Advertisement

ಅಜ್ಜನ ಜಾತ್ರೆಗೆ ವಿದೇಶಿ ದಂಪತಿಯಿಂದ ಚಾಲನೆ

10:31 AM Jan 12, 2019 | Team Udayavani |

ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳವೆಂದೇ ಖ್ಯಾತಿ ಪಡೆದ ಇಲ್ಲಿಯ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ವಿದೇಶಿ ದಂಪತಿ ಚಾಲನೆ ನೀಡಲಿದ್ದಾರೆ. ಕೆನಡಾದ ಮ್ಯಾಥ್ಯೂಪೌರ್ಟಿಯರ್‌ ದಂಪತಿ ಕರ್ನಾಟಕದಲ್ಲಿ ಸಂಗೀತ ಶಾಲೆಯೊಂದನ್ನು ತೆರೆದು 300ಕ್ಕೂ ಹೆಚ್ಚು ಮಕ್ಕಳಿಗೆ ಊಟ-ವಸತಿಯೊಂದಿಗೆ ಉಚಿತ ಶಿಕ್ಷಣ ನೀಡಿ ಹೆಸರು ಮಾಡಿದ್ದಾರೆ.

Advertisement

ಈ ದಂಪತಿ ಭಾರತಕ್ಕೆ ಬಂದು ರಾಮಕೃಷ್ಣ ಮಿಷನ್‌ನಲ್ಲಿ ಕೆಲ ದಿನಗಳ ಕಾಲ ಅಧ್ಯಾತ್ಮ ಮತ್ತು ಯೋಗ ಕಲಿತಿದ್ದಾರೆ. ಎರಡು ವರ್ಷಗಳ ಕಾಲ ಪಶ್ಚಿಮ ಬಂಗಾಳದ ರವೀಂದ್ರನಾಥ ಠ್ಯಾಗೋರ ಅವರ ಶಾಂತಿನಿಕೇತನದಲ್ಲಿ ಪತ್ನಿ ಹಾಗೂ ತಾವು ವಿದ್ಯಾರ್ಥಿಗಳಾಗಿದ್ದರು. ಕಾಶಿಯಲ್ಲಿ ಕೆಲ ದಿನ ಸಂಗೀತ ಅಭ್ಯಾಸ ಮಾಡಿದ ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಮಲ್ಲಿಕಾರ್ಜುನ ಮನ್ಸೂರ ಅವರ ಪುತ್ರ ರಾಜಶೇಖರ ಮನ್ಸೂರ ಅವರಲ್ಲಿ ಶಾಸ್ತ್ರೀಯ ಸಂಗೀತದ ಅಭ್ಯಾಸ ಮಾಡಿದ್ದಾರೆ.

ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕೆಂಬ ಆಸೆ ಮ್ಯಾಥ್ಯೂ ಪೌರ್ಟಿಯರ್‌ ಅವರಿಗೆ ಮೊಳಕೆಯೊಡೆದು ತಮ್ಮ ಸಹೋದರನ ಸಹಾಯದಿಂದ ಧಾರವಾಡ ಹತ್ತಿರ ಕಲಕೇರಿ ಗ್ರಾಮದ 5 ಎಕರೆ ಸ್ಥಳದಲ್ಲಿ 2003ರಲ್ಲಿ ಒಂದು ಸಂಗೀತ ವಿದ್ಯಾಲಯ ಆರಂಭಿಸಿದ್ದಾರೆ. ಅಲ್ಲಿ ಶಾಸ್ತ್ರೀಯ ಸಂಗೀತ, ತಬಲಾ, ಹಾರ್ಮೋನಿಯಂ, ಬಾನ್ಸೂರಿ, ಸಿತಾರ ಜೊತೆಗೆ ಕನ್ನಡ ಶಾಲೆ ಆರಂಭಿಸಿದರು. ಈಗ ಅಲ್ಲಿ ಸುಮಾರು 300 ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ ಸೇರಿದಂತೆ ಎಲ್ಲ ಸೌಲಭ್ಯ ಕಲ್ಪಿಸಿದ್ದಾರೆ. ಇದಕ್ಕಾಗಿ ಅವರು ಪ್ರತಿ ವರ್ಷ ಲಕ್ಷಾಂತರ ರೂಪಾಯಿ ವಿನಿಯೋಗಿಸುತ್ತಿದ್ದಾರೆ. ತಮ್ಮ ದೇಶದಲ್ಲಿ ದೇಣಿಗೆ ಸಂಗ್ರಹಿಸಿಕೊಂಡು ಬಂದು ಇಲ್ಲಿ ಶಾಲೆ ನಡೆಸುತ್ತಿರುವುದು ವಿಶೇಷ. ವಿದ್ಯಾರ್ಥಿಗಳಿಗೆ ಸೂಕ್ತ ವಾತಾವರಣ ಇರಬೇಕು ಎನ್ನುವ ಕಾರಣಕ್ಕೆ ಕಲಕೇರಿ ಗ್ರಾಮದ ಕೆರೆಯ ದಡದಲ್ಲಿ ಜನರ ಸಹಯೋಗದಲ್ಲಿ ಕಟ್ಟಡ ನಿರ್ಮಿಸಿದ್ದಾರೆ.

