ಕೊಪ್ಪಳ: ಜಿಲ್ಲೆಯ ರೈತ ಸಮೂಹವು ಇತ್ತೀಚಿನ ದಿನಗಳಲ್ಲಿ ತೋಟಗಾರಿಕೆ ಬೆಳೆಯೆತ್ತ ಹೆಚ್ಚು ಆಸಕ್ತಿ ತೋರುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ 25 ಸಾವಿರ ಹೆಕ್ಟೇರ್ ಪ್ರದೇಶವಿದ್ದ ತೋಟಗಾರಿಕೆ ಪ್ರದೇಶ ಪ್ರಸ್ತುತ ದಿನದಲ್ಲಿ 40 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ವಿಸ್ತಾರವಾಗಿದೆ. ಅಕಾಲಿಕ ಮಳೆ, ಬೆಳೆಯ ಬೆಲೆ ಕುಸಿತ, ಬಹು ವಾರ್ಷಿಕ ಬೆಳೆಯುವ ಅನ್ನದಾತನಿಗೆ ಆಸರೆಯಾಗಿದೆ.
ಕೊಪ್ಪಳ ಜಿಲ್ಲೆಯು ಮೊದಲೇ ಬರಪೀಡಿತ ಎಂಬ ಹಣೆಪಟ್ಟಿಯನ್ನು ಹೊತ್ತಿದೆ. ಈ ಮಧ್ಯೆಯೂ ಬೋರ್‌ವೆಲ್ ನೀರಿನಲ್ಲಿಯೇ ನೀರಾವರಿ ಪ್ರದೇಶ ವಿಸ್ತರಿಸಿಕೊಂಡು ಜೀವನೋಪಾಯಕ್ಕೆ ದಾರಿ ಮಾಡಿಕೊಳ್ಳುತ್ತಿದ್ದಾರೆ. ಬಹುವಾರ್ಷಿಕ ಬೆಳೆಯಿಂದ ಲಾಭ: ಜಿಲ್ಲೆಯ ರೈತ ಸಮೂಹವು ನೀರಾವರಿ ಇದ್ದರೂ ನಾಲ್ಕೈದು ತಿಂಗಳ ಬೆಳೆ ಬೆಳೆದು ಮಾರುಕಟ್ಟೆಯಲ್ಲಿ ಬೆಲೆ ಇಲ್ಲದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಉದಾಹರಣೆಗೆ ಮೆಕ್ಕೆಜೋಳ ಬೆಳೆಯನ್ನು ಕಷ್ಟಪಟ್ಟು ಬೆಳೆದರೂ ಈಚೆಗೆ ಸೈನಿಕ ಹುಳುವಿನ ಬಾಧೆ ರೈತನನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡುವುದು, ಉತ್ತಮ ಬೆಳೆ ಬೆಳೆದರೂ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಕಂಡು ಅಗ್ಗದ ದರದಲ್ಲಿ ಉತ್ಪನ್ನ ಮಾರಾಟ ಮಾಡುತ್ತಿರುವುದು ಈಚೆಗೆ ಸಾಮಾನ್ಯವಾಗಿದೆ. ಇದರಿಂದ ಬೇಸತ್ತಿರುವ ರೈತ ಸಮೂಹ ನೀರಾವರಿಯಲ್ಲಿಯೇ ಬಹು ವಾರ್ಷಿಕ ಬೆಳೆ ಬೆಳೆಯಲು ಮುಂದಾಗುತ್ತಿದ್ದಾರೆ. ಮಾವು, ಪೇರಲ, ದ್ರಾಕ್ಷಿ, ನುಗ್ಗೆ ಸೇರಿದಂತೆ ಇತರೆ ಬೆಳೆಯನ್ನು ಬೆಳೆದು ವಾರ್ಷಿಕವಾಗಿ ಒಂದು ಬಾರಿ ಮಾರುಕಟ್ಟೆಯ ವಹಿವಾಟಿನಲ್ಲಿ ಲಾಭ ಕಂಡುಕೊಂಡು ತೋಟಗಾರಿಕೆ ಬೆಳೆಯ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ.
