಿ ಸಾಮಾಜಿಕ ಕಳಕಳಿ ಮೂಡಿಸುವ ವಿಶಿಷ್ಟ ಪ್ರಯತ್ನವೊಂದು ಆರಂಭವಾಗಿದೆ !

Advertisement

ತ್ರಿವಳಿ ತಲಾಖ್‌ಗೆ ತಲಾಖ್‌!, ದಾನಮ್ಮ ಕೊಲೆ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಲಿ, ತುಂಗಭದ್ರೆ ಹೂಳು ತೆಗೆಯಿರಿ, ಮಹದಾಯಿ ಹೋರಾಟಕ್ಕೆ ನಮ್ಮ ಬೆಂಬಲ, ಸಾಧನೆ ಇಲ್ಲದೇ ಸತ್ತರೆ ಸಾವಿಗೆ ಅವಮಾನ, ಭೇಟಿ ಪಢಾವೊ, ಬೇಟಿ ಬಚಾವೋ, ಅಣ್ಣಾ ಹಜಾರೆ, ರೈತರು ಬಂದರು ದಾರಿ ಬಿಡಿ, ಕಟ್ಟಿರಿ ಪಾಯಿಖಾನೆ, ದೂರ ಮಾಡಿರಿ ದವಾಖಾನೆ…

ಏನಿದು? ಒಂದಕ್ಕೊಂದು ಸಂಬಂಧವೇ ಇಲ್ಲ. ಎಲ್ಲಿಯ ತಲಾಖ್‌, ಎಲ್ಲಿಯ ಮಹದಾಯಿ? ಅನ್ನುವ ಪ್ರಶ್ನೆ ಉದ್ಬವಿಸುವುದು ಸಹಜ. ಇದ್ಯಾವುದೂ ವರ್ತಮಾನದ ಪತ್ರಿಕೆಯೊಂದರ ಘೋಷಣೆಯಾಗಲಿ, ಚಾನೆಲ್‌ ಒಂದರ ಪ್ರಕಟಣೆಯಾಗಲಿ ಅಲ್ಲ, ಇದು ಕೊಪ್ಪಳದ ಅಜ್ಜನ ಜಾತ್ರೆ ಎಂದೇ ಪ್ರತೀತಿ ಹೊಂದಿರುವ ಶ್ರೀ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಮೂಡಿದ ಸಾಮಾಜಿಕ ಕಳಕಳಿ. ಅದೂ ಮಿಠಾಯಿಯಲ್ಲಿ ಮೂಡಿ ಬಂದ ಕ್ರಾಂತಿ ಎಂದರೆ ನಂಬಲೇಬೇಕು.

ಅಜ್ಜನ ಜಾತ್ರೆ ಅಂದರೆ ಹೀಗೇ. ಇದು ಉತ್ತರ ಕರ್ನಾಟಕದ ಸಿದ್ಧಗಂಗೆ. ರಥೋತ್ಸವದಲ್ಲಿ ಲಕ್ಷಕ್ಕೂ ಮೀರಿ ಪಾಲ್ಗೊಳ್ಳುವ ಭಕ್ತಸಾಗರ, ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಹೊಸ ಆಯಾಮದ ಪ್ರಯೋಗಾತ್ಮಕ ನಾಟಕಗಳು, ಮಹಾದಾಸೋಹ, ದಾಸೋಹಕ್ಕೆ ರೊಟ್ಟಿ, ಮಾದಲಿ, ದವಸ-ಧಾನ್ಯಗಳ ರೂಪದಲ್ಲಿ ಹರಿದುಬರುವ ಭಕ್ತರ ದೇಣಿಗೆ… ಒಂದೇ.. ಎರಡೇ… ಇವುಗಳ ಸಾಲಿನಲ್ಲಿ ಮಿಠಾಯಿಯಲ್ಲಿ ಮೂಡುವ ಸಾಮಾಜಿಕ ಕಳಕಳಿಗೂ ಅಗ್ರಸ್ಥಾನ.

ಅಜ್ಜನ ಜಾತ್ರೆ ಕನಿಷ್ಠ 15 ದಿನದವರೆಗೂ ನಡೆಯುತ್ತದೆ. ಇದೊಂದು ಧಾರ್ಮಿಕ ಕಾರ್ಯಕ್ರಮ ಮಾತ್ರವಲ್ಲ. ಇಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡಲಾಗುತ್ತಿದೆ.  ಜಾತ್ರೆಗೆಂದು ಮನೆಗೆ ಬಂದ ಬೀಗರಿಗೆ ಫಳಾರ ಇಲ್ಲಿನ ವೈಶಿಷ್ಠÂ.