ಸಂಗೀತ ಹಾಗೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿದ್ದಾರೆ. ಹತ್ತಾರು ಶಿಕ್ಷಕರನ್ನು ನೇಮಿಸಿಕೊಂಡಿದ್ದಾರೆ. ಕೆನಡಾ ಸೇರಿದಂತೆ ನಾನಾ ದೇಶಗಳ 15 ಜನ ಸ್ವಯಂ ಸೇವಕರು ಇಲ್ಲಿ ನೆಲೆಸಿದ್ದು, ಇಲ್ಲಿಯ ಉಸ್ತುವಾರಿ ಮತ್ತು ಮಕ್ಕಳ ಪಾಲನೆ, ಪೋಷಣೆ ಮಾಡುತ್ತಿದ್ದಾರೆ. ಕಂಪ್ಯೂಟರ್‌ ಸೇರಿದಂತೆ ಆಧುನಿಕ ಶಿಕ್ಷಣಕ್ಕೂ ವಿದ್ಯಾರ್ಥಿಗಳನ್ನು ಅಣಿಗೊಳಿಸುತ್ತಾರೆ. ಇಲ್ಲಿ ಓದಿದ ಮತ್ತು ಸಂಗೀತ ಕಲಿತ ಅದೆಷ್ಟೋ ಮಕ್ಕಳು ಈಗ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ.

ಖರ್ಚು ವೆಚ್ಚ: ಕೇವಲ ಹತ್ತನೇ ತರಗತಿಯವರೆಗೆ ಮಾತ್ರವಲ್ಲ ಇಲ್ಲಿ ಕಲಿತ ವಿದ್ಯಾರ್ಥಿಗಳಿಗೆ ನಂತರವೂ ಪಿಯುಸಿ, ಪದವಿ ಶಿಕ್ಷಣವನ್ನು ಧಾರವಾಡದಲ್ಲಿ ಕೊಡಿಸುತ್ತಾರೆ. ಅನೇಕ ವಿದ್ಯಾರ್ಥಿಗಳು ಸ್ನಾತಕೋತ್ತರ ಶಿಕ್ಷಣವನ್ನೂ ಪಡೆಯುತ್ತಿದ್ದಾರೆ. ನಮ್ಮ ದೇಶದಲ್ಲಿಯೇ ಜನಿಸಿ, ಇಲ್ಲಿಯ ಸಂಪತ್ತನ್ನು ಅನುಭವಿಸಿದರೂ ದೇಶಕ್ಕಾಗಿ ಸೇವೆ ಮಾಡುವವರು ತುಂಬಾ ವಿರಳ. ಹೀಗಿರುವಾಗ ತನ್ನ ದೇಶದಲ್ಲಿ ದುಡಿದು ತಂದ ಸಂಪತ್ತನ್ನು ನಮ್ಮ ದೇಶದ, ವಿಶೇಷವಾಗಿ ಕನ್ನಡ ಮಕ್ಕಳಿಗಾಗಿ ಉಪಯೋಗಿಸುತ್ತಿದ್ದಾರೆ. ಈ ವಿದೇಶಿ ದಂಪತಿಗೆ ಈ ಬಾರಿ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲು ಗವಿಸಿದ್ಧೇಶ್ವರ ಶ್ರೀಗಳು ಆಹ್ವಾನಿಸಿರುವುದು ಮತ್ತಷ್ಟು ವಿಶೇಷತೆ ಪಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next