25-40 ಸಾವಿರ ಹೆಕ್ಟೇರ್‌ಗೆ ಏರಿಕೆ: ಈ ಹಿಂದೆ ಹೆಚ್ಚು ಮಳೆಯಾಗುತ್ತಿತ್ತು. ಹಾಗಾಗಿ ತೋಟಗಾರಿಕೆ ಬೆಳೆಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಆದರೆ ಕಳೆದ ಹತ್ತಾರು ವರ್ಷಗಳಲ್ಲಿ ಬರ, ಅತಿವೃಷ್ಟಿಯಿಂದ ಬೆಳೆ ನಷ್ಟ ಅನುಭವಿಸಿದ ರೈತರು, ಇತ್ತೀಚೆಗೆ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಮತ್ತೆ ತೋಟಗಾರಿಕೆ ಬೆಳೆಯತ್ತ ಆಸಕ್ತಿ ತೋರುತ್ತಿದ್ದಾರೆ. ಇದಕ್ಕೆ ಸಾಕ್ಷಿಯಂಬಂತೆ ಜಿಲ್ಲೆಯಲ್ಲಿ 6 ವರ್ಷಗಳ ಹಿಂದೆ 25 ಸಾವಿರ ಹೆಕ್ಟೇರ್ ತೋಟಗಾರಿಕೆ ಪ್ರದೇಶ ಇತ್ತು. ಆದರೆ ಪ್ರಸ್ತುತ ಹನಿ ನೀರಾವರಿ, ತುಂತುರು ನೀರಾವರಿ ಮೂಲಕ 40 ಸಾವಿರ ಹೆಕ್ಟೇರ್ ಪ್ರದೇಶದಷ್ಟು ಕ್ಷೇತ್ರ ದಲ್ಲಿ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತಿದೆ. ಇದಲ್ಲದೇ ಗ್ರಾಮೀಣ ಪ್ರದೇಶದ ಜನರು ಸಹಿತ ಕೂಲಿ ಕೆಲಸಕ್ಕೆ ಬರುವುದು ಕಡಿಮೆಯಾಗುತ್ತಿದೆ. ನಿತ್ಯದ ಕೂಲಿ ವೆಚ್ಚ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರೈತ ಸಮೂಹವು ಕೆಲಸಗಾರರ ಸಮಸ್ಯೆಯನ್ನು ಎದುರಿಸಿ ಕಬ್ಬು, ಬಾಳೆ, ಮಾವು, ಪೇರಲ ಸೇರಿದಂತೆ ಇತರೆ ಬೆಳೆಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ನಿರ್ವಹಣೆ ವೆಚ್ಚವು ಕಡಿಮೆಯಾಗಲಿದೆ ಎನ್ನುವುದು ರೈತರ ಲೆಕ್ಕಾಚಾರ.
ತೋಟಗಾರಿಕೆಯತ್ತ ಯುವಕರ ಚಿತ್ತ: ಪ್ರಸ್ತುತ ವಿದ್ಯಾವಂತರು, ಯುವಕರು, ಐಟಿ-ಬಿಟಿಯಲ್ಲಿ ಕೆಲಸ ಮಾಡುವವರು ಒತ್ತಡದ ಬದುಕಿಗೆ ಬೇಸತ್ತು ನಗರದಿಂದ ದೂರ ಉಳಿದು ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ನಗರ ಪ್ರದೇಶದಲ್ಲಿ ಇನ್ನೊಬ್ಬರ ಮುಂದೆ ಕೈ ಕಟ್ಟಿ ನಿಂತು ವೇತನ ಪಡೆಯುವುದಕ್ಕಿಂತ ನಮ್ಮ ಹೊಲದಲ್ಲಿ ನೆಮ್ಮದಿಯಿಂದ ಕೃಷಿ ಮಾಡಿಕೊಂಡು ಜೀವನ ಸಾಗಿಸೋಣ ಎಂದು ಹಲವು ಯುವಕರು ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಜೊತೆಗೆ ತಂತ್ರಜ್ಞಾನ ಬಳಕೆ ಮಾಡಿಕೊಂಡು ಕೃಷಿಯಲ್ಲಿ ಆದಾಯ ದ್ವಿಗುಣಕ್ಕೂ ಒತ್ತು ನೀಡುತ್ತಿದ್ದಾರೆ. ಕೃಷಿಯ ಜೊತೆ ಜೊತೆಗೆ ಜೇನು ಸಾಕಾಣಿಕೆ, ಹೈನುಗಾರಿಕೆ, ಕುರಿ, ಮೇಕೆ, ಕೋಳಿ ಸಾಕಾಣಿಕೆ ಮಾಡಿ ತೋಟಗಾರಿಕೆಯೊಂದಿಗೆ ಉಪ ಕಸುಬುಗಳಲ್ಲೂ ಆದಾಯ ವೃದ್ಧಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಒಟ್ಟಿನಲ್ಲಿ ಜಿಲ್ಲೆಯ ರೈತ ಸಮೂಹ ಸರ್ಕಾರದ ವಿವಿಧ ಯೋಜನೆಗಳಡಿ ಸಾಲ, ಸಹಾಯಧನ ದ ಸೌಲಭ್ಯ ಪಡೆದು ತೋಟಗಾರಿಕೆ ಕ್ಷೇತ್ರದತ್ತ ಒಲವು ತೋರಿದೆ.
ದತ್ತು ಕಮ್ಮಾರ