Advertisement

ಫಳಾರ ಕೊಳ್ಳುವವರು ಮಿಠಾಯಿ ಅಂಗಡಿಗೆ ಹೋಗಲೇಬೇಕು. ಏಕೆಂದರೆ ಫಳಾರದ ವಸ್ತುಗಳೆಲ್ಲ ಸಿಗುವುದು ಅಲ್ಲಿಯೇ. ಮಂಡಾಳ ಅವಲಕ್ಕಿ, ಶೇಂಗಾ, ಮೈಸೂರುಪಾಕ್‌, ಲಾಡು, ಜಿಲೇಜಿ, ಬೆಂಡು, ಬತ್ತಾಸು, ರವಡಗಿ, ಕುಸರೆಳ್ಳು ಜೊತೆಗೆ ಮಿರ್ಚಿ, ಆಲೂಬೋಂಡಾ, ಬದನೇಬೋಂಡಾ ಮುಂತಾದ ತಿನಿಸುಗಳನ್ನು ಫಳಾರ ಹೊಂದಿರುತ್ತದೆ. ಗವಿಸಿದ್ಧೇಶ್ವರನ ಜಾತ್ರೆಗೆ ಬಂದವರು ಮೊದಲೆಲ್ಲ ಫಳಾರ ಕಟ್ಟಿಸಿಕೊಂಡು ಗುಡ್ಡದ ಮೇಲೆ  ಹೋಗಿ ತಿಂದು ಮನೆಗೆ ತೆರಳುತ್ತಿದ್ದರು. ಇತ್ತೀಚೆಗೆ ಸುತ್ತಮುತ್ತಲೆಲ್ಲ ಕಟ್ಟಡಗಳು ತಲೆ ಎತ್ತಿರುವುದರಿಂದ ಅಂಗಡಿಯವರೇ ಗ್ರಾಹಕರಿಗೆ ಫಳಾರ ತಿನ್ನಲು ಜಾಗದ ವ್ಯವಸ್ಥೆ ಮಾಡಿರುತ್ತಾರೆ.

ಅಜ್ಜನ ಜಾತ್ರೆಯಲ್ಲಿ ಸಿಹಿ ತಿನಿಸು ಮಾತ್ರವಲ್ಲ, ಸಿಹಿಯ ಜೊತೆಗೆ ಸಮಾಜಕ್ಕೆ ಸವಿಯಾದ ಸಂದೇಶವನ್ನು ಮಿಠಾಯಿವಾಲಾಗಳು ಸಾರುತ್ತಾರೆ. ಮೇಲ್ನೋಟಕ್ಕೆ ಇದು ಗ್ರಾಹಕರನ್ನು ಸೆಳೆಯುವ ತಂತ್ರ ಅನಿಸಬಹುದು. ಇದರ ಜೊತೆಗೆ ಸಮಾಜದಲ್ಲಿ ಅನೇಕ ಸಂಘರ್ಷಗಳು ಪ್ರತಿ ವರ್ಷ ಹುಟ್ಟುತ್ತಲೇ ಇರುತ್ತವೆ. ಆ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು, ವಿಷಯಾಧಾರಿತ ನಿಲುವು ವ್ಯಕ್ತಪಡಿಸಲು ಈ ಮಿಠಾಯಿ ಕಲೆ ಮಾರ್ಗವಾಗಿದೆ.

“ದಿನವೂ ಟಿ.ವಿ, ಪೇಪರ್‌ನಲ್ಲಿ ಸುದ್ದಿಗಳನ್ನು ಓದುತ್ತೇವೆ, ನೋಡುತ್ತೇವೆ. ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಂಡ ಮೇಲೆ ನಮ್ಮಲ್ಲೂ ಒಂದು ನಿಲುವು ಇರುತ್ತದೆ. ಅದನ್ನ ಮಾತಿನಲ್ಲಿ ಹೇಳಿ ಮರೆತರೆ ಯಾವ ಸಾಧನೆಯನ್ನೂ ಮಾಡಿದಂತಲ್ಲ. ಅದಕ್ಕೆ ಸುಮಾರು 15 ವರ್ಷಗಳ ಹಿಂದೆ ಉಂಟಾದ ಕೋಮುಗಲಭೆಗೆ ಸಂಬಂಧಿಸಿದಂತೆ  ಸೌಹಾರ್ದತೆಯ ಸಂದೇಶ ಸಾರುವ ಅಕ್ಷರಗಳನ್ನು ಮಿಠಾಯಿಯಲ್ಲೇ ಸಿದ್ಧಪಡಿಸಿದೆವು. ಗ್ರಾಹಕರು ಸಹಜವಾಗಿ ನಮ್ಮ ಅಂಗಡಿಯತ್ತ ಆಕರ್ಷಿತರಾದರು. ಆ ವರ್ಷ ವ್ಯಾಪಾರವೂ ಜೋರಾಯಿತು. ಸುಮಾರು 50 ಕೆ.ಜಿ ಮಿಠಾಯಿಯಲ್ಲೇ ಸಂದೇಶ ಸಾರಿದ್ದ ನಮಗೆ ಜನ ಬೆಂಬಲ ವ್ಯಕ್ತವಾಯಿತು. ಅದನ್ನು ಕಂಡು ನಮ್ಮಂತೆ ಇತರರು ಸಹ ಮರುವರ್ಷದಿಂದ  ಮಿಠಾಯಿ ಕ್ರಾಂತಿ ಆರಂಭಿಸಿದರು. ಕ್ರಮೇಣ ಈ ಸೂತ್ರವನ್ನು ಎಲ್ಲ ಅಂಗಡಿಯವರೂ ಅಳವಡಿಸಿಕೊಂಡರು ಎನ್ನುತ್ತಾರೆ ಮಿಠಾಯಿವಾಲಾ ಜಾವಿದ್‌ ಅಬ್ದುಲ್‌ ರಶೀದ್‌ಸಾಬ್‌.

ಜಾತ್ರೆಯಲ್ಲಿ  32 ಮಿಠಾಯಿ ಅಂಗಡಿಗಳಿದ್ದವು.  ಪ್ರತಿ ಮಿಠಾಯಿ ಅಂಗಡಿಯವರು ಕ್ವಿಂಟಾಲ್‌ಗ‌ಟ್ಟಲೆ ಮಿಠಾಯಿಯನ್ನು ಸಾಮಾಜಿಕ ಸಂದೇಶದ ಸಾಲುಗಳಿಗಾಗಿ ಮೀಸಲಿಟ್ಟಿದ್ದರು.  ಸಂದೇಶದ ಸಾಲುಗಳು ಏನಿರಬೇಕು ಎಂಬುದನ್ನು ನವೆಂಬರ್‌ ತಿಂಗಳಿನಿಂದಲೇ ಆಲೋಚನೆ ಮಾಡಿಕೊಂಡು ಪ್ರಸ್ತುತವಿರುವ ವಿಷಯ ಕುರಿತು ಮಿಠಾಯಿ ಕ್ರಾಂತಿ ಮೂಡಿಸಲಾಗುತ್ತದೆ. ಈಗೀಗ ವ್ಯಾಪಾರ ಅಷ್ಟಕ್ಕಷ್ಟೇ ಆಗಿರುವುದರಿಂದ ಕೆಲವರು ಥರ್ಮೋಕೋಲ್‌ನಲ್ಲಿ ಸಂದೇಶ ಬರೆಯುತ್ತಿದ್ದಾರೆ. ನಮಗೆ ವ್ಯಾಪಾರ ಏನೇ ಆಗಲಿ, ಜನರಿಗೆ, ಸಮಾಜಕ್ಕೆ ಸಿಹಿ ಸಂದೇಶ ನೀಡುವುದೇ ನಮ್ಮ ಉದ್ದೇಶ. ಅದಕ್ಕೆ ಪ್ರತಿ ವರ್ಷ ಸುಮಾರು ಕ್ವಿಂಟಾಲ್‌ ಮಿಠಾಯಿ ಹೋಗಬಹುದು. ಗವಿಮಠದ ಅದೆಷ್ಟೋ ಭಕ್ತರು ಆ ವರ್ಷ ಬೆಳೆದ  ಬೆಳೆಯನ್ನೇ ಮಠಕ್ಕೆ ಅರ್ಪಿಸುವಾಗ ಕ್ವಿಂಟಾಲ್‌ ಮಿಠಾಯಿ ಯಾವ ಲೆಕ್ಕ ಎಂಬ ಭಕ್ತಿ, ಅಭಿಮಾನ ಜಾವೀದ್‌ ಅವರದ್ದು.

ಬಸವರಾಜ ಕರುಗಲ್‌

Advertisement

Udayavani is now on Telegram. Click here to join our channel and stay updated with the latest news.

